ADVERTISEMENT

ತವರಲ್ಲೇ ಉಳಿದ ಮಂಗಳೂರು ‘ಮದುಮಗಳು’

ರಾಣಿ ಮೀನಿನ ಕೃತಕ ಅಭಾವ ಸೃಷ್ಟಿ ಆರೋಪ: ಬೆಲೆ ಶೇಕಡ 60ರಷ್ಟು ಇಳಿಕೆ; ದಡದಲ್ಲಿ ಲಂಗರು ಹಾಕಿದ ಬೋಟ್‌ಗಳು

ಪ್ರಜಾವಾಣಿ ವಿಶೇಷ
Published 9 ಮೇ 2023, 4:31 IST
Last Updated 9 ಮೇ 2023, 4:31 IST
ರಾಣಿ ಮೀನು –ಪ್ರಜಾವಾಣಿ ಚಿತ್ರ
ರಾಣಿ ಮೀನು –ಪ್ರಜಾವಾಣಿ ಚಿತ್ರ   

ವಿಕ್ರಂ ಕಾಂತಿಕೆರೆ

ಮಂಗಳೂರು: ಮೀನು ಉದ್ಯಮದಲ್ಲಿ ರಫ್ತಿಗೆ  ಸಂಬಂಧಿಸಿದ ‘ರಾಜ’ನೆಂದೇ ಪರಿಗಣಿಸಲಾಗುವ ರಾಣಿ ಅಥವಾ ಮದಿಮಲ್‌ (ಮದುಮಗಳು) ಮೀನು ಕೆಲವು ದಿನಗಳಿಂದ ವಿದೇಶಕ್ಕೆ ಹೋಗದೆ ಇಲ್ಲೇ ಉಳಿದುಕೊಂಡಿದೆ. ಬೇಡಿಕೆ ಇಲ್ಲದ್ದರಿಂದ ಮೀನಿನ ದರ ಶೇಕಡ 60ರಷ್ಟು ಇಳಿಕೆಯಾಗಿದೆ. ಹೀಗಾಗಿ, ಮೀನುಗಾರಿಕೆಯೂ ಬಹುತೇಕ ಸ್ಥಗಿತಗೊಂಡಿದ್ದು, ಬೋಟ್ ಮಾಲೀಕರು ನಷ್ಟವನ್ನು ಲೆಕ್ಕ ಹಾಕುತ್ತ ಕುಳಿತಿದ್ದಾರೆ.

ಇಂಗ್ಲಿಷ್‌ನಲ್ಲಿ Pink Perch ಅಥವಾ Japanese threadfin bream ಎಂದೂ, ಕನ್ನಡದಲ್ಲಿ ರಾಣಿ ಎಂದೂ, ತುಳುವಿನಲ್ಲಿ ಮದಿಮಲ್ ಎಂದೂ ಕರೆಯುವ ಈ ಮೀನಿನ ಮಾಂಸವನ್ನು ಬೇರ್ಪಡಿಸಿ ಸಿಗಡಿ (ಪ್ರಾನ್ಸ್‌), ಏಡಿ (ಕ್ರ್ಯಾಬ್‌) ಮುಂತಾದ ಮೀನಿನ ಮಾಂಸದ ರೀತಿಯಲ್ಲಿ ಅಚ್ಚು ಮಾಡಿ ವಿದೇಶಗಳಿಗೆ ಕಳುಹಿಸಲಾಗುತ್ತದೆ. ಹೀಗಾಗಿ, ಈ ಮೀನನ್ನು ರಫ್ತು ಉದ್ದೇಶಕ್ಕೇ ಹೆಚ್ಚಾಗಿ ಬಳಸಲಾಗುತ್ತದೆ.

ADVERTISEMENT

ಈಗ ಕೆಲವು ದಿನಗಳಿಂದ ರಾಣಿ ಮೀನಿನ ರಫ್ತು ಕಡಿಮೆಯಾಗಿದೆ. ಇದಕ್ಕೆ ಕಾರಣ ಏನೆಂಬುದಕ್ಕೆ ಸ್ಪಷ್ಟ ಉತ್ತರ ನೀಡಲು ಯಾರೂ ತಯಾರಿಲ್ಲ.

‘ಮಂಗಳೂರು ನಗರದಲ್ಲಿ ನೀರಿನ ಅಭಾವ ಕಂಡುಬಂದಿರುವ ಕಾರಣ ಕೈಗಾರಿಕೆಗೆ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಲಾಗಿದೆ. ಹೀಗಾಗಿ, ಮೀನು ಶುಚಿಗೊಳಿಸಿ ಪ್ಯಾಕ್ ಮಾಡಲು ಆಗುತ್ತಿಲ್ಲ. ಈ ಕಾರಣದಿಂದ ರಾಣಿ ಮೀನು ಖರೀದಿಸುವುದನ್ನು ಸ್ಥಗಿತಗೊಳಿಸಿರುವುದಾಗಿ ಏಜೆಂಟರು ಹೇಳುತ್ತಾರೆ. ಆದರೆ, ಇದನ್ನು ಒಪ್ಪಲಾಗದು. ‌ಟ್ಯಾಂಕರ್‌ ನೀರು ಬಳಸಲು ಅವಕಾಶವಿದೆ. ಇದಕ್ಕೆ ತಗಲುವ ವೆಚ್ಚವನ್ನು ದರದಲ್ಲಿ ಸರಿದೂಗಿಸಬಹುದು. ಆದರೆ, ಕೆ.ಜಿಗೆ ₹ 70ರಿಂದ ಏಕಾಏಕಿ ₹ 30ಕ್ಕೆ ಇಳಿಸುವ ಅಗತ್ಯ ಏನಿತ್ತು’ ಎಂದು ಪ್ರಶ್ನಿಸುತ್ತಾರೆ ಬೋಟ್ ಮಾಲೀಕರ ಸಂಘದ ಅಧ್ಯಕ್ಷ ಚೇತನ್ ಬೆಂಗ್ರೆ.

ಮೀನುಗಾರಿಕೆ ಬೋಟ್‌ಗಳ ಮಾಲೀಕರಿಗೆ ಹೆಚ್ಚು ಲಾಭ ತಂದುಕೊಡುವ ಮೀನು ಇದಾಗಿದೆ. 10–12 ದಿನಗಳ ಒಂದು ಸುತ್ತಿನ ಮೀನುಗಾರಿಕೆಯಲ್ಲಿ 6ರಿಂದ 7 ಟನ್ ಮೀನು ಬಲೆಗೆ ಬಿದ್ದರೆ ₹ 7ಲಕ್ಷದಿಂದ ₹ 8 ಲಕ್ಷ ಆದಾಯ ಬರುತ್ತದೆ. ಬೇಸಿಗೆಯಲ್ಲಿ ಮೀನು ಹೆಚ್ಚು ಆಳಕ್ಕೆ ಇಳಿಯುವುದರಿಂದ ‘ಇಳುವರಿ’ ಕಡಿಮೆ. ಈಗ ದರವೂ ಕಡಿಮೆ ಮಾಡಿದ್ದರಿಂದ ಹೆಚ್ಚಿನ ಬೋಟ್‌ಗಳು ದಕ್ಕೆಯಲ್ಲಿ ಲಂಗರು ಹಾಕಿವೆ.

‘ಈ ವರ್ಷದ ಆರಂಭದಿಂದಲೇ ದರ ಕಡಿಮೆಯಾಗುತ್ತ ಬಂದಿದೆ. ಸಬ್ಸಿಡಿ ಇದ್ದರೂ ಬೋಟ್‌ಗಳಿಗೆ ಡೀಸೆಲ್‌ ಹಾಕಲು ದೊಡ್ಡ ಮೊತ್ತ ಬೇಕಾಗುತ್ತದೆ. ಕಾರ್ಮಿಕರ ವೇತನ, ಬೋಟ್ ನಿರ್ವಹಣೆ ಇತ್ಯಾದಿಗಳಿಗೂ ಹಣ ವೆಚ್ಚವಾಗುತ್ತದೆ. ಹೀಗಾಗಿ, ಮೀನಿಗೆ ನಿರೀಕ್ಷಿತ ದರ ಸಿಗದೇ ಇದ್ದರೆ ಮೀನುಗಾರಿಕೆ ಮಾಡುವುದು ವ್ಯರ್ಥ. ಆದ್ದರಿಂದ ಬೋಟ್‌ಗಳು ಸಮುದ್ರಕ್ಕೆ ಇಳಿಯುತ್ತಿಲ್ಲ’ ಎಂದು ಟ್ರಾಲ್ ಬೋಟ್ ಮಾಲೀಕರ ಸಂಘದ ಕಾರ್ಯದರ್ಶಿ ರಾಜೇಶ್ ಪುತ್ರನ್ ಹೇಳಿದರು.

ರಾಣಿ ಮೀನು –ಪ್ರಜಾವಾಣಿ ಚಿತ್ರ

Quote - ಕೊರಿಯಾ ಚೀನಾ ಮತ್ತು ಯುರೋಪ್ ರಾಷ್ಟ್ರಗಳಿಗೆ ರಾಣಿ ಮೀನು ಹೆಚ್ಚು ರಫ್ತಾಗುತ್ತದೆ. ಈ ಬಾರಿ ವಿದೇಶದಿಂದ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ವಹಿವಾಟು ಕಡಿಮೆಯಾಗಿದೆ ಇಬ್ರಾಹಿಂ ಎಸ್‌.ಎಂ. ಸಾಗರೋತ್ಪನ್ನ ಖರೀದಿದಾರರ ಸಂಘದ ಅಧ್ಯಕ್ಷ

Cut-off box - ಮುಂದಿನ ಋತುವರೆಗೆ ಕಾಯಬೇಕು ‘ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಆರು ಸುರುಮಿ (ಮೀನು ಕತ್ತರಿಸಿ ಅಚ್ಚು ಮಾಡುವ ಸ್ಥಳ) ಫ್ಯಾಕ್ಟರಿಗಳು ಇವೆ. ಏಜೆಂಟರು ಆರಂಭದಲ್ಲಿ ರಫ್ತು ಆಗುತ್ತಿಲ್ಲ ಎಂದು ಹೇಳಿದರು. ನಂತರ ದಾಸ್ತಾನು ಹೆಚ್ಚು ಇದೆ ಎಂದರು. ಈಗ ನೀರಿನ ಅಭಾವದ ನೆಪ ಹೇಳತ್ತಿದ್ದಾರೆ. ಕೆಲವರು ಕೇರಳ ಮತ್ತು ಗೋವಾದಿಂದ ಮೀನು ಖರೀದಿಸಿ ತಂದಿರಿಸುವ ಮೂಲಕ ಇಲ್ಲಿನವರಿಗೆ ದ್ರೋಹ ಬಗೆಯುತ್ತಿದ್ದಾರೆ. ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಬೇಕಾಗಿದೆ. ಚುನಾವಣೆ ಮುಗಿದು ಹೊಸ ಸರ್ಕಾರ ರಚನೆಯಾದ ನಂತರ ಸಭೆ ಕರೆದು ಚರ್ಚಿಸಲಾಗುವುದು’ ಎಂದು ಚೇತನ್ ಬೆಂಗ್ರೆ ತಿಳಿಸಿದರು. ಈ ಮೀನುಗಾರಿಕಾ ಋತು ಇನ್ನೇನು ಮುಗಿಯುತ್ತ ಬಂದಿದೆ. ಗಾಳಿ–ಮಳೆ ಶುರುವಾದರೆ ಕೊನೆಯ ದಿನಗಳಲ್ಲೂ ಮೀನುಗಾರಿಕೆ ಸರಿಯಾಗಿ ನಡೆಯುವುದಿಲ್ಲ. ಹೀಗಾಗಿ ಇನ್ನೇನಿದ್ದರೂ ಟ್ರೋಲಿಂಗ್ ನಿಷೇಧದ ನಂತರ ಮುಂದಿನ ಆಗಸ್ಟ್‌ನಲ್ಲಿ ಮೀನುಗಾರಿಕೆ ಪ್ರಕ್ರಿಯೆ ಚುರುಕು ಪಡೆದುಕೊಳ್ಳಲಿದೆ. ಅಷ್ಟರಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

Cut-off box - ‘ಎಕ್ಸ್‌ಪೋರ್ಟ್ ಹಬ್‌’ ಆಗಲಿ ವಿಮಾನ ನಿಲ್ದಾಣ ಬಂದರು ಇತ್ಯಾದಿ ಇದ್ದೂ ಮಂಗಳೂರಿನಲ್ಲಿ ‘ಎಕ್ಸ್‌ಪೋರ್ಟ್ ಹಬ್’ ಇಲ್ಲದ್ದರಿಂದ ಮೀನುಗಾರಿಕೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರು ತುಂಬ ತೊಂದರೆ ಅನುಭವಿಸುತ್ತಿದ್ದಾರೆ. ಮಂಗಳೂರಿನ ಮೀನಿನ ಬಹುಪಾಲು ಗುಜರಾತ್‌ ಮೂಲಕ ಮತ್ತು ಸ್ವಲ್ಪ  ಕೊಚ್ಚಿ ಗೋವಾ ಮುಂಬೈ ಮೂಲಕ ರಫ್ತಾಗುತ್ತದೆ. ಮೀನು ಸಾಗಾಟಕ್ಕೆ ಮಂಗಳೂರಿನಲ್ಲಿ ಕಾರ್ಗೊ ಸೌಲಭ್ಯ ಇಲ್ಲದಿರುವುದರಿಂದ ಅನಿವಾರ್ಯವಾಗಿ ಬೇರೆ ನಗರಗಳನ್ನು ಆಶ್ರಯಿಸಬೇಕಾಗಿದೆ. ಇದರಿಂದ ವೆಚ್ಚ ಹೆಚ್ಚಾಗುತ್ತಿದೆ ಎಂದು ರಾಜೇಶ್ ಪುತ್ರನ್ ಅಭಿಪ್ರಾಯಪಡುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.