ಮಂಗಳೂರು: ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಇಕ್ಕೆಗಳಲ್ಲಿ ಅನೇಕ ಕಡೆಗಳಲ್ಲಿ ರಸ್ತೆ ಅತಿಕ್ರಮಿಸಿ ಅನಧಿಕೃತ ಅಂಗಡಿಗಳು ತಲೆ ಎತ್ತಿದ್ದು, ಇವುಗಳ ತೆರವಿಗೆ ಕ್ರಮವಾಗಬೇಕು ಎಂಬ ಕುರಿತು ಮಂಗಳವಾರ ಇಲ್ಲಿ ನಡೆದ ದಿಶಾ ಸಭೆಯಲ್ಲಿ ಚರ್ಚೆ ನಡೆಯಿತು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ನಡೆದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯ ರಾಜೀವ ಶೆಟ್ಟಿ ವಿಷಯ ಪ್ರಸ್ತಾಪಿಸಿ, ಫರಂಗಿಪೇಟೆ, ಸುರತ್ಕಲ್, ಕೂಳೂರು ಸೇರಿದಂತೆ ಹಲವಾರು ಕಡೆಗಳಲ್ಲಿ ಅಂಗಡಿಗಳು ತಲೆ ಎತ್ತಿವೆ. ಇದರಿಂದ ಪಾದಚಾರಿಗಳು, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಇವುಗಳ ಸಮೀಕ್ಷೆ ನಡೆಸಿ ತೆರವುಗೊಳಿಸಲು ಕ್ರಮವಾಗಬೇಕು ಎಂದು ಸಂಸದರು ಹೇಳಿದಾಗ, ಜಾಗ ಗುರುತಿಸಿ ಕೊಟ್ಟರೆ, ಒಂದು ತಿಂಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಕೆ ಹೇಳಿದರು. ವರದಿ ಸಿದ್ಧಪಡಿಸಿ ನಗರ ಪೊಲೀಸ್ ಕಮಿಷನರ್ ಹಾಗೂ ಎಸ್‌ಪಿಗೆ ನೀಡುವಂತೆ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಮೊಹಮ್ಮದ್ ಜಾವೇದ್ ಅಜ್ಮಿ ಅವರಿಗೆ ಸಂಸದರು ತಿಳಿಸಿದರು. ಎರಡು ತಿಂಗಳಲ್ಲಿ ವರದಿ ನೀಡುವುದಾಗಿ ಅಜ್ಮಿ ಹೇಳಿದರು.
ಕೇಂದ್ರ ಸರ್ಕಾರದ ಯೋಜನೆಯಡಿ ಪ್ರಾದೇಶಿಕ ಚಾಲನಾ ತರಬೇತಿ ಕೇಂದ್ರ ಸ್ಥಾಪನೆಗೆ ಸಂಬಂಧಿಸಿ ಜಾಗ ಸೂಚಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಮಾರ್ಚ್‌ನಲ್ಲೇ ಪತ್ರ ಬರೆಯಲಾಗಿದೆ. ಈವರೆಗೂ ಉತ್ತರ ಬಂದಿಲ್ಲ ಎಂದು ಸಂಸದರು ಅಸಮಾಧಾನ ವ್ಯಕ್ತಪಡಿಸಿದರು.
ಮೂರು ಸ್ಥಳ: ಕೇಂದ್ರ ಸರ್ಕಾರದ ಪಿಎಂ ಇ-ಡ್ರೈವ್ ಯೋಜನೆ ಅಡಿ ಮಂಗಳೂರಿಗೆ 100 ಎಲೆಕ್ಟ್ರಿಕ್ ಬಸ್‌ಗಳು ದೊರೆಯಲಿದ್ದು, ಅವುಗಳ ನಿಲುಗಡೆಗೆ ಜಾಗ ನಿಗದಿ ಮಾಡಬೇಕು ಎಂದು ಸಂಸದರು ಹೇಳಿದರು. ತಿರುವೈಲು, ಮುಡಿಪು, ಪಂಪ್‌ವೆಲ್ ಈ ಮೂರು ಸ್ಥಳಗಳನ್ನು ತಾತ್ಕಾಲಿಕವಾಗಿ ಗುರುತಿಸಲಾಗಿದೆ ಎಂದು ಎಡಿಸಿ ಸಂತೋಷ್‌ಕುಮಾರ್ ಹೇಳಿದಾಗ, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ, ಜಾಗ ನಿಗದಿಪಡಿಸಬೇಕು ಎಂದು ಶಾಸಕರು ಸಲಹೆ ನೀಡಿದರು.
ಎಜೆ ಆಸ್ಪತ್ರೆಯ ಎದುರಿನ ಬಸ್ ಡಿಪೊವನ್ನು ಬೇರೆಡೆಗೆ ಸ್ಥಳಾಂತರಿಸಿ, ಅಲ್ಲಿ ಬಸ್ ನಿಲ್ದಾಣ ಮಾಡಬಹುದು, ಬಸ್ ನಿಲ್ದಾಣ ನಗರಕ್ಕೆ ಸಮೀಪ ಇದ್ದಾಗ ಮಾತ್ರ ಜನರಿಗೆ ಅನುಕೂಲ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ನಿರಂತರ ಮಳೆಯಾದಾಗ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಲಿನ ಗ್ರಾಮಗಳ ಮನೆಗಳಿಗೆ ನೀರು ನುಗ್ಗಿ, ಜನರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆ ಬಗ್ಗೆ ಎನ್‌ಐಟಿಕೆ ತಜ್ಞರು ಅಧ್ಯಯನ ನಡೆಸಿ ವರದಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಸಭೆ ನಡೆಸಿ, ಈ ಸಮಸ್ಯೆ ಇತ್ಯರ್ಥಗೊಳಿಸಬೇಕಾಗಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಸಲಹೆ ನೀಡಿದರು. ಶೀಘ್ರ ಸಭೆ ನಡೆಸುವುದಾಗಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಭರವಸೆ ನೀಡಿದರು.
ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ರಸ್ತೆ, ಕುಡಿಯುವ ನೀರಿನ ಸೌಲಭ್ಯ ಅಳವಡಿಸಲಾಗಿದ್ದು, ವಿದ್ಯುತ್ ಕಾಮಗಾರಿ ಮಾತ್ರ ಬಾಕಿ ಇದೆ. ಸೆಪ್ಟೆಂಬರ್ ವೇಳೆಗೆ ಮಳಿಗೆಗಳ ವಿತರಣೆ ಮಾಡಲು ಯೋಚಿಸಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿ ತಿಳಿಸಿದರು.
ಏಕಲವ್ಯ ವಸತಿ ಶಾಲೆಗೆ ಬೆಳ್ತಂಗಡಿ ತಾಲ್ಲೂಕಿನ ಇಂದಬೆಟ್ಟು ಗ್ರಾಮದಲ್ಲಿ ಜಾಗ ಗುರುತಿಸಲು ತಿಳಿಸಲಾಗಿದೆ. ಅರಣ್ಯ ಜಮೀನಿನ ನೆಪವೊಡ್ಡಿ ಅದನ್ನು ತಣ್ಣೀರುಪಂತಕ್ಕೆ ಸ್ಥಳಾಂತರಿಸುವುದು ಸರಿಯಲ್ಲ. ಸ್ಥಳೀಯರಿಗೆ ಅನುಕೂಲವಾಗುವಂತೆ ರೂಪಿಸಿದ ಯೋಜನೆಯನ್ನು ಯಾರನ್ನು ಕೇಳಿ ಬದಲಾಯಿಸಿದ್ದೀರಿ ಎಂದು ಹರೀಶ್ ಪೂಂಜ ಅಸಮಾಧಾನ ವ್ಯಕ್ತಪಡಿಸಿದರು.
ಕಾಲೇಜಿಗೆ ನೋಟಿಸ್: ಖಂಡೇವು ನಂದಿನಿ ನದಿಗೆ ಸಮೀಪದ ಮೆಡಿಕಲ್ ಕಾಲೇಜು ಹಾಗೂ ಪಾಲಿಕೆಯ ಚೇಳ್ಯಾರು ಎಸ್‌ಟಿಪಿ ಘಟಕದ ಒಳಚರಂಡಿ ನೀರು ಸೇರುತ್ತಿದ್ದು, ನದಿ ನೀರು ಕಲುಷಿತಗೊಂಡು ಕಪ್ಪು ಬಣ್ಣಕ್ಕೆ ತಿರುಗಿದೆ. ಮೆಡಿಕಲ್ ಕಾಲೇಜಿನ ಮುಖ್ಯಸ್ಥರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ. ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ, ಸಮಸ್ಯೆ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಒತ್ತಾಯಿಸಿದರು.
ಪಾಲಿಕೆಯ ಮುಚ್ಚೂರು ಎಸ್‌ಟಿಪಿ ಹಳೆಯದಾಗಿದ್ದು, ಅದನ್ನು ದುರಸ್ತಿಗೊಳಿಸಲಾಗಿದೆ. ಹೊಸ ಎಸ್‌ಟಿಪಿ ನಿರ್ಮಾಣಕ್ಕೆ ಅಂದಾಜು ₹100 ಕೋಟಿ ಅನುದಾನ ಬೇಕಾಗುತ್ತದೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ರವಿಚಂದ್ರ ನಾಯಕ್ ಹೇಳಿದರು. ಮೆಡಿಕಲ್ ಕಾಲೇಜಿಗೆ ನೋಟಿಸ್ ಜಾರಿಗೊಳಿಸಿದ್ದು, ಅದಕ್ಕೂ ಪ್ರತಿಕ್ರಿಯೆ ಬರದ ಕಾರಣ ಈ ಪ್ರಕರಣವನ್ನು ಬೆಂಗಳೂರು ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ ಇದ್ದರು.
- ‘ಮಂಗಳೂರು’ ಮರುನಾಮಕರಣಕ್ಕೆ ಆಗ್ರಹಿಸಲು ನಿರ್ಧಾರ
‘ಮಂಗಳೂರು’ ಬ್ರ್ಯಾಂಡ್ ಆಗಿ ರೂಪುಗೊಂಡಿದ್ದು ಜಾಗತಿಕ ಮಟ್ಟದಲ್ಲಿ ಈ ಹೆಸರಿಗೆ ಇನ್ನಷ್ಟು ಹೊಳಪು ನೀಡುವ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ‘ಮಂಗಳೂರು’ ಆಗಿ ಮರುನಾಮಕರಣ ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಲು ದಿಶಾ ಸಭೆ ನಿರ್ಣಯಿಸಿತು. ಶಾಸಕ ಹರೀಶ್ ಪೂಂಜ ಈ ವಿಷಯ ಪ್ರಸ್ತಾಪಿಸಿದಾಗ ಎಲ್ಲ ಜನಪ್ರತಿನಿಧಿಗಳು ಅನುಮೋದನೆ ನೀಡಿದರು.
ಆನೆ ಶಿಬಿರ: ಪ್ರವಾಸೋದ್ಯಮಕ್ಕೆ ಬಲ
ವಿವಿಧ ತಾಲ್ಲೂಕುಗಳಲ್ಲಿ ಆನೆ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆನೆ ಶಿಬಿರ ಸ್ಥಾಪನೆ ಮಾಡಬೇಕೆಂಬ ವಿಚಾರ ದಿಶಾ ಸಭೆಯಲ್ಲಿ ವ್ಯಕ್ತವಾಯಿತು. ಶಾಸಕಿ ಭಾಗೀರಥಿ ಮುರುಳ್ಯ ವಿಷಯ ಪ್ರಸ್ತಾಪಿಸಿ ಸುಳ್ಯ ಭಾಗದಲ್ಲಿ ಆನೆ ಹಾಗೂ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ನಿಯಂತ್ರಣಕ್ಕೆ ಕ್ರಮವಹಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಫ್ ಆ್ಯಂಟನಿ ಮರಿಯಪ್ಪ ‘ಇದಕ್ಕಾಗಿ ಪ್ರತ್ಯೇಕ ತಂಡ ರಚಿಸಲಾಗಿದೆ. ಒಟ್ಟು 9 ಕಿ.ಮೀ ಟೆಂಟೆಕಲ್ ಬೇಲಿ ಅಳವಡಿಸಲಾಗುತ್ತಿದೆ’ ಎಂದರು. ಶಾಸಕ ಹರೀಶ್ ಪೂಂಜ ಮಾತನಾಡಿ ಧರ್ಮಸ್ಥಳ ಸಮೀಪ ಆನೆ ಶಿಬಿರ ಮಾಡಲು 100 ಎಕರೆ ಜಾಗ ಇದೆ’ ಎಂದರು. ‘ಆನೆ ಶಿಬಿರ ಸ್ಥಾಪನೆ ಸಂಬಂಧ ಕಳೆದ ವರ್ಷವೇ ಪ್ರಸ್ತಾವ ಸಲ್ಲಿಸಲಾಗಿದ್ದು ಅನುದಾನದ ಲಭ್ಯತೆ ಆಧರಿಸಿ ಸರ್ಕಾರ ಮಂಜೂರು ಮಾಡುತ್ತದೆ. ಇದರಿಂದ ಪ್ರವಾಸೋದ್ಯಮಕ್ಕೂ ಪುಷ್ಟಿ ಸಿಗುತ್ತದೆ’ ಎಂದು ಡಿಸಿಎಫ್ ಉತ್ತರಿಸಿದರು.
ಹಬ್ಬಗಳಿಗೆ ನಿರ್ಬಂಧ: ಅಸಮಾಧಾನ
ಬರಲಿರುವ ಗಣೇಶ ಚತುರ್ಥಿ ನವರಾತ್ರಿ ಹಬ್ಬಗಳಿಗೆ ಸಂಬಂಧಿಸಿ ಪೊಲೀಸ್ ಇಲಾಖೆ ಅನೇಕ ನಿರ್ಬಂಧಗಳನ್ನು ವಿಧಿಸಿ ನಿಯಮಗಳನ್ನು ರೂಪಿಸಿದೆ. ಕನಿಷ್ಠ ರಾತ್ರಿ 12 ಗಂಟೆಯವರೆಗೆ ಧ್ವನಿವರ್ಧಕ ಬಳಸಿ ಕಾರ್ಯಕ್ರಮ ನಡೆಸಲು ಅವಕಾಶ ನೀಡಬೇಕು. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಕ್ರಮ. ಕಾರ್ಯಕ್ರಮದ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸೂಚಿಸಲಾಗಿದೆ. ಇದು ಸಂಘಟಕರಿಗೆ ಹೊರೆಯಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಬೇಕು ಎಂದು ಭರತ್ ಶೆಟ್ಟಿ ಹೇಳಿದಾಗ ಶಾಸಕರಾದ ಉಮಾನಾಥ ಕೋಟ್ಯಾನ್ ವೇದವ್ಯಾಸ ಕಾಮತ್ ಭಾಗೀರಥಿ ಮುರುಳ್ಯ ದನಿಗೂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.