ADVERTISEMENT

ಸಿಲಿಕಾನ್ ಬೀಚ್‌: ವೃತ್ತಿಪರರಿಗೆ ರತ್ನಗಂಬಳಿ

ಪರವೂರಿನಲ್ಲಿ ಇರುವ ಕರಾವಳಿ ಕರ್ನಾಟಕದ ಅನುಭವಿಗಳನ್ನು ವಾಪಸ್ ಕರೆತರುವ ಪ್ರಯತ್ನದ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 5:53 IST
Last Updated 10 ಆಗಸ್ಟ್ 2025, 5:53 IST
ಸಿಲಿಕಾನ್ ಬೀಚ್ ಪ್ರೋಗ್ರಾಂನ ಮರಳಿ ನಾಡಿಗೆ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ  ರೋಹಿತ್ ಭಟ್, ನಟರಾಜ್ ಹೆಗ್ಡೆ, ಶ್ಯಾಮ್‌ ಪ್ರಸಾದ್ ಹೆಬ್ಬಾರ್‌, ಅಶ್ವಿನಿ ಪೈ ಮರೂರು, ಪ್ರಶಾಂತ್‌ ಶೆಣೈ ಪಾಲ್ಗೊಂಡಿದ್ದರು
ಸಿಲಿಕಾನ್ ಬೀಚ್ ಪ್ರೋಗ್ರಾಂನ ಮರಳಿ ನಾಡಿಗೆ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ  ರೋಹಿತ್ ಭಟ್, ನಟರಾಜ್ ಹೆಗ್ಡೆ, ಶ್ಯಾಮ್‌ ಪ್ರಸಾದ್ ಹೆಬ್ಬಾರ್‌, ಅಶ್ವಿನಿ ಪೈ ಮರೂರು, ಪ್ರಶಾಂತ್‌ ಶೆಣೈ ಪಾಲ್ಗೊಂಡಿದ್ದರು   

ಮಂಗಳೂರು: ವಿವಿಧ ಕಾರಣಗಳಿಂದ ಪರವೂರಿಗೆ ಹೋಗಿರುವ ಕರಾವಳಿ ಕರ್ನಾಟಕದ ಅನುಭವಿ ವೃತ್ತಿಪರರನ್ನು ವಾಪಸ್ ಕರೆತರುವ ‘ಮರಳಿ ನಾಡಿಗೆ’ ಯೋಜನೆಗೆ ಸಿಲಿಕಾನ್ ಬೀಚ್ ಪ್ರೋಗ್ರಾಂ (ಎಸ್‌ಬಿಪಿ) ಶನಿವಾರ ಚಾಲನೆ ನೀಡಲಾಯಿತು.

ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್‌ನ ಸಹಯೋಗದಲ್ಲಿ ಜಾರಿಗೆ ತರುವ, ತಾಯ್ನಾಡಿನಲ್ಲಿ ಮತ್ತೆ ಉನ್ನತ ಮಟ್ಟದ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಮತ್ತು ಉತ್ತಮ ಜೀವನ ನಡೆಸಲು ನೆರವಾಗುವ ಈ ಯೋಜನೆಯನ್ನು ಉದ್ಘಾಟಿಸಿದ ಸಂಸದ ಕ್ಯಾಪ್ಟನ್‌ ಬ್ರಿಜೇಶ್ ಚೌಟ ಕರಾವಳಿ ಕರ್ನಾಟಕದ ಒಳ್ಳೆಯ ಅಂಶಗಳನ್ನು ಹೊರಜಗತ್ತಿಗೆ ತೋರಿಸಬೇಕಾದ ಅಗತ್ಯವಿದೆ ಎಂದರು.

ಎಸ್‌ಬಿಪಿ ಸಂಯೋಜಕ ಮತ್ತು ಡಬ್ಲ್ಯುಆರ್‌ಕೆ ಡಬ್ಲ್ಯುಆರ್‌ಕೆ, 99 ಗೇಮ್ಸ್‌, ರೋಬೊಸಾಫ್ಟ್‌ ಕಂಪನಿಗಳ ಸ್ಥಾಪಕ ರೋಹಿತ್ ಭಟ್ ಮಾತನಾಡಿ ಈಚಿನ ಎರಡು ವರ್ಷಗಳಲ್ಲಿ 40ಕ್ಕೂ ಅಧಿಕ ಕಂಪನಿಗಳು ಕರಾವಳಿಯಲ್ಲಿ ಆರಂಭಗೊಂಡಿದ್ದು 8 ಸಾವಿರ ಮಂದಿಗೆ ಉದ್ಯೋಗ ನೀಡಿವೆ. ಈಗ ಇನ್ನಷ್ಟು ಅವಕಾಶಗಳು ಸೃಷ್ಟಿಯಾಗಿರುವುದರಿಂದ ಅನುಭವಿ ವೃತ್ತಿಪರರು ಭಾರತದ ಸಿಲಿಕಾನ್ ಬೀಚ್‌ಗೆ ಲಗ್ಗೆ ಇಡಲು ಇದು ಸಕಾಲ ಎಂದು ಹೇಳಿದರು.

ADVERTISEMENT

2000 ಮಂದಿಯ ಅಭಿಪ್ರಾಯ ಪಡೆದು ಈಚೆಗೆ ನಡೆಸಿದ ಸಮೀಕ್ಷೆಯೊಂದರಲ್ಲಿ 95 ಶೇಕಡ ಮಂದಿ ಉತ್ತಮ ಅವಕಾಶಗಳು ಇದ್ದರೆ ಇತ್ತ ಮರಳಲು ಆಸೆ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಜೀವನ ವಿಧಾನ, ಸಂಸ್ಕೃತಿ, ಆಹಾರ ಮತ್ತು ಕುಟುಂಬದವರಿಂದ ದೂರ ಸರಿದಿರುವ ಬಗ್ಗೆ 64 ಶೇಕಡ ಮಂದಿಗೆ ಬೇಸರವಿದೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ ಎಂದು ಅವರು ತಿಳಿಸಿದರು.

ಪರವೂರಿನಲ್ಲಿರುವವರ ಪೈಕಿ ಬೆಂಗಳೂರಿನಲ್ಲಿ 58 ಶೇಕಡ, ರಾಜ್ಯದ ಉಳಿದ ಭಾಗಗಳಲ್ಲಿ 14 ಶೇಕಡ, ಹೊರರಾಜ್ಯ ಮತ್ತು ವಿದೇಶದಲ್ಲಿ 28 ಶೇಕಡ ಮಂದಿ ಕೆಲಸ ಮಾಡುತ್ತಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡ 99 ಶೇಕಡ ಜನರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಕುಟುಂಬದವರ ಜೊತೆ ಇರಲು, ಉತ್ತಮ ಜೀವನ ನಡೆಸಲು, ಕಡಿಮೆ ವೆಚ್ಚದಲ್ಲಿ ಜೀವನ ನಿರ್ವಹಣೆ ಮಾಡಲು ಮತ್ತು ಜನಿಸಿದ ಊರಿಗೆ ಕೊಡುಗೆ ನೀಡುವುದಕ್ಕಾಗಿ ಊರಿಗೆ ಮರಳಲು ಬಯಸಿದ್ದಾರೆ ಎಂದು ರೋಹಿತ್ ಭಟ್ ಹೇಳಿದರು.

ಕರಾವಳಿಗೆ ಹೆಚ್ಚಿನ ಕಂಪನಿಗಳು ಬರುತ್ತಿದ್ದು ಅವರಿಗೆ ಅನುಭವಿ ವೃತ್ತಿಪರರು ಬೇಕಾಗಿದ್ದಾರೆ. ಮರಳಿ ನಾಡಿಗೆ ಯೋಜನೆ ಅವರ ನೆರವಿಗೆ ಬರಲಿದ್ದು ವೃತ್ತಿಪರರನ್ನು ಪಡೆಯಲು ವೇದಿಕೆ ಒದಗಿಸಲಿದೆ. ಸಂಚಾರ ದಟ್ಟಣೆಯಲ್ಲಿ ಸಿಲುಕಿ, ನೀರಿನ ಸಮಸ್ಯೆಯಿಂದ ಬಳಲಿ, ಮಾಲಿನ್ಯಕ್ಕೆ ನಲುಗಿ ಮೆಟ್ರೊ ನಗರಗಳಲ್ಲಿ ಬೇಸರಗೊಂಡಿರುವ ವೃತ್ತಿಪರರು ಅವರಿಗೆ ತುಂಬ ಪರಿಚಿತವಾಗಿರುವ ಊರಿಗೆ ಮರಳಲು ಬಯಸಿದ್ದಾರೆ ಎಂದು ರೋಹಿತ್ ತಿಳಿಸಿದರು.

ಸಿಸಿಐ ಮಂಗಳೂರು ಘಟಕದ ಅಧ್ಯಕ್ಷ ನಟರಾಜ್ ಹೆಗ್ಡೆ, ಯುನಿಫೈ ಸಿಎಕ್ಸ್‌ನ ಮುಖ್ಯ ಜನಸಂಪರ್ಕ ಅಧಿಕಾರಿ ಶ್ಯಾಮ್‌ ಪ್ರಸಾದ್ ಹೆಬ್ಬಾರ್‌, ಕೆಸಿಸಿಐ ಗೌರವ ಕಾರ್ಯದರ್ಶಿ ಅಶ್ವಿನಿ ಪೈ ಮರೂರು, ಯುನಿಕೋರ್ಟ್‌ ಸಹ ಸ್ಥಾಪಕ ಪ್ರಶಾಂತ್‌ ಶೆಣೈ ಪಾಲ್ಗೊಂಡಿದ್ದರು.

ಸಿಲಿಕಾನ್ ಬೀಚ್ ಪ್ರೋಗ್ರಾಂನ ಮರಳಿ ನಾಡಿಗೆ ಯೋಜನೆಯನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ  ಉದ್ಘಾಟಿಸಿದರು
ಅತ್ಯಂತ ಸುರಕ್ಷಿತ ನಗರಗಳಲ್ಲಿ ಒಂದು ಮಂಗಳೂರು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಈ ಭಾಗವನ್ನು ಕೆಟ್ಟದಾಗಿ ಬಿಂಬಿಸಲಾಗುತ್ತಿದ್ದು ಅದೇ ವಿಷಯಕ್ಕೆ ಹೊರಗೆ ಕುಪ್ರಸಿದ್ಧವಾಗಿರುವುದು ಬೇಸರದ ವಿಷಯ.
– ಕ್ಯಾಪ್ಟನ್ ಬ್ರಿಜೇಶ್ ಚೌಟ, ದಕ್ಷಿಣ ಕನ್ನಡ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.