ಮಂಗಳೂರಿನ (ಕೆಪಿಟಿ) ಕದ್ರಿ ಹಿಲ್‌ನಲ್ಲಿರುವ ಬಿಸಿಎಂ ಹಾಸ್ಟೆಲ್
ಪ್ರಜಾವಾಣಿ ಚಿತ್ರ: ಫಕ್ರುದ್ದೀನ್
ಮಂಗಳೂರು: ಶೈಕ್ಷಣಿಕ ಹಬ್ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉನ್ನತ ವ್ಯಾಸಂಗಕ್ಕೆ ಬರುವ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸೀಟು ಪಡೆದರೂ, ವಿದ್ಯಾರ್ಥಿನಿಲಯಗಳಲ್ಲಿ ಸೀಟ್ ಪಡೆಯಲು ಪೈಪೋಟಿ ನಡೆಸಬೇಕಾಗಿದೆ.
ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಮಂಗಳೂರಿನಲ್ಲಿ ಶಿಕ್ಷಣ ಪಡೆಯುವ ಕನಸು ಹೊತ್ತು ನೆರೆಯ ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕರ್ನಾಟಕದ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಊಟ ಮತ್ತು ವಸತಿಗೆ ಸರ್ಕಾರಿ ವಸತಿ ನಿಲಯಗಳೇ ಆಸರೆಯಾಗಿವೆ. ಆದರೆ, ಹಾಸ್ಟೆಲ್‌ಗಳಲ್ಲಿ ಲಭ್ಯ ಸೀಟ್‌ಗಳಿಗಿಂತ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗುವುದರಿಂದ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ಸರ್ಕಾರಿ ವಿದ್ಯಾರ್ಥಿನಿಲಯದ ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ.
ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಒಟ್ಟು 80 ಹಾಸ್ಟೆಲ್‌ಗಳು ಇವೆ. ಅವುಗಳಲ್ಲಿ 21 ಮೆಟ್ರಿಕ್ ಪೂರ್ವ ಆಗಿದ್ದರೆ, 59 ಮೆಟ್ರಿಕ್ ನಂತರದವು. ಸಮಾಜ ಕಲ್ಯಾಣ ಇಲಾಖೆಯಡಿ 30 ಡಾ. ಬಿ.ಆರ್.ಅಂಬೇಡ್ಕರ್ ಹಾಸ್ಟೆಲ್‌ಗಳು ಇದ್ದು, ಅವುಗಳಲ್ಲಿ 19 ಮೆಟ್ರಿಕ್ ಪೂರ್ವ ಮತ್ತು 11 ಮೆಟ್ರಿಕ್ ನಂತರದವು ಆಗಿವೆ. ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗಳಿಗಿಂತ ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿಗೆ ಹೆಚ್ಚು ಬೇಡಿಕೆ ಇದೆ.
ಪದವಿ, ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ, ನರ್ಸಿಂಗ್ ಮೊದಲಾದ ವೃತ್ತಿಪರ ಕೋರ್ಸ್‌ಗಳ ಲಭ್ಯತೆ ಹೆಚ್ಚಿರುವುದರಿಂದ ಇಲ್ಲಿ ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿಗಳು ಸಂಖ್ಯೆ ಅಧಿಕ. ಹೀಗಾಗಿ, ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಲ್ಲಿ ಸೀಟ್ ಪಡೆಯುವುದು ವಿದ್ಯಾರ್ಥಿಗಳಿಗೆ ಸಾಹಸವಾದರೆ, ರಾಜಕಾರಣಿಗಳು, ಪ್ರಭಾವಿಗಳ ಒತ್ತಡದಿಂದ ತಪ್ಪಿಸಿಕೊಳ್ಳುವುದು ಇಲಾಖೆ ಅಧಿಕಾರಿಗಳಿಗೆ ಸವಾಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (ಬಿಸಿಎಂ) ಮೆಟ್ರಿಕ್ ಪೂರ್ವ ವಸತಿ ನಿಲಯಗಳ ಪ್ರವೇಶಕ್ಕೆ ಜೂನ್ 25 ಕೊನೆಯ ದಿನವಾಗಿತ್ತು. 21 ಹಾಸ್ಟೆಲ್‌ಗಳಲ್ಲಿ 1,005 ವಿದ್ಯಾರ್ಥಿಗಳಿಗೆ ವ್ಯವಸ್ಥೆ ಕಲ್ಪಿಸಲು ಸಾಧ್ಯವಿದ್ದು, 1,288 ಅರ್ಜಿ ಬಂದಿವೆ. 283 ಹೆಚ್ಚುವರಿ ಅರ್ಜಿಗಳು ಉಳಿದಿವೆ.
ಸರ್ಕಾರದ ನಿಯಮದಂತೆ ಬಿಸಿಎಂ ಹಾಸ್ಟೆಲ್‌ಗಳಲ್ಲಿ ಶೇ 75ರಷ್ಟು ಒಬಿಸಿ, ಶೇ 25ರಷ್ಟು ಇತರ ಹಿಂದುಳಿದ ಸಮುದಾಯಗಳು, ಪರಿಶಿಷ್ಟರಿಗೆ ಮೀಸಲಿರುತ್ತದೆ. ಮೆಟ್ರಿಕ್ ಪೂರ್ವದಲ್ಲಿ 12 ಬಾಲಕರು, 9 ಬಾಲಕಿಯರು, ಮೆಟ್ರಿಕ್ ನಂತರದಲ್ಲಿ 23 ಬಾಲಕರು, 36 ಬಾಲಕಿಯರ ವಸತಿನಿಲಯಗಳು ಆಗಿವೆ. ಬಂಟ್ವಾಳ, ಬೆಳ್ತಂಗಡಿ, ಮಂಗಳೂರಿನಲ್ಲಿ ವಸತಿ ನಿಲಯಕ್ಕೆ ಹೆಚ್ಚು ಬೇಡಿಕೆ ಇದೆ. 80 ವಸತಿ ನಿಲಯಗಳಿಗೆ ಕೇವಲ 40 ವಾರ್ಡನ್‌ಗಳು ಇದ್ದು, ಒಬ್ಬೊಬ್ಬರು ಎರಡು ವಸತಿ ನಿಲಯಗಳ ಹೊಣೆ ನಿರ್ವಹಿಸುತ್ತಾರೆ.
ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಒಟ್ಟು 3,469 ಸೀಟ್‌ಗಳು ಲಭ್ಯ ಇವೆ. ಅವುಗಳಿಗೆ ಅಂದಾಜು ಪ್ರತಿವರ್ಷ 5,000ದಷ್ಟು ಅರ್ಜಿಗಳು ಬರುತ್ತವೆ. ಪ್ರತಿ ಹಾಸ್ಟೆಲ್ 100ರಿಂದ 125 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದೆ. ಅರ್ಜಿ ಸಲ್ಲಿಸುವ ಎಲ್ಲ ವಿದ್ಯಾರ್ಥಿಗಳಿಗೆ ಸೀಟ್ ಒದಗಿಸಲು ಹೆಚ್ಚುವರಿಯಾಗಿ ಐದು ಹಾಸ್ಟೆಲ್‌ಗಳು ಬೇಕು ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಕೊಣಾಜೆಯಲ್ಲಿ ದೀನದಯಾಳ ಉಪಾಧ್ಯ ವಸತಿ ನಿಲಯ ನಿರ್ಮಾಣ ಆಗುತ್ತಿದ್ದು, ತಲಾ 500 ಬಾಲಕರು, ಬಾಲಕಿಯರು ಸೇರಿ 1,000 ಮಕ್ಕಳಿಗೆ ಅವಕಾಶ ಕಲ್ಪಿಸಬಹುದು. ಈ ವರ್ಷದ ಕೊನೆಯಲ್ಲಿ ಕಟ್ಟಡ ಬಳಕೆಗೆ ಲಭ್ಯವಾಗಬಹುದು. ಆದರೆ, ಎಲ್ಲ ವಿದ್ಯಾರ್ಥಿಗಳು ನಗರದಲ್ಲಿರುವ ಹಾಸ್ಟೆಲ್‌ಗಳನ್ನೇ ಬಯಸುತ್ತಾರೆ. ಹೀಗಾಗಿ, ನಗರದ ಹಾಸ್ಟೆಲ್‌ಗಳಲ್ಲಿ ಪ್ರವೇಶ ಪಡೆಯಲು ಪೈಪೋಟಿ ಹೆಚ್ಚು. ಮಂಗಳೂರು ನಗರದಲ್ಲಿ 12 ಬಾಲಕರ, 17 ಬಾಲಕಿಯರ ವಸತಿ ನಿಲಯಗಳು ಇವೆ. ಅರ್ಜಿ ಸಲ್ಲಿಸುವ ಎಲ್ಲರಿಗೂ ಇವುಗಳಲ್ಲೇ ಅವಕಾಶ ಕಲ್ಪಿಸಲು ಕಷ್ಟ ಎನ್ನುತ್ತಾರೆ ಬಿಸಿಎಂ ಜಿಲ್ಲಾ ಅಧಿಕಾರಿ ಬಿಂದಿಯಾ ನಾಯಕ್.
ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ 1,250 ಸೀಟ್ ಮಂಜೂರು ಇದ್ದು, ಕಳೆದ ವರ್ಷ ಇಲ್ಲಿ ಪ್ರವೇಶ ಪಡೆದು, ಈ ವರ್ಷ ನವೀಕರಿಸಿಕೊಂಡವರು ಸೇರಿ ಪ್ರಸ್ತುತ 1,032 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು 869 ವಿದ್ಯಾರ್ಥಿಗಳ ಪ್ರವೇಶ ಸಾಮರ್ಥ್ಯ ಹೊಂದಿದ್ದು, ಕಳೆದ ವರ್ಷದಿಂದ ಇದ್ದು ನವೀಕರಿಸಿಕೊಂಡವರು ಸೇರಿ ಪ್ರಸ್ತುತ 1,191 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚುವರಿ ವಿದ್ಯಾರ್ಥಿಗಳು ಇದ್ದರೆ, ಅವರಿಗೂ ಅವಕಾಶ ಒದಗಿಸಲಾಗುತ್ತದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.
ಕದ್ರಿಪದವುವಿನಲ್ಲಿ ಈಗಾಗಲೇ ಎರಡು ವಿದ್ಯಾರ್ಥಿ ನಿಲಯಗಳು ಇದ್ದು, ಅಲ್ಲಿ 150 ವಿದ್ಯಾರ್ಥಿಗಳ ಸಾಮರ್ಥ್ಯದ ಮತ್ತೊಂದು ಹಾಸ್ಟೆಲ್ ನಿರ್ಮಾಣ ಆಗುತ್ತಿದೆ. ಕೊಠಡಿಗಳ ದುರಸ್ತಿ, ಪೇಟಿಂಗ್, ಹೆಚ್ಚುವರಿ ಕೊಠಡಿ ನಿರ್ಮಾಣ ಹೀಗೆ ನಿರ್ವಹಣೆಗೆ ಮಾರಿಗುಡಿ ಹಾಸ್ಟೆಲ್‌ಗೆ ₹1 ಕೋಟಿ, ಸುಳ್ಯ ತಾಲ್ಲೂಕಿನ ಹಾಸ್ಟೆಲ್‌ಗೆ ₹30 ಲಕ್ಷ ಅನುದಾನ ಮಂಜೂರು ಆಗಿದೆ. ಹಾಸ್ಟೆಲ್ ಸೌಲಭ್ಯಕ್ಕೆ ಸಂಬಂಧಿಸಿ ಪ್ರಸ್ತಾವ ಸಲ್ಲಿಸಿದರೆ ಸರ್ಕಾರದಿಂದ ವಿಳಂಬವಿಲ್ಲದೆ ಅನುದಾನ ದೊರೆಯುತ್ತದೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುವ ಮೂರು ಹೊತ್ತಿನ ಆಹಾರ, ವಿದ್ಯಾರ್ಥಿಗಳು ಊಟ ಮಾಡುವ ಚಿತ್ರಗಳನ್ನು ಫುಡ್ ಟ್ರಾನ್ಸ್‌ಪರೆನ್ಸಿ ಆ್ಯಂಡ್ ಸೋಷಿಯಲ್ ಆಡಿಟ್ ತಾಣದಲ್ಲಿ ಅಪ್‌ಲೋಡ್ ಮಾಡಬೇಕು. ಜಿಲ್ಲೆಯಲ್ಲಿ ಈ ಕೆಲಸ ಅಚ್ಚುಕಟ್ಟಾಗಿ ನಡೆಯುತ್ತಿದ್ದು, ರಾಜ್ಯದಲ್ಲಿ ಪ್ರಥಮ ಅಥವಾ ದ್ವೀತಿಯ ಸ್ಥಾನವನ್ನು ದಕ್ಷಿಣ ಕನ್ನಡ ಕಾಯ್ದುಕೊಂಡು ಬಂದಿದೆ ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಎಸ್. ಹೇಮಲತಾ.
ಜಿಲ್ಲೆಗೆ ತಲಾ ಒಂದು ಮಹಿಳಾ ಮತ್ತು ಪುರುಷರ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಬರಲಿದ್ದು ಹೆಚ್ಚುವರಿ ಬೇಡಿಕೆಯ ಕೊರತೆ ನೀಗಲಿದೆ.ಬಿಂದಿಯಾ ನಾಯಕ್ ಬಿಸಿಎಂ ಜಿಲ್ಲಾ ಅಧಿಕಾರಿ
ಎರಡು ಹೊಸ ಹಾಸ್ಟೆಲ್‌ಗಳಿಗೆ ಇಲಾಖೆಯಿಂದ ಕಳೆದ ಮಾರ್ಚ್‌ನಲ್ಲಿ ಪ್ರಸ್ತಾವ ಸಲ್ಲಿಸಲಾಗಿದ್ದು ಜಿಪಂ ಸಿಇಒ ಮೂಲಕ ಜೂನ್‌ನಲ್ಲಿ ಮತ್ತೊಮ್ಮೆ ಪ್ರಸ್ತಾವ ಕಳಿಸಲಾಗಿದೆ.ಬಿ.ಎಸ್. ಹೇಮಲತಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ
‘ಬಿಸಿಎಂ ಹಾಸ್ಟೆಲ್‌ಗಳಲ್ಲಿ ಪ್ರವೇಶಕ್ಕೆ ಹೆಚ್ಚು ಪೈಪೋಟಿ ಇದ್ದು ಹಾಸ್ಟೆಲ್ ಸೌಲಭ್ಯ ಸಿಗದವರು ಪಿಜಿಗಳನ್ನು ಅವಲಂಬಿಸುತ್ತಾರೆ. ಹೆಚ್ಚು ಹಣಕೊಟ್ಟು ಪಿಜಿಗಳಲ್ಲಿ ಉಳಿಯುವುದು ವಿದ್ಯಾರ್ಥಿಗಳ ಪಾಲಕರಿಗೆ ಹೊರೆಯಾಗುತ್ತದೆ. ಹಾಸ್ಟೆಲ್ ಸಿಗದ ಕೆಲ ವಿದ್ಯಾರ್ಥಿಗಳು ಸಂಜೆ ಝೊಮೆಟೊ ಸ್ವಿಗಿ ಡೆಲಿವರಿ ಬಾಯ್ ಕೆಲಸ ಮಾಡಿ ದುಡಿದು ಬೆಳಗಿನ ಹೊತ್ತು ತರಗತಿಗಳಿಗೆ ಹಾಜರಾಗುತ್ತಾರೆ’ ಎಂದು ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಯೊಬ್ಬರು ಹೇಳಿದರು.
ವಿದ್ಯಾರ್ಥಿ ನಿಲಯಗಳಲ್ಲಿ ಇರುವ ಎಲ್ಲರಿಗೂ ಸರ್ಕಾರದಿಂದ ಬರುವ ಕಿಟ್ ಸಿಗಬೇಕು. ಕಳೆದ ವರ್ಷ ಕೆಲವು ವಿದ್ಯಾರ್ಥಿ ನಿಲಯಗಳಿಗೆ ಮಾತ್ರ ದೊರೆತಿದೆ. ಕೆಲವು ಕಡೆಗಳಲ್ಲಿ 40–50 ವಿದ್ಯಾರ್ಥಿಗಳಿಗೆ ಸೇರಿ 2–3 ಶೌಚಾಲಯಗಳು ಇವೆ. ಪ್ರತಿ ಕೊಠಡಿಯಲ್ಲಿ ನಾಲ್ವರು ಇರಬೇಕು ಎಂಬ ನಿಯಮ ಇದ್ದರೂ ಐವರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದರಿಂದ ಒಬ್ಬರಿಗೆ ಮಂಚ ಸಿಗುವುದಿಲ್ಲ. ಅನಿವಾರ್ಯವಾಗಿ ಕೆಳಗೆ ಹಾಸಿಗೆ ಹಾಸಿಕೊಳ್ಳಬೇಕಾಗುತ್ತದೆ ಎಂದು ವಿದ್ಯಾರ್ಥಿ ನಾಯಕರೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.