ADVERTISEMENT

ಮಂಗಳೂರು | ಹನಿ ಟ್ರ್ಯಾಪ್‌ ಸಂತ್ರಸ್ತರಿಗೆ ಉಚಿತ ಕಾನೂನು ನೆರವು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 6:10 IST
Last Updated 18 ಅಕ್ಟೋಬರ್ 2025, 6:10 IST
ವಕೀಲೆ ಸೌದಾ
ವಕೀಲೆ ಸೌದಾ   

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದಲ್ಲಿ ಈಚೆಗೆ ಹನಿ ಟ್ರ್ಯಾಪ್ ಪ್ರಕರಣಗಳು ಹೆಚ್ಚುತ್ತಿದ್ದು ಇದನ್ನು ಕೊನೆಗಾಣಿಸಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ವಕೀಲೆ ಸೌದಾ, ಸಂತ್ರಸ್ತರ ಪರವಾಗಿ ಉಚಿತವಾಗಿ ವಾದಿಸಲು ಸಿದ್ದ ಎಂದು ತಿಳಿಸಿದರು.

ಕೇರಳದ ಮಹಮ್ಮದ್ ಅಶ್ರಫ್ ತಾವರಕ್ಕಾಡ್ ಎಂಬವರನ್ನು ಮದುವೆ ಮಾಡಲು ಹೆಣ್ಣು ತೋರಿಸುವುದಾಗಿ ಹೇಳಿ ಕರೆದುಕೊಂಡು ಬಂದು ಮೋಹದ ಜಾಲದಲ್ಲಿ ಸಿಲುಕಿಸಿ ಬೆದರಿಸಿ ಹಣ ವಸೂಲಿ ಮಾಡಿರುವ ಆರೋಪಿಗಳನ್ನು ಬಂಧಿಸಬೇಕು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.

ಪ್ರಮುಖ ಆರೋಪಿ, ದಕ್ಷಿಣ ಕನ್ನಡದ ಬಶೀರ್ ಕಡಂಬು ಕೊಡಗಿನಲ್ಲೂ ಒಬ್ಬರು ಗಣ್ಯರನ್ನು ಜಾಲದಲ್ಲಿ ಸಿಲುಕಿಸಿದ್ದಾರೆ ಎಂದು ಆರೋಪಿಸಿದರು.

ADVERTISEMENT

‘ಹೆಣ್ಣಿನ ಆಮಿಷ ಒಡ್ಡಿ ವಂಚಿಸುವ ಪ್ರಕರಣಗಳಿಗೆ ಇತಿಶ್ರೀ ಹಾಡಬೇಕು. ಇದಕ್ಕಾಗಿ ಕಾನೂನು ಹೋರಾಟಕ್ಕೆ ನಾನು ಸಿದ್ಧ. ಧಾರ್ಮಿಕ ಮುಖಂಡರಾಗಲಿ, ರಾಜಕಾರಣಿಗಳಾಗಲಿ ಅಡ್ಡಿಪಡಿಸಿದರೂ, ಯಾರು ಬೆದರಿಕೆ ಹಾಕಿದರೂ ನನ್ನ ಸೇವೆಯನ್ನು ಮುಂದುವರಿಸುವೆ’ ಎಂದು ಅವರು ಹೇಳಿದರು. 

‘ಮಹಮ್ಮದ್ ಅಶ್ರಫ್ ಪ್ರಕರಣದಲ್ಲಿ ಬಶೀರ್ ಕಡಂಬು, ಕೇರಳದ ಶಫಿಯಾ, ಬಂಟ್ವಾಳ ತಾಲ್ಲೂಕು ಮಾಣಿ ನಿವಾಸಿ ಶಫಿಯಾ, ಆಕೆಯ ಪತಿ ಶರಫುದ್ದೀನ್ ಸೇರಿದಂತೆ 7 ಆರೋಪಿಗಳ ವಿರುದ್ಧ ಎಫ್‌ಐಆರ್ ಆಗಿ ಒಂದು ವಾರ ಕಳೆದರೂ ಬಂಧಿಸಲು ಪೊಲೀಸರು ಮೀನ–ಮೇಷ ಎಣಿಸುತ್ತಿದ್ದಾರೆ’ ಎಂದು ಸೌದಾ ಆರೋಪಿಸಿದರು.

‘ಮಹಮ್ಮದ್ ಅಶ್ರಫ್‌ಗೆ ಮದುವೆಯಾಗಿದ್ದು ಮಕ್ಕಳಿದ್ದಾರೆ. ಅವರ ಪತ್ನಿ ಅನಾರೋಗ್ಯಪೀಡಿತರು. ಮತ್ತೊಂದು ಮದುವೆಯಾಗಲು ಬಯಸಿದ ಅವರನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೇರಳದ ಶಫಿಯಾ ಮಂಗಳೂರಿಗೆ ಕರೆದುಕೊಂಡು ಬಂದು ಇಲ್ಲಿನ ತಂಡದೊಂದಿಗೆ ಸೇರಿಕೊಂಡು ಮಾಲ್ ಒಂದರಲ್ಲಿ ಹೆಣ್ಣು ತೋರಿಸುವ ನೆಪದಲ್ಲಿ ಫೋಟೊಗಳನ್ನು ಕ್ಲಿಕ್ಕಿಸಿದ್ದಾರೆ. ಅದನ್ನು ತೋರಿಸಿ ಬೆದರಿಕೆ ಒಡ್ಡಿ ₹ 40 ಲಕ್ಷಕ್ಕೂ ಅಧಿಕ ಮೊತ್ತ ಕಸಿದಿದ್ದಾರೆ. ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿದಾಗ ವಿಟ್ಲ ಠಾಣೆಗೆ ಮಹಮ್ಮದ್ ಅಶ್ರಫ್ ದೂರು ನೀಡಿದ್ದಾರೆ’ ಎಂದರು.  

‘ಹನಿ ಟ್ರ್ಯಾಪ್‌ ಪ್ರಕರಣ ಈಚೆಗೆ ಕಾರ್ಕಳದಲ್ಲೂ ನಡೆದಿದ್ದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಡಗಿನಲ್ಲಿ ನಿವೃತ್ತ ಸೇನಾಧಿಕಾರಿಯೊಬ್ಬರಿಂದ ಹಣ ಕಸಿದ ಪ್ರಕರಣದಲ್ಲಿ ಬಶೀರ್ ಕಡಂಬು ಪ್ರಮುಖ ಆರೋಪಿ. ಕೆಲವು ತಿಂಗಳ ಹಿಂದೆ ಮಂಗಳೂರಿನಲ್ಲಿ ಪ್ರಮುಖ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೆಲ್ಲವನ್ನು ಪರಿಗಣಿಸಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು’ ಎಂದು ಸೌದಾ ಆಗ್ರಹಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.