ಬೆಳ್ತಂಗಡಿ: ಬೆಂಗಳೂರು– ಮಂಗಳೂರು ನಡುವೆ ರಾತ್ರಿ ಸಂಚಾರಕ್ಕೆ ಪ್ರಸ್ತುತ ಚಾರ್ಮಾಡಿ ಘಾಟಿ ಏಕೈಕ ಮಾರ್ಗವಾಗಿದ್ದು ಗುರುವಾರ ಭಾರಿ ಸಂಖ್ಯೆಯಲ್ಲಿ ವಾಹನಗಳ ಓಡಾಟ ಕಂಡುಬಂತು.
ಸರಕು ಸಾಗಣೆ ಸಹಿತ ಸಾವಿರಾರು ವಾಹನಗಳು ಚಾರ್ಮಾಡಿ ಘಾಟಿ ಮೂಲಕ ಸಾಗುತ್ತಿವೆ. ಘಾಟಿಯಲ್ಲಿ ಹಾಗೂ ಹೆದ್ದಾರಿ ವಿಸ್ತರಣೆ ಕಾರಣಕ್ಕೆ ಅಗೆದು ಹಾಕಿರುವ ಚಾರ್ಮಾಡಿಯಿಂದ ಪುಂಜಾಲಕಟ್ಟೆಯವರೆಗಿನ ರಸ್ತೆಯಲ್ಲಿ ಹೈರಾಣಾಗುತ್ತಿದ್ದ ವಾಹನ ಸವಾರರು ಹೆಚ್ಚಿನ ವಾಹನ ಒತ್ತಡದಿಂದ ಇನ್ನಷ್ಟು ಸಮಸ್ಯೆ ಎದುರಿಸುವಂತಾಗಿದೆ. ಕೆಲವೆಡೆ ಕಿರಿದಾಗಿರುವ ರಸ್ತೆಯಲ್ಲಿ ಎರಡು ಬಸ್‌ಗಳು ಏಕಕಾಲದಲ್ಲಿ ಎದುರು–ಬದುರು ಸಂಚರಿಸಲು ಪ್ರಯಾಸ ಪಡುವಂತಾಗಿದೆ.
ಹೆದ್ದಾರಿ ಕಾಮಗಾರಿಗೆ ರಸ್ತೆ ಅಗೆದು ಹಾಕಿರುವ ಸ್ಥಳಗಳಲ್ಲಿ ಕೆಲವು ವಾಹನಗಳು ಕೆಸರಿನಲ್ಲಿ ಹೂತು ನಿಂತಿದ್ದವು. ನಿಡಿಗಲ್, ಮುಂಡಾಜೆಯಲ್ಲಿ ಹಲವು ಕಿ.ಮೀ ದೂರದವರೆಗೂ ವಾಹನಗಳ ಸಾಲು ಇತ್ತು. ಮುಂಡಾಜೆಯಲ್ಲಿ ರಸ್ತೆಯಲ್ಲಿ ದೊಡ್ಡ ಹೊಂಡ ನಿರ್ಮಾಣವಾಗಿ ವಾಹನ ಸವಾರರು ಸಂಕಷ್ಟ ಅನುಭವಿಸಿದರು. ನಿಡಿಗಲ್ ಬಳಿ ಲಾರಿಯೊಂದು ಕೆಸರಿನಲ್ಲಿ ಹೂತು ಹೋಗಿ ಸಮಸ್ಯೆ ಉಂಟಾಯಿತು. ಬೆಳ್ತಂಗಡಿ ಟ್ರಾಫಿಕ್ ಪೊಲೀಸರು ಸುಗಮ ಸಂಚಾರಕ್ಕೆ ಸಹಕರಿಸಿದರು. ಹೊಂಡ ಹಾಗೂ ಕೆಸರು ಇರುವ ಸ್ಥಳಗಳಿಗೆ ಜಲ್ಲಿ ಹಾಕಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.