ADVERTISEMENT

ಮಂಗಳೂರು: ‘ದೇವರಲ್ಲಿ ನಂಬಿಕೆ; ಬದುಕಿಗೆ ಭರವಸೆ‘

ಭಾರತದ ಕ್ರೈಸ್ತ ತತ್ವಜ್ಞಾನಿಗಳ ಸಂಘದ 47ನೇ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 7:09 IST
Last Updated 20 ಅಕ್ಟೋಬರ್ 2024, 7:09 IST
<div class="paragraphs"><p>ಭಾರತದ ಕ್ರೈಸ್ತ ತತ್ವಜ್ಞಾನಿಗಳ ಸಂಘದ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆಗೊಳಿಸಲಾಯಿತು</p></div>

ಭಾರತದ ಕ್ರೈಸ್ತ ತತ್ವಜ್ಞಾನಿಗಳ ಸಂಘದ ಸಮ್ಮೇಳನದಲ್ಲಿ ಪುಸ್ತಕ ಬಿಡುಗಡೆಗೊಳಿಸಲಾಯಿತು

   

ಮಂಗಳೂರು: ಜೀವನದಲ್ಲಿ ಯಾವುದೇ ಸಂದರ್ಭದಲ್ಲೂ ಭರವಸೆ ಕಳೆದುಕೊಳ್ಳಬಾರದು. ಬದುಕಿನಲ್ಲಿ ಎದುರಾಗುವ ಸಂಕಷ್ಟಗಳು ಆತ್ಮವಿಶ್ವಾಸ, ಭರವಸೆಯ ಬೀಜ ಮೊಳೆಯುವ ವೇದಿಕೆಯಾಗಬೇಕು ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ ಹೇಳಿದರು.

ಭಾರತದ ಕ್ರೈಸ್ತ ತತ್ವಜ್ಞಾನಿಗಳ ಸಂಘವು (ಎಸಿಪಿಐ) ಮಂಗಳೂರು ವಿಶ್ವವಿದ್ಯಾನಿಲಯದ ಚೇರ್ ಇನ್ ಕ್ರಿಶ್ಚಿಯಾನಿಟಿ (ಸಿಐಸಿ) ಸಹಯೋಗದಲ್ಲಿ ಶನಿವಾರದಿಂದ ಮೂರು ದಿನ ಜೆಪ್ಪುವಿನ ಸೇಂಟ್ ಜೋಸೆಫ್ಸ್‌ ಸೆಮಿನರಿಯ ಸಿ.ಎಂ.ಸಭಾಭವನದಲ್ಲಿ ಆಯೋಜಿಸಿರುವ ‘ಭರವಸೆ: ಬಹು ಆಯಾಮದ ಒಂದು ತತ್ವ ಚಿಂತನೆ’ ಕುರಿತ 47ನೇ ವಾರ್ಷಿಕ ಸಂಶೋಧನಾ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ADVERTISEMENT

ಇತ್ತೀಚಿನ ವರ್ಷಗಳಲ್ಲಿ ಯುವಜನರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ಮಕ್ಕಳನ್ನು ಕಳೆದುಕೊಂಡ ಪಾಲಕರಿಗೆ ಆ ಆಘಾತದಿಂದ ಹೊರಬರುವುದು ಸುಲಭವಲ್ಲ. ಅವರ ಮನೆಗಳಿಗೆ ಭೇಟಿ ನೀಡಿದಾಗ ಈ ವಾಸ್ತವದ ಅರಿವಾಗಿದೆ. ದೇವರ ಮೇಲಿನ ನಂಬಿಕೆ, ಬದುಕಿನಲ್ಲಿ ಭರವಸೆ ತುಂಬುತ್ತದೆ. ಎಲ್ಲ ಧರ್ಮಗಳೂ ಒಳಿತನ್ನೇ ಬೋಧಿಸಿವೆ. ಒಳಿತನ್ನು ಅರ್ಥೈಸಿಕೊಂಡು ಅಳವಡಿಸಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಪ್ರೀತಿಯಿಂದ ಎಲ್ಲವನ್ನೂ ಗೆಲ್ಲಬಹುದು. ಬದುಕಿನಲ್ಲಿ ಭರವಸೆ ಕಳೆದುಕೊಳ್ಳುವ ಸನ್ನಿವೇಶ ಎದುರಾದರೆ, ನಮ್ಮನ್ನು ಪ್ರೀತಿಸುವ, ಸಲಹುವ ಹೃದಯಗಳನ್ನು ನೆನಪಿಸಿಕೊಳ್ಳಬೇಕು. ಆಗ ತನ್ನಿಂದ ತಾನೇ ಭರವಸೆ ಚಿಗುರೊಡೆಯುತ್ತದೆ ಎಂದು ಹೇಳಿದರು.

ಸಮ್ಮೇಳನ ಉದ್ಘಾಟಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್.ಧರ್ಮ, ಬಹು ಸಂಸ್ಕೃತಿ, ವೈವಿಧ್ಯದ ಸಂಗಮವಾಗಿರುವ ಭಾರತದಲ್ಲಿ ಇಂದಿಗೂ ಮಹಾತ್ಮ ಗಾಂಧಿ ತತ್ವಗಳು ಪ್ರಸ್ತುತವಾಗಿವೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಸಮಾಜದಲ್ಲಿ ಆದ್ಯತೆಗಳು ಬದಲಾಗುತ್ತಿವೆ. ದಿನ ಕಳೆದಂತೆ ನಾವು ವ್ಯಕ್ತಿವಾದಿಗಳಾಗುತ್ತಿದ್ದೇವೆ. ಹೊಂದಾಣಿಕೆಯ ಗುಣ ಕಡಿಮೆಯಾಗುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಶ್ನಿಸುವ ಧ್ವನಿಗಳನ್ನು ಕುಗ್ಗಿಸುವ ಪ್ರಯತ್ನಗಳು ನಡೆಯುತ್ತಿವೆ. ಪ್ರತಿಯೊಬ್ಬನಿಗೂ ತನ್ನ ಅಸ್ತಿತ್ವವೇ ಮುಖ್ಯವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಬದಲಾವಣೆ ತರಲು ಯುವಜನರೇ ಭರವಸೆಯ ಬೆಳಕಾಗಬೇಕು ಎಂದು ಹೇಳಿದರು.

ಮಂಗಳೂರು ವಿವಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪರಿಣಿತಾ ದಿಕ್ಸೂಚಿ ಭಾಷಣ ಮಾಡಿದರು. ಸೇಂಟ್ ಜೋಸೆಫ್ಸ್ ಇಂಟರ್ ಡೈಕೊಸನ್ ಸೆಮಿನರಿಯ ರೆಕ್ಟರ್ ರೊನಾಲ್ಡ್ ಸೆರಾವೊ, ಎಸಿಪಿಐ ಅಧ್ಯಕ್ಷ ಜಾನ್ ಪೀಟರ್ ವಲಾಬ್ಡೋಸ್, ಸಮ್ಮೇಳನದ ಸಂಯೋಜಕ ಫಾ. ಐವನ್ ಡಿಸೋಜ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.