ಕಡಬ (ಉಪ್ಪಿನಂಗಡಿ): ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ ₹265.20 ಕೋಟಿ ವ್ಯವಹಾರ ನಡೆಸಿದ್ದು, ₹ 1.37 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ 12.5 ಲಾಭಾಂಶ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಕೃಷ್ಣಪ್ಪ ದೇವಾಡಿಗ ಘೋಷಿಸಿದರು.
ಮಂಗಳವಾರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ಸಂಘವು ₹15.03 ಕೋಟಿ ಠೇವಣಿ ಹೊಂದಿದ್ದು, ₹5.86 ಕೋಟಿ ಪಾಲು ಬಂಡವಾಳ ಹೊಂದಿದೆ. ಸದಸ್ಯರಿಗೆ ₹ 49.69 ಕೋಟಿ ಸಾಲ ವಿತರಿಸಿದ್ದು, ₹ 47.02 ಕೋಟಿ ಸಾಲ ಹೊರ ಬಾಕಿ ಇದೆ. ವರ್ಷಾಂತ್ಯಕ್ಕೆ ಶೇ 95.60 ಸಾಲ ಮರು ಪಾವತಿಯಾಗಿದೆ. ಕೇವಲ 2 ಗ್ರಾಮಗಳ ಕಾರ್ಯವ್ಯಾಪ್ತಿ ಹೊಂದಿರುವ ಸಂಘವು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಕಳೆದ 5 ವರ್ಷಗಳಿಂದ ಒಂದು ಕೋಟಿಗಿಂತಲೂ ಮಿಕ್ಕಿ ಲಾಭ ಗಳಿಸಿರುವುದು ಸಂಘದ ಅದ್ಬುತ ಸಾಧನೆಯಾಗಿದೆ ಎಂದು ಹೇಳಿದರು.
ಸದಸ್ಯ ಧನಂಜಯ ಕೊಡಂಗೆ ಮಾತನಾಡಿ, ಬಲ್ಯದಲ್ಲಿ ಸಂಘದ ಕಚೇರಿಗೆ ಜಾಗ ಖರೀದಿ ಮಾಡಿ ಸುಸಜ್ಜಿತ ಕಚೇರಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಬಲ್ಯದಲ್ಲಿ ಜಾಗ ಹುಡುಕುತ್ತಿದ್ದೇವೆ. ಶೀಘ್ರವಾಗಿ ಈ ಕೆಲಸ ಮಾಡಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.
ಸಭೆಯ ನೋಟಿಸ್ ಸಂಘದ ಪ್ರತಿಯೊಬ್ಬ ಸದಸ್ಯರಿಗೆ ತಲುಪುವ ವ್ಯವಸ್ಥೆಯ ಬಗ್ಗೆ ಚರ್ಚೆ ನಡೆದು ಈ ಸಮಸ್ಯೆಯನ್ನು ಮುಂದಿನ ಬಾರಿಗೆ ಸಮರ್ಪಕವಾಗಿ ಮಾಡುವುದಾಗಿ ಸಭೆಗೆ ತಿಳಿಸಲಾಯಿತು. ಸದಸ್ಯರಾದ ಪುಲಸ್ತ್ಯ ರೈ, ರಘುನಾಥ ಹೆಬ್ಬಾರ್, ಕಿರಣ್ ಗೋಗಟೆ, ಚಿದಾನಂದ ಕೊಯಕ್ಕುರಿ ಸಲಹೆಗಳನ್ನು ನೀಡಿದರು.
ಸನ್ಮಾನ: ಸಂಘದಲ್ಲಿ 37 ವರ್ಷಗಳ ಕಾಲ ದುಡಿದ ಮೋನಪ್ಪ ಪೂಜಾರಿ ಕೆರ್ಪಡೆಯನ್ನು ಸನ್ಮಾನಿಸಲಾಯಿತು. ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ನಿರ್ದೇಶಕರಾದ ಜಯಚಂದ್ರ ರೈ, ಶಶಾಂಕ ಗೋಖಲೆ ಎಂ., ಶಿವಪ್ರಸಾದ್ ಪಿ.ವಿ., ಶ್ರೀಧರ ಎಸ್.ಎನ್., ಶಿವಪ್ರಸಾದ್ ರೈ, ಅಚ್ಯುತ ದೇರಾಜೆ, ಪಕೀರ, ಯೋಗೇಂದ್ರ ಕುಮಾರ್ ಬಿ.ಎಸ್., ಲೀಲಾವತಿ ಕೆ., ಶಕಿಲ ಹಾಜರಿದ್ದರು. ಸಂಘದ ಉಪಾಧ್ಯಕ್ಷ ಚಿದಾನಂದ ವಂದಿಸಿದರು. ತೋಮಸ್ ಪಿ.ಎಂ.ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.