ಉಳ್ಳಾಲ: ಭಾರಿ ಮಳೆಯಿಂದಾಗಿ ಉಳ್ಳಾಲದ ಮೇಲಂಗಡಿಯ ಮನೆಯ ಹೆಂಚಿನ ಚಾವಣಿಯು ಶುಕ್ರವಾರ ಬೆಳಿಗ್ಗೆ ಕುಸಿದು ಮನೆಯೊಳಗಿದ್ದ ಬಾಲಕಿ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ಉಳಿದವರು ಮನೆಯ ಹಾಲ್‌ನ ಸೀಲಿಂಗ್‌ನಿಂದ ರಕ್ಷಣೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೇಲಂಗಡಿ ನಿವಾಸಿ ಖತೀಜಮ್ಮ ಎಂಬುವರ ಮನೆಯ ಚಾವಣಿ ಕುಸಿದಿದ್ದು, ಖತೀಜಮ್ಮ ಅವರ ಹಿರಿಯ ಪುತ್ರ ಖಲೀಲ್ (38), ಮೊಮ್ಮಗಳಾದ ಖತೀಜತುಲ್ ಕುಬ್ರ (11) ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವೇಳೆ ಖತೀಜಮ್ಮ ಮತ್ತು ಕಿರಿಯ ಮಗ, ನಗರಸಭೆಯ ಮಾಜಿ ಉದ್ಯೋಗಿ ಅಬ್ಬಾಸ್ ಅವರು ಮನೆಯ ಹಾಲ್‌ನಲ್ಲಿದ್ದು, ಚಾವಣಿಯ ಕೆಳಗಿನ ಫ್ಲೈವುಡ್ ಸೀಲಿಂಗ್ ಇದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಖತೀಜಮ್ಮ ಅವರ ಇಬ್ಬರು ಸೊಸೆಯಂದಿರು ಉಡುಪಿಗೆ ತೆರಳಿದ್ದರು.
ಖತೀಜಮ್ಮ ಅವರದ್ದು ಬಡ ಕುಟುಂಬವಾಗಿದ್ದು, ಕಿರಿಯ ಮಗ ಅಬ್ಬಾಸ್ ಅಂಗವಿಕಲರಾಗಿದ್ದಾರೆ. ಅವರ ಮನೆಯ ಗೋಡೆ ಮತ್ತು ಚಾವಣಿ ಶಿಥಿಲವಾಗಿದ್ದು, ಕೂಡಲೇ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ನಗರಸಭೆ ವತಿಯಿಂದ ಮನೆಯನ್ನು ದುರಸ್ತಿ ಮಾಡಬೇಕು ಎಂದು ಸ್ಥಳೀಯ ನಗರಸಭೆ ಸದಸ್ಯೆ ಖಮರುನ್ನೀಸ ನಿಝಾಮ್ ಎಂಬುವರು ನಗರಸಭೆಯ ಪ್ರಭಾರ ಪೌರಾಯುಕ್ತೆ ವಾಣಿ ಆಳ್ವ ಅವರಿಗೆ ಜುಲೈ 16ರಂದು ಮನವಿ ಸಲ್ಲಿಸಿದ್ದರು. ಆದರೆ, ನಗರಸಭೆ ಸ್ಪಂದಿಸಿರಲಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ಖತೀಜಮ್ಮ ಅವರ ಮನೆ ಶಿಥಿಲಗೊಂಡಿರುವ ಬಗ್ಗೆ ಲಿಖಿತ ಮನವಿ ಕೊಟ್ಟರೂ ನಗರಸಭೆಯ ಪೌರಾಯುಕ್ತೆ ವಾಣಿ ಮತ್ತು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಅವಘಡ ನಡೆದಿದೆ. ಮನವಿಯ ಪ್ರತಿಯನ್ನು ಸ್ಥಳೀಯ ಶಾಸಕ, ಜಿಲ್ಲಾಧಿಕಾರಿಗೂ ನೀಡುವಂತೆ ನಮೂದಿಸಲಾಗಿತ್ತು ಎಂದು ಖಮರುನ್ನೀಸ ನಿಝಾಮ್ ಆಕ್ರೋಶ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.