ADVERTISEMENT

ತೋಟಗಾರಿಕೆ ಇಲಾಖೆ: ‘ಝೇಂಕಾರ’ ಜೇನು ಸಾಕಾಣಿಕೆಗೆ ನಕಾರ

ತೋಟಗಾರಿಕೆ ಇಲಾಖೆಯ ಯೋಜನೆ ಪ್ರಾರಂಭವಾಗಿ 6 ತಿಂಗಳು ಕಳೆದರೂ ಆರಂಭವಾಗದ ಬೇಡಿಕೆ

ವಿಕ್ರಂ ಕಾಂತಿಕೆರೆ
Published 15 ಜೂನ್ 2025, 6:54 IST
Last Updated 15 ಜೂನ್ 2025, 6:54 IST
ಸುಳ್ಯ ತಾಲ್ಲೂಕಿನ ರೈತರೊಬ್ಬರ ತೋಟದಲ್ಲಿ ಜೇನು ಸಾಕಾಣಿಕೆ 
ಸುಳ್ಯ ತಾಲ್ಲೂಕಿನ ರೈತರೊಬ್ಬರ ತೋಟದಲ್ಲಿ ಜೇನು ಸಾಕಾಣಿಕೆ    

ಮಂಗಳೂರು: ಸರ್ಕಾರದ ಅಧಿಕೃತ ಬ್ರಾಂಡ್‌ನಲ್ಲಿ ಜೇನುತುಪ್ಪ ಮಾರಾಟ ಮಾಡುವ ಉದ್ದೇಶದಿಂದ ತೋಟಗಾರಿಕೆ ಇಲಾಖೆ ಆರಂಭಿಸಿರುವ ‘ಝೇಂಕಾರ’ ಯೋಜನೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೂನ್ಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಇಲ್ಲಿಯ ವರೆಗೆ ಒಬ್ಬರೂ ನೋಂದಣಿಗೆ ಮುಂದಾಗಿಲ್ಲ.

ಸ್ವಂತ ಬ್ರಾಂಡ್‌ನಲ್ಲಿ ಅಥವಾ ಸೊಸೈಟಿಗಳನ್ನು ಸ್ಥಾಪಿಸಿ ಒಂದೇ ಬ್ರಾಂಡ್ ಅಡಿಯಲ್ಲಿ ಗುಂಪಾಗಿ ಜೇನುತುಪ್ಪ ಮಾರಾಟ ಮಾಡುತ್ತಿರುವವರನ್ನು ಒಂದೇ ಸೂರಿನೊಳಗೆ ತರುವುದಕ್ಕಾಗಿ ಕಳೆದ ವರ್ಷದ ಕೊನೆಯಲ್ಲಿ ‘ಝೇಂಕಾರ’ ಆರಂಭಿಸಲಾಗಿತ್ತು. ₹ 2000 ಮೊತ್ತ ತುಂಬಿ ‘ಮಧುಕ್ರಾಂತಿ’ಯಲ್ಲಿ ಹೆಸರು ನೊಂದಾಯಿಸಿಕೊಂಡರೆ ಝೇಂಕಾರದ ಬ್ರಾಂಡ್ ಮತ್ತು ಲಾಂಛನ ಬಳಸಲು ಅವಕಾಶ ನೀಡಲಾಗುತ್ತದೆ. ನಂತರ ಕೇಂದ್ರದ ಆಹಾರ ಸುರಕ್ಷತೆ, ಪ್ರಮಾಣೀಕರಣ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಮತ್ತು ಅಗ್‌ಮಾರ್ಕ್‌ ಪ್ರಮಾಣಪತ್ರ ಪಡೆದುಕೊಂಡು ಜೇನುತುಪ್ಪ ಉತ್ಪಾದಿಸಬಹುದಾಗಿದೆ.

ಆದರೆ, ಯೋಜನೆಯಲ್ಲಿ ತುಂಬ ಗೊಂದಲಗಳು ಇದ್ದು ಸ್ಪಷ್ಟತೆ ಇಲ್ಲವೆಂದೂ ನೋಂದಣಿಗೆ ಸಂಬಂಧಿಸಿ ಸಮರ್ಪಕವಾದ ಮಾಹಿತಿ ಸಿಗುತ್ತಿಲ್ಲವೆಂದೂ ಹೇಳುತ್ತಿರುವ ಜೇನು ಸಾಕಣೆದಾರರು ಝೇಂಕಾರದತ್ತ ಆಸಕ್ತಿ ವಹಿಸುತ್ತಿಲ್ಲ. ತಾವು ಈಗಾಗಲೇ ಮಾರುಕಟ್ಟೆಯಲ್ಲಿ ಬಳಸುತ್ತಿರುವ ಬ್ರಾಂಡ್‌ಗೆ ಹೊಡೆತ ಬೀಳಬಹುದು ಎಂಬ ಆತಂಕವೂ ಅವರಲ್ಲಿದೆ. 

ADVERTISEMENT

‘ಸರ್ಕಾರದ ಬ್ರಾಂಡ್ ಯಾವ ಬಗೆಯಲ್ಲಿ ಬಳಸಿಕೊಳ್ಳಬೇಕು ಎಂಬುದು ಗೊತ್ತಾಗುತ್ತಿಲ್ಲ. ವೈಯಕ್ತಿಕವಾಗಿ ಉತ್ತಮ ಗುಣಮಟ್ಟದ ಜೇನು ಕೊಡುತ್ತಾ ಇದ್ದೇವೆ. ಜೇನಿನ ಗುಣಮಟ್ಟವು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತದೆ. ಅದು ಆಯಾ ಪ್ರದೇಶದ ಬ್ರಾಂಡ್‌ನಲ್ಲಿ ಪ್ರತಿಫಲಿಸುತ್ತದೆ. ಎಲ್ಲ ಭಾಗದ ಜೇನನ್ನು ಒಂದೇ ಬ್ರಾಂಡ್‌ನಲ್ಲಿ ಕೊಟ್ಟರೆ ಗ್ರಾಹಕರಿಗೆ ಉತ್ತಮ ಉತ್ಪನ್ನ ಸಿಗುವುದೋ ಇಲ್ಲವೋ ಎಂಬ ಸಂದೇಹ ಮೂಡುವುದರಿಂದ ಝೇಂಕಾರದತ್ತ ವಾಲದೆ ಪ್ರಸ್ತುತ ಇರುವ ತಮ್ಮದೇ ಬ್ರಾಂಡ್ ಮುಂದುವರಿಸಲು ರೈತರು ನಿರ್ಧರಿಸಿದ್ದಾರೆ’ ಎಂದು ಸುಳ್ಯದ ವಿವೇಕ್ ಲಿಖಿತ್ ಹೇಳಿದರು.

‘ಸುಳ್ಯದಲ್ಲಿ ಜೇನು ಉತ್ಪಾದಕರ ಸೊಸೈಟಿ ಇದೆ. ರೈತ ಉತ್ಪಾದಕರ ಸಂಘದ ಮೂಲಕವೂ ಜೇನುತುಪ್ಪಕ್ಕೆ ಮಾರುಕಟ್ಟೆ ಕಲ್ಪಿಸಲಾಗಿದೆ. ಝೇಂಕಾರದಲ್ಲಿ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಸುದೀರ್ಘವಾಗಿದೆ. ಇದು ಕೂಡ ಝೇಂಕಾರದಲ್ಲಿ ಆಸಕ್ತಿ ಇಲ್ಲದಿರಲು ಕಾರಣವಿರಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

ಮೂರೇ ಷರತ್ತುಗಳು

‘ಝೇಂಕಾರ ಬ್ರಾಂಡ್‌ನಲ್ಲಿ ಜೇನುತುಪ್ಪ ಮಾರಾಟ ಮಾಡಲು ಮೂರೇ ಮೂರು ಷರತ್ತುಗಳಿಗೆ ಬದ್ಧರಾದರೆ ಸಾಕು. ಜೇನು ಸಾಕಣೆದಾರರನ್ನು ಒಂದೇ ಸೂರಿನಡಿಗೆ ತಂದು ತುಪ್ಪ ಮಾರಾಟಕ್ಕೆ ಅನುಕೂಲ ಮಾಡಲು ಮತ್ತು ಗುಣಮಟ್ಟವನ್ನು ಕಾಯ್ದುಕೊಳ್ಳಲು ಇದನ್ನು ಆರಂಭಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಇಲ್ಲಿಯ ವರೆಗೆ ಯಾರೂ ನೋಂದಣಿ ಮಾಡಿಸಿಕೊಳ್ಳಲು ಮುಂದೆ ಬಂದಿಲ್ಲ. ಇದಲ್ಲದೆ ಸಬ್ಸಿಡಿ ಪಡೆಯದೆ ವೈಯಕ್ತಿಕವಾಗಿ ಸಾಕುವವರೂ ಬೇರೆಯವರ ತೋಟದಲ್ಲಿ ಪೆಟ್ಟಿಗೆಗಳನ್ನು ಇರಿಸಿ ಜೇನು ತೆಗೆಯುವವರೂ ಇದ್ದಾರೆ. ಇವರೆಲ್ಲರಿಗೂ ಝೇಂಕಾರದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದರು. 

ಸುಳ್ಯ ತಾಲ್ಲೂಕಿನ ರೈತರೊಬ್ಬರ ತೋಟದಲ್ಲಿ ಜೇನು ಸಾಕಾಣಿಕೆ 
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಜೇನು ಕೃಷಿ ಮಾಡುವವರು ಧಾರಾಳ ಮಂದಿ ಇದ್ದಾರೆ. ಸದ್ಯ ಸುಳ್ಯ ಪುತ್ತೂರು ಮತ್ತು ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಝೇಂಕಾರ ಯೋಜನೆ ಬಗ್ಗೆ ಹೆಚ್ಚು ಮಾಹಿತಿ ನೀಡಲು ಮುಂದಾಗಿದ್ದೇವೆ.
–ಮಂಜುನಾಥ, ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ

2,000: ದಕ್ಷಿಣ ಕನ್ನಡ ಜಿಲ್ಲೆಯ ಜೇನು ಸಾಕಣೆದಾರರು

45,000: ದ.ಕ ಜಿಲ್ಲೆಯಲ್ಲಿರುವ ಜೇನು ಪೆಟ್ಟಿಗಗಳು

26,000: ರಾಜ್ಯದಲ್ಲಿರುವ ಜೇನು ಸಾಕಣೆದಾರರು

1,250 ಮೆಟ್ರಿಕ್ ಟನ್: ರಾಜ್ಯದಲ್ಲಿ ವಾರ್ಷಿಕ ಜೇನುತುಪ್ಪ ಉತ್ಪಾದನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.