
ಮಂಗಳೂರು: ಅಡ್ಯಾರಿನ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಇದೇ 21 ಮತ್ತು 22ರಂದು ಐಇಇಇ ಅಂತರರಾಷ್ಟ್ರೀಯ ಸಮ್ಮೇಳನ ಏರ್ಪಡಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್.ಎಸ್.ಇಂಜಗನೇರಿ, ‘ಕಂಪ್ಯೂಟಿಂಗ್, ಸೆಮಿಕಂಡಕ್ಟರ್, ಮೆಕಟ್ರಾನಿಕ್ಸ್, ಇಂಟೆಲಿಜೆಂಟ್ ಸಿಸ್ಟಮ್ಸ್ ಮತ್ತು ಕಮ್ಯೂನಿಕೆೇಷನ್ಸ‌್ ಕ್ಷೇತ್ರಗಳ ತಜ್ಞರು ಸಮ್ಮಳನದಲ್ಲಿ ಭಾಗವಹಿಸಲಿದ್ದಾರೆ. ಸಂಶೋಧಕರು, ಶಿಕ್ಷಣ ತಜ್ಞರು, ಉದ್ಯಮ ಕ್ಷೇತ್ರದ ದಿಗ್ಗಜರು ಹಾಗೂ ವಿದ್ಯಾರ್ಥಿಗಳು ಬಹು ವಿಷಯಗಳ ಸಂಶೋಧನೆ ಆಧರಿತ ಸಂವಾದವನ್ನು ಒಂದೆೇ ವೆೇದಿಕೆಯಲ್ಲಿ ನಡೆಸಲು ಅನುವು ಮಾಡಿಕೊಡುವುದು ಇದರ ಉದ್ದೇಶ. ತಜ್ಞರ ಉಪನ್ಯಾಸ, ಪ್ರಮುಖ ಸಂಶೋಧನೆಗಳ ಪ್ರಬಂಧ ಮಂಡನೆ, ಪೋಸ್ಟರ್ ಗೋಷ್ಠಿಗಳು, ಸಮಸ್ಯೆಗಳಿಗೆ ನವೀನ ಪರಿಹಾರೋಪಾಯಗಳ ಸಂವಾದಕ್ಕೆ ಇದು ಅವಕಾಶ ಕಲ್ಪಿಸಲಿದೆ’ ಎಂದರು.
‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿದ್ಯಾಶಂಕರ ಅವರು ಸಮ್ಮೇಳನವನ್ನು ಇದೇ 21ರಂದು ಬೆಳಿಗ್ಗೆ 9.30ಕ್ಕೆ ಉದ್ಘಾಟಿಸುವರು. ಸಹ್ಯಾದ್ರಿ ಫೌಂಡೇಷನ್ ಅಧ್ಯಕ್ಷ ಮಂಜುನಾಥ ಭಂಡಾರಿ ಅಧ್ಯಕ್ಷತೆ ವಹಿಸುವರು. ಟಿಸಿಎಸ್ ವಿಜ್ಞಾನಿ ಪ್ರಶಾಂತ್ ಮಿಶ್ರ, ವಿಟಿಯು ಸೆನೆಟ್ ಸದಸ್ಯ ಚೆಂಗಪ್ಪ ಮುಂಜಂಡಿರಾ ಅತಿಥಿಗಳಾಗಿರುವರು. 200ಕ್ಕೂ ಹೆಚ್ಚು ಉದ್ಯಮಿಗಳು ಭಾಗವಹಿಸುವ ನಿರೀಕ್ಷೆ ಇದೆ. ಕಾಲೇಜು ಆಯೋಜಿಸುತ್ತಿರುವ ಮೂರನೇ ಐಇಇಇ ಅಂತರರಾಷ್ಟ್ರೀಯ ಸಮ್ಮೇಳನವಿದು. 400 ಪ್ರಬಂಧಗಳು ಸಲ್ಲಿಕೆಯಾಗಿದ್ದು, ಸುಮಾರು 60 ಪ್ರಬಂಧಗಳ ಮಂಡನೆಗೆ ಅವಕಾಶ ಕಲ್ಪಿಸಲಾಗುತ್ತದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಉಪಪ್ರಾಂಶುಪಾಲ ಸುಧೀರ್ ಶೆಟ್ಟಿ, ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಮುಸ್ತಾಫಾ ಬಸ್ತಿಕೋಡಿ, ಕೃತಕ ಬುದ್ಧಿಮತ್ತೆ ವಿಭಾಗದ ಮುಖ್ಯಸ್ಥೆ ಪುಷ್ಪಲತಾ, ಪ್ರಾಧ್ಯಾಪಕಿ ಜಾಯ್ಲಿನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.