ಪ್ರಾತಿನಿಧಿಕ ಚಿತ್ರ
ಕಾಸರಗೋಡು: ಜಿಲ್ಲೆಯಲ್ಲಿ ಸುರಿದ ಬಿರುಸಿನ ಗಾಳಿಮಳೆಗೆ ವಿವಿಧೆಡೆ ಹಾನಿ ಸಂಭವಿಸಿದೆ. ಕಡಲ್ಕೊರೆತ ತೀವ್ರವಾಗಿದ್ದು ಮರಗಳು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಮೊಟಕುಂಟಾಗಿದೆ.
ಅಂಗಡಿಮೊಗರು ಸರ್ಕಾರಿ ಶಾಲೆ ಬಳಿ ಗುಡ್ಡ ಕುಸಿದಿದೆ. ಕುಂಬಳೆ ಬದ್ರಿಯಾ ನಗರದ ಇಬ್ರಾಹಿಂ ಅವರ ಮನೆಯ ಹೆಂಚುಗಳು ಗಾಳಿಗೆ ಹಾರಿಹೋಗಿವೆ. ಮನೆಯೊಳಗೆ ನೀರು ತುಂಬಿಕೊಂಡಿದ್ದು ₹ 50 ಸಾವಿರ ನಷ್ಟ ಅಂದಾಜಿಸಲಾಗಿದೆ. ಮಂಜೇಶ್ವರ ಬಳಿಯ ಆನೆಕಲ್ಲಿನಲ್ಲಿ ಅಕೇಷ್ಯಾ ಮರಗಳು ಬುಡಕಳಚಿ ಬಿದ್ದು ವಿದ್ಯುತ್ ತಂತಿ ಕಡಿದುಹೋಗಿದೆ. ಬೇಳ-ಕಿಳಿಂಗಾರು ರಸ್ತೆಯಲ್ಲಿ ಮರ ಉರುಳಿ ರಸ್ತೆ ಸಂಚಾರ ಮೊಟಕುಗೊಂಡಿದೆ. ಮೊಗ್ರಾಲ್ ಪುತ್ತೂರು ರಸ್ತೆ ಜಲಾವೃತವಾಗಿದೆ. ಪುಲ್ಲೂರು ರಸ್ತೆಗೆ ತೆಂಗಿನಮರ ಬುಡಕಳಚಿಕೊಂಡು ಬಿದ್ದು ಸಂಚಾರ ಮೊಟಕುಗೊಂಡಿದೆ. ವಿದ್ಯುತ್ ತಂತಿಯೂ ಕಡಿದುಹೋಗಿದೆ.
ಮನೆ ಮೇಲೆ ಬಿದ್ದ ಮರ ತೆರವು
ಬದಿಯಡ್ಕ: ಎಣ್ಮಕಜೆ ಗ್ರಾಮ ಪಂಚಾಯತಿನ ಸಾಯ ಎಂಬಲ್ಲಿನ ಕೂಟೇಲು ಮಂಜುನಾಥ ಆಚಾರ್ಯರ ಮನೆಯ ಮೇಲೆ ಬಿದ್ದ ಮರಗಳನ್ನು ಕೇಪು ಉಳ್ಳಾಳ್ತಿ ಶೌರ್ಯ ವಿಪತ್ತು ದಳದ ಕಾರ್ಯಕರ್ತರು ತೆರವುಗೊಳಿಸಿದರು. ಕಾರ್ಯಾಚರಣೆಯಲ್ಲಿ ಘಟಕದ ಸಂಯೋಜಕಿ ಗಾಯತ್ರಿ, ಮೇಲ್ವಿಚಾರಕ ಜಗದೀಶ್ ಪೂಜಾರಿ, ಕಾರ್ಯಕರ್ತರಾದ ಸತೀಶ, ಮೀನಾಕ್ಷಿ, ಗಾಯತ್ರಿ, ಮಹಾಲಿಂಗ ಪಾಟಾಳಿ, ಕುಶಾಲಪ್ಪ, ಮಾಲತಿ, ಈಶ್ವರ, ಲೋಹಿತ್, ಆನಂದ ಬಂಗೇರ, ಚಂದ್ರಹಾಸ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.