ADVERTISEMENT

ಮಾಲಾಧಾರಿಗಳಿಗೆ ಮಾನವೀತೆಯ ಅನ್ನ!

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 13:45 IST
Last Updated 31 ಮಾರ್ಚ್ 2020, 13:45 IST
ಕದ್ರಿಯಲ್ಲಿ ಆಹಾರ ವಿತರಿಸುತ್ತಿರುವುದು
ಕದ್ರಿಯಲ್ಲಿ ಆಹಾರ ವಿತರಿಸುತ್ತಿರುವುದು   

ಮಂಗಳೂರು: ಶಬರಿಮಲೆ ಮಾಲಾಧಾರಣೆ ಮಾಡಿದ ಬಳಿಕ ಕದ್ರಿಯಲ್ಲಿ ವಾಸ್ತವ್ಯವಿದ್ದು, ಲಾಕ್‌ಡೌನ್‌ ಬಳಿಕ ಆಹಾರ ಸಿಗದಿದ್ದ ‘ಮಾಲಾಧಾರಿಗಳು’ ಸೇರಿದಂತೆ ಹಲವರಿಗೆ ಆಹಾರ ನೀಡುವ ಮಾನವೀಯ ಕಾರ್ಯವನ್ನು ಜಪ್ಪುವಿನ ಆಲ್‌ ಸಾದ್ ವೆಲ್ಫೇರ್ ಅಸೋಸಿಯೇಷನ್ ಮಾಡುತ್ತಿದೆ.

‘ಲಾಕ್‌ಡೌನ್‌ ಬಳಿಕ ನಾವು ಹಸಿದವರಿಗೆ ಊಟ ನೀಡುತ್ತಿದ್ದೇವೆ. ಆರಂಭದಲ್ಲಿ ಜಿಲ್ಲಾಡಳಿತವೇ ನೀಡುತ್ತದೆ ಎಂದಿದ್ದರು. ಆದರೆ, ಆರಂಭಗೊಳ್ಳಲಿಲ್ಲ. ಬಳಿಕ ಎಲ್ಲರಿಗೂ ತಲುಪುತ್ತಿಲ್ಲ ಎಂಬುದನ್ನು ಮನಗಂಡು ನಮ್ಮ ಸೇವೆ ಮುಂದುವರಿಸಿದ್ದೇವೆ’ ಎಂದು ಅಸೋಸಿಯೇಷನ್‌ನ ಜರೂದ್ ಅಹ್ಮದ್ ತಿಳಿಸಿದರು.

‘ಪ್ರತಿನಿತ್ಯ ಮಧ್ಯಾಹ್ನ 500 ಸಸ್ಯಾಹಾರಿ ಪಲಾವ್ ಮತ್ತು ತಂಪು ಪಾನೀಯ ಅಥವಾ ನೀರಿನ ಬಾಟಲಿ ವಿತರಿಸುತ್ತೇವೆ. ಕದ್ರಿ, ರೈಲು ನಿಲ್ದಾಣ, ಲಾಲ್‌ಭಾಗ್, ಕೊಟ್ಟಾರ ಚೌಕಿ, ಪಂಜಿಮೊಗರು, ಕಾವೂರು, ಕೂಳೂರು ಇತ್ಯಾದಿ ಕಡೆ ಹೋಗಿ ನೀಡಿಬರುತ್ತೇವೆ. ನಮ್ಮಂತಹ ಐದು ಸಂಘಟನೆಗಳು ಈ ಕೆಲಸ ಮಾಡಿಕೊಂಡಿದೆ’ ಎಂದರು. ಇಶ್ರಾನ್, ಸರಾಫತ್, ಮಹಮ್ಮದ್ ಮತ್ತಿತರರು ಇದ್ದರು.

ADVERTISEMENT

‘ಮಾಲೆ ಧಾರಣೆ ಬಳಿಕ ಮನೆಗೆ ಹೋಗುವುದಿಲ್ಲ. ಹಗಲು ಕೆಲಸ ಮಾಡಿ, ರಾತ್ರಿ ದೇಗುಲದ ಬಳಿ ಪ್ರಾರ್ಥಿಸಿ, ವಿಶ್ರಾಂತಿ ತೆಗೆದುಕೊಳ್ಳುತ್ತೇವೆ. ವರ್ಷಂಪ್ರತಿಯೂ ದೇಗುಲದಿಂದ ಪ್ರಸಾದ ನೀಡುತ್ತಿದ್ದರು. ಆದರೆ, ‘ಜನತಾ ಕರ್ಫ್ಯೂ’ ಬಳಿಕ ಊಟಕ್ಕೂ ಕಷ್ಟವಾಯಿತು. ಜಿಲ್ಲಾಡಳಿತ– ಜನಪ್ರತಿನಿಧಿಗಳ ಹೇಳಿಕೆ ಬಂತೇ ಹೊರತು, ಹೊಟ್ಟೆಗೆ ಏನೂ ಸಿಗಲಿಲ್ಲ. ಇದರಿಂದಾಗಿ 50 ಮಂದಿಯಲ್ಲಿ 25 ಮಂದಿ ತಮ್ಮ ಮನೆಗಳಿಗೆ ವಾಪಸ್ ಹೋದರು. ನಾವು 25 ಮಂದಿ ಇಲ್ಲೇ ವ್ರತದಲ್ಲಿ ಉಳಿದಿದ್ದು, ಇವರು ಅನ್ನ ನೀಡುತ್ತಿದ್ದಾರೆ’ ಎಂದು ಮಾಲಾಧಾರಿ ಕೂಳೂರಿನ ಗೋಪಿನಾಥ ಹಾಗೂ ಇತರರು ಕೃತಜ್ಞತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.