ADVERTISEMENT

‘ಮನೆ ಮಂದಿರ ಆಗಲಿ, ನೆಮ್ಮದಿ ನೆಲೆಸಲಿ’

ಧರ್ಮಸ್ಥಳದಲ್ಲಿ ನವಜೀವನ ಸದಸ್ಯರ ಸಮಾವೇಶ ಮತ್ತು ಕೇಂದ್ರ ಒಕ್ಕೂಟಗಳ ಪದಗ್ರಹಣ ಸಮಾರಂಭ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 5:18 IST
Last Updated 3 ಅಕ್ಟೋಬರ್ 2022, 5:18 IST
 ಸಮಾವೇಶದಲ್ಲಿ ಪಾಲ್ಗೊಂಡವರು
 ಸಮಾವೇಶದಲ್ಲಿ ಪಾಲ್ಗೊಂಡವರು   

ಉಜಿರೆ: ಸದಾಚಾರ, ಉತ್ತಮ ಚಿಂತನೆಯೊಂದಿಗೆ ಮನೆಯೇ ಮಂದಿರವಾದಾಗ ಶಾಂತಿ, ನೆಮ್ಮದಿಯ ಜೀವನ ಸಾಧ್ಯ ಎಂದು ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಬೆಳ್ತಂಗಡಿ ತಾಲ್ಲೂಕು ಘಟಕದ ಆಶ್ರಯದಲ್ಲಿ ಭಾನುವಾರ ಧರ್ಮಸ್ಥಳದಲ್ಲಿ ಗಾಂಧಿ ಜಯಂತಿ ಆಚರಣೆಯ ಅಂಗವಾಗಿ ಆಯೋಜಿಸಿದ್ದ ನವಜೀವನ ಸದಸ್ಯರ ಸಮಾವೇಶ ಮತ್ತು ಕೇಂದ್ರ ಒಕ್ಕೂಟಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಪಂಚೇಂದ್ರಿಯಗಳ ನಿಯಂತ್ರಣಕ್ಕೆ ವಿಧಿಸಿರುವ ಕೆಲವು ವಿಧಿ- ನಿಯಮಗಳು, ನಿಷೇಧಗಳು ಧರ್ಮದ ಪ್ರತೀಕವಾಗಿವೆ. ಅವುಗಳನ್ನು ದೃಢಸಂಕಲ್ಪದಿಂದ ಪಾಲಿಸಿದಾಗ ಜೀವನ ಪಾವನವಾಗುತ್ತದೆ ಎಂದರು.

ADVERTISEMENT

ಮದ್ಯದ ದಾಸರಾದಾಗ ದೇಹದ ಒಂದೊಂದು ಅಂಗ ನಿಷ್ಕ್ರಿಯವಾಗಿ, ಕ್ಷುಲ್ಲಕ ಜೀವನ ನಡೆಸಬೇಕಾಗುತ್ತದೆ. ತಾತ್ಕಾಲಿಕ ಸಂತೋಷದ ಭ್ರಮೆಯನ್ನು ಬಿಟ್ಟು, ಸಂಕಲ್ಪ ಶಕ್ತಿಯಿಂದ ಮದ್ಯ ವರ್ಜಿಸಿ ವ್ಯಸನಮುಕ್ತರಾಗಿ. ಈ ನಿಟ್ಟಿನಲ್ಲಿ ನವಜೀವನ ಸಮಿತಿ ಸದಸ್ಯರ ಸಂಕಲ್ಪ ಶ್ಲಾಘನೀಯ ಎಂದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಅಹಿಂಸಾ ಮಾರ್ಗದಿಂದ ಸಮಾಜ ಸಂಘಟನೆಯೊಂದಿಗೆ ಗಾಂಧೀಜಿ ನೇತೃತ್ವದಲ್ಲಿ ಗಳಿಸಿದ ಸ್ವಾತಂತ್ರ್ಯವನ್ನು ರಕ್ಷಿಸಿ, ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆ. ಅವರ ಕನಸನ್ನು ನನಸು ಮಾಡಿ, ದೇಶದ ಉಜ್ವಲ ಭವಿಷ್ಯವನ್ನು ರೂಪಿಸಬೇಕು ಎಂದರು.

ಗ್ರಾಮಾಭಿವೃದ್ಧಿ ಯೋಜನೆ ಫಲಾನು
ಭವಿಗಳು ₹84 ಸಾವಿರ ಕೋಟಿ ವ್ಯವಹಾರ ನಡೆಸಿ, ₹3 ಸಾವಿರ ಕೋಟಿ ಉಳಿತಾಯ ಮಾಡಿದ್ದಾರೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮೂಡು
ಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿದರು.

ಶ್ರದ್ಧಾ ಅಮಿತ್, ಡಾ. ಮೈತ್ರಿ, ಸಂಪತ್ ಸಾಮ್ರಾಜ್ಯ, ಅನಿಲ್ ಕುಮಾರ್, ಆರ್.ಬಿ. ಹೆಬ್ಬಳ್ಳಿ, ವಿವೇಕ್ ಪಾಯಸ್, ವಸಂತ ಸಾಲ್ಯಾನ್ ಇದ್ದರು.

ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಸ್ವಾಗತಿಸಿದರು. ಯೋಜನಾಧಿಕಾರಿ ಸುರೇಂದ್ರ ಕುಮಾರ್ ಧನ್ಯವಾದವಿತ್ತರು. ಯಶವಂತ್ ಮತ್ತು ತಿಮ್ಮಯ್ಯ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.