ADVERTISEMENT

ಮಂಗಳೂರು ತಾಲ್ಲೂಕಿನಲ್ಲಿ ಹಿಂದು ಸಂಗಮ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 7:01 IST
Last Updated 24 ಜನವರಿ 2026, 7:01 IST
ಪತ್ರಿಕಾಗೋಷ್ಠಿಯಲ್ಲಿ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿದರು
ಪತ್ರಿಕಾಗೋಷ್ಠಿಯಲ್ಲಿ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿದರು   

ಮಂಗಳೂರು: ತಾಲ್ಲೂಕಿನ 7 ಮಂಡಲಗಳಲ್ಲಿ ಹಿಂದೂ ಸಂಗಮ ಜ.25 ಮತ್ತು ಫೆ.1ರಂದು ನಡೆಯಲಿದೆ. ಎಡಪದವು ಮತ್ತು ಪೆರ್ಮಂಕಿ ಮಂಡಲಗಳಲ್ಲಿ  25ರಂದು, ಮಳಲಿ, ಗುರುಪುರ, ಎಕ್ಕಾರು, ಕೆಂಜಾರು ಮತ್ತು ಬಜಪೆ ಮಂಡಲದಲ್ಲಿ ಫೆ.1ರಂದು ಸಂಗಮ ನಿಗದಿ ಮಾಡಲಾಗಿದೆ ಎಂದು ಹಿಂದು ಸಂಗಮ  ಆಯೋಜನ ಸಮಿತಿಯ ಗೌರವಾಧ್ಯಕ್ಷ, ಶ್ರೀ ಕ್ಷೇತ್ರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ತಿಳಿಸಿದರು.

ಶುಕ್ರವಾರ ಪತ್ರಿಕಾಗೋ‌ಷ್ಠಿಯಲ್ಲಿ ಮಾತನಾಡಿದ ಅವರು ಕೊಂಪದವು, ಮುಚ್ಚೂರು, ಎಡಪದವು, ಬಡಗ ಎಡಪದವು ಗ್ರಾಮಗಳನ್ನು ಒಳಗೊಂಡ ಎಡಪದವು ಮಂಡಲದ ಕಾರ್ಯಕ್ರಮ ಸ್ವಾಮಿ ವಿವೇಕಾನಂದ ವಿದ್ಯಾಲಯದಲ್ಲಿ ನಡೆಯಲಿದ್ದು ಎಡಪದವು ಶ್ರೀರಾಮ ಮಂದಿರದಿಂದ ಶೋಭಾಯಾತ್ರೆ ನಡೆಯಲಿದೆ ಎಂದರು. 

ಬಡಗುಳಿಪಾಡಿ, ತೆಂಕುಳಿಪಾಡಿ, ಮೊಗರು, ಕಿಲೆಂಜಾರು, ಕುಳವೂರು, ಮುತ್ತೂರು, ಗ್ರಾಮಗಳ ಮಳಲಿ ಮಂಡಲದ ಕಾರ್ಯಕ್ರಮ ನಾರ್ಲಪದವು ಆಳ್ವಾಸ್ ಮೈದಾನದಲ್ಲಿ ನಡೆಯಲಿದ್ದು ಗಂಜಿಮಠ ಮಹಾಗಣಪತಿ ದೇವಸ್ಥಾನದಿಂದ ಶೋಭಾಯಾತ್ರೆ ಆರಂಭವಾಗಲಿದೆ. ಮುಳೂರು, ಅಡ್ಡೂರು, ಕಂದಾವರ, ಕೊಳಂಬೆ, ಆದ್ಯಪಾಡಿ ಗ್ರಾಮಗಳ ಗುರುಪುರ ಮಂಡಲದ ಕಾರ್ಯಕ್ರಮ ಕುಕ್ಕುದಕಟ್ಟೆ ಶ್ರೀ ವೈದ್ಯನಾಥ ಸಭಾಂಗಣದಲ್ಲಿ ನಡೆಯಲಿದ್ದು ಗುರುಪುರ ಜಂಗಮ ಮಠದಿಂದ ಶೋಭಾಯಾತ್ರೆ ಹೊರಡಲಿದೆ ಎಂದು ಅವರು ತಿಳಿಸಿದರು.

ADVERTISEMENT

ನೀರುಮಾರ್ಗ, ಬೊಂಡಂತಿಲ, ಉಳಾಯಿಬೆಟ್ಟು, ಮಲ್ಲೂರು ಗ್ರಾಮಗಳ ಪೆರ್ಮಂಕಿ ಮಂಡಲದ ಕಾರ್ಯಕ್ರಮ ಅರಸು ಮುಂಡತ್ತಾಯ ದೇವಸ್ಥಾನದಲ್ಲಿ ನಡೆಯಲಿದ್ದು ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾಸಮಿತಿ ವಠಾರದಿಂದ ಶೋಭಾಯಾತ್ರೆ ಆರಂಭವಾಗಲಿದೆ. ಬಡಗ ಎಕ್ಕಾರು, ತೆಂಕ ಎಕ್ಕಾರು, ಪೆರ್ಮುದೆ ಗ್ರಾಮಗಳನ್ನು ಒಳಗೊಂಡ ಎಕ್ಕಾರು ಮಂಡಲದ ಕಾರ್ಯಕ್ರಮ ಎಕ್ಕಾರು ಬಂಟರ ಭವನದಲ್ಲಿ ನಡೆಯಲಿದ್ದು ಕೆಂಜಾರು, ಮರವೂರು, ತೋಕೂರು, ಜೋಕಟ್ಟೆ ಗ್ರಾಮಗಳ ಕೆಂಜಾರು ಮಂಡಲದ ಕಾರ್ಯಕ್ರಮ ಮರವೂರಿನ ಪಾಪ್ಯುಲರ್ ಫಾರ್ಮ್ಸ್‌ನಲ್ಲಿ ನಡೆಯಲಿದೆ. ಕರಂಬಾರು ಶ್ರೀ ದೇವಿ ಭಜನಾ ಮಂದಿರದಿಂದ ಶೋಭಾಯಾತ್ರೆ ನಡೆಯಲಿದೆ. ಬಜಪೆ, ಮೂಡುಪೆರಾರ, ಪಡುಪೆರಾರ ಗ್ರಾಮಗಳನ್ನೊಳಗೊಂಡ ಬಜಪೆ ಮಂಡಲದ ಕಾರ್ಯಕ್ರಮ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಬಜಪೆ ಶಕ್ತಿ ಮಂಟಪದಿಂದ ಶೋಭಾಯಾತ್ರೆ ಇರುತ್ತದೆ ಎಂದರು.

ಎಲ್ಲ ಕಾರ್ಯಕ್ರಮಗಳ ಶೋಭಾಯಾತ್ರೆಗಳು ಮಧ್ಯಾಹ್ನ 2.30ಕ್ಕೆ ಆರಂಭವಾಗಲಿವೆ ಎಂದ ಅವರು ವ್ಯಕ್ತಿತ್ವದ ಸಮಗ್ರ ಬದಲಾವಣೆಯ ದೃಷ್ಟಿಯಲ್ಲಿ ಪಂಚಪರಿವರ್ತನ ಎಂಬ ಆಶಯದೊಂದಿಗೆ ಹಿಂದೂ ಸಂಗಮ ಆಯೋಜಿಸಲಾಗುತ್ತಿದೆ. ಹಿಂದುಗಳ ಒಗ್ಗಟ್ಟಿನ ಪ್ರದರ್ಶನವೂ ಇದರಲ್ಲಿ ನಡೆಯಲಿದೆ. ಸಂಗಮದಲ್ಲಿ ಪಾದಸೇವೆ ಮಾಡಲು ಕೆಳಸ್ತರದ ಸಮುದಾಯದವರಿಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಹಿಂದೂ ಸಂಗಮ ಆಯೋಜನ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ನಾರ್ಲ, ಕಾರ್ಯದರ್ಶಿ ಕೃಷ್ಣ ಕಜೆಪದವು, ಉಪಾಧ್ಯಕ್ಷ ರಾಜೀವ ಶೆಟ್ಟಿ ಪೆರ್ಮಂಕಿ,  ಸಂಯೋಜಕ ಕೃಷ್ಣ ಕೊಂಪದವು ಹಾಗೂ ಮಹಿಳಾ ಪ್ರಮುಖ್‌ ಗೀತಾಲಕ್ಷ್ಮಿ ಬಜಪೆ ಪಾಲ್ಗೊಂಡಿದ್ದರು.     

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.