ADVERTISEMENT

ಮಂಗಳೂರು | 'ಗುಂಡಿಯಿಂದ ಅಪಘಾತವಾದರೆ ಎನ್ಎಚ್‌ಎಐ ವಿರುದ್ಧವೂ ಕ್ರಮ'

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಡಿಸಿಪಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 5:34 IST
Last Updated 23 ಸೆಪ್ಟೆಂಬರ್ 2024, 5:34 IST
ಸಭೆಯಲ್ಲಿ ಸಿದ್ಧಾರ್ಥ ಗೋಯಲ್‌ ಹಾಗೂ ದಿನೇಶ್‌ಕುಮಾರ್‌ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಅಹವಾಲು ಆಲಿಸಿದರು: ಪ್ರಜಾವಾಣಿ ಚಿತ್ರ 
ಸಭೆಯಲ್ಲಿ ಸಿದ್ಧಾರ್ಥ ಗೋಯಲ್‌ ಹಾಗೂ ದಿನೇಶ್‌ಕುಮಾರ್‌ ಅವರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಅಹವಾಲು ಆಲಿಸಿದರು: ಪ್ರಜಾವಾಣಿ ಚಿತ್ರ    

ಮಂಗಳೂರು:‘ ನಗರದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಗಳು ಮಳೆಯಿಂದಾಗಿ ಹದಗೆಟ್ಟಿವೆ. ಅವುಗಳ ಗುಂಡಿಗಳನ್ನು ಮುಚ್ಚುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಈಗಾಗಲೇ ಸೂಚನೆ ನೀಡಿದ್ದೇವೆ. ಹೆದ್ದಾರಿಯ ಗುಂಡಿಗಳಿಂದಾಗಿ ಅಪಘಾತ ಸಂಭವಿಸಿದರೆ, ಎನ್‌ಎಚ್‌ಎಐ ವಿರುದ್ಧವೂ ಪ್ರಕರಣ ದಾಖಲಿಸುತ್ತೇವೆ’ ಎಂದು ಡಿಸಿಪಿ (ಸಂಚಾರ ಮತ್ತು ಅಪರಾಧ) ದಿನೇಶ್ ಕುಮಾರ್ ತಿಳಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಕುಂದು ಕೊರತೆ ಆಲಿಸುವ ಸಭೆಯಲ್ಲಿ ಭಾನುವಾರ ಈ ಸಮುದಾಯದ ಮುಖಂಡರೊಬ್ಬರು ಹೆದ್ದಾರಿಗಳ ಅವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿದ್ದು, ಅದಕ್ಕೆ ಡಿಸಿಪಿ ಈ ರೀತಿ ಸ್ಪಷ್ಟನೆ ನೀಡಿದರು.

‘ಸ್ಮಾರ್ಟ್‌ಸಿಟಿ ಯೋಜನೆಯ ಅಧಿಕಾರಿಗಳ ಶಿಫಾರಸಿನಂತೆ ನಗರದ  ವಾಹನ ಸಂಚಾರ ವ್ಯವಸ್ಥೆಯಲ್ಲಿ ಕೆಲವೊಂದು ಮಾರ್ಪಾಡು ಮಾಡಿದ್ದೆವು.  ಸಿಟಿ ಬಸ್ ನಿಲ್ದಾಣಕ್ಕೆ ಸಮೀಪದಲ್ಲೇ ಇರುವ ಲೇಡಿಗೋಷನ್‌ ಆಸ್ಪತ್ರೆ ಪಕ್ಕದ ಬಸ್ ನಿಲ್ದಾಣದ ಬಳಿ ಬಸ್‌ ನಿಲುಗಡೆಗೆ ಅವಕಾಶ ನೀಡದಂತೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಪತ್ರ ಬರೆದಿದ್ದರು. ಆ ಪ್ರಕಾರ ನಾವು ಅಲ್ಲಿ ಬಸ್ ನಿಲುಗಡೆ ನಿಷೇಧಿಸಿದ್ದೆವು. ಆದರೆ, ಈ ಕ್ರಮಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ಇನ್ನು ಲೇಡಿಗೋಷನ್‌ ಆಸ್ಪತ್ರೆ ಪಕ್ಕದ ನಿಲ್ದಾಣದ ಬಳಿಯೂ ಬಸ್‌ ನಿಲುಗಡೆಗೆ ಅವಕಾಶ ನೀಡಲಿದ್ದೇವೆ’ ಎಂದರು. 

ADVERTISEMENT

ದ್ವಿಮುಖ ಸಂಚಾರ: ‘ಸುಗಮ ಸಂಚಾರದ ದೃಷ್ಟಿಯಿಂದ ನಗರದ ಗಡಿಯಾರ ಗೋಪುರದಿಂದ ಹ್ಯಾಮಿಲ್ಟನ್ ವೃತ್ತದವರೆಗಿನ ಮಾರ್ಗದಲ್ಲಿ ಸದ್ಯ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ, ಇಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂದು ಮನವಿಗಳು ಬಂದಿವೆ. ಇದಕ್ಕಾಗಿ ಗಡಿಯಾರ ಗೋಪುರದ ಬಳಿ ಸೂಕ್ತ ಮಾರ್ಪಾಡು ಮಾಡುವಂತೆ ಸ್ಮಾರ್ಟ್‌ಸಿಟಿ ಅಧಿಕಾರಿಗಳನ್ನು ಕೋರಿದ್ದೇವೆ’ ಎಂದರು. 

ನಗರದ ಶಾಲಾ ಪ್ರಾಂಗಣಗಳ ಬಳಿಯ ರಸ್ತೆಗಳಲ್ಲಿ ವಿದ್ಯಾರ್ಥಿಗಳ ಪೋಷಕರ ಹಾಗೂ ಶಾಲಾ ವಾಹನಗಳನ್ನು ನಿಲ್ಲಿಸುವುದರಿಂದ ವಾಹನ ದಟ್ಟಣೆಯಾಗುತ್ತಿರುವ ಬಗ್ಗೆ ೀ ಸಭೆಯಲ್ಲಿ ಹಿಂದೆ ಗಮನ ಸೆಳೆದರೂ ಪರಿಹಾರ ಸಿಕ್ಕಿಲ್ಲ ಎಂದು ಕೆಲವು ಪರಿಶಿಷ್ಟ ಜಾತಿಯ ಮುಖಂಡರು ತಿಳಿಸಿದರು.

’ಈ ಸಮಸ್ಯೆ ಬಗ್ಗೆ ಶಾಲಾ ಆಡಳಿತ ಮಂಡಳಿಗಳ ಗಮನಕ್ಕೆ ತಂದಿದ್ದೇವೆ. ಇನ್ನು ಶಾಲಾ ಪ್ರಾಂಗಣಗಳ ಬಳಿ ವಾಹನ ನಿಲುಗಡೆ ಮಾಡಿ, ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ್ದು ಕಂಡು ಬಂದರೆ, ಅದರ ವಿಡಿಯೊ ಮಾಡಿ  ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ದಿನೇಶ್‌ ಕುಮಾರ್‌ ಭರವಸೆ ನೀಡಿದರು.

ರಾತ್ರಿ ವೇಳೆ ಮುಂಗಳಮುಖಿಯರು  ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತಾರೆ ಎಂದು ಮುಖಂಡರೊಬ್ಬರು ಗಮನ ಸೆಳೆದರು.

‘ಮಂಗಳಮುಖಿಯರು ಇರಲಿ, ಅಥವಾ ಯಾರೇ ಇರಲಿ ರಾತ್ರಿ ವೇಳೆ ಈ ರೀತಿ ವಾಹನ ತಡೆದು ಅಡ್ಡಿಪಡಿಸಿದರೆ, ಸುಲಿಗೆಗೆ ಮುಂದಾದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ರಾತ್ರಿವೇಳೆ ವಾಹನ ಗಸ್ತು ಹೆಚ್ಚಿಸಬೇಕು’ ಎಂದು ಡಿಸಿಪಿಯವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯಲ್ ಅಧ್ಯಕ್ಷತೆ ವಹಿಸಿದ್ದರು.
ಎಸಿಪಿ ಧನ್ಯಾ ನಾಯಕ್  ಭಾಗವಹಿಸಿದ್ದರು.

ಗಡಿಯಾರ ಗೋಪುರ– ಹ್ಯಾಮಿಲ್ಟರ್ ವೃತ್ತದ ನಡುವೆ ದ್ವಿಮುಖ ಸಂಚಾರ ಲೇಡಿಗೋಷನ್‌ ಪಕ್ಕ ಬಸ್ ನಿಲುಗಡೆಗೆ ಮತ್ತೆ ಅವಕಾಶ ರಾತ್ರಿ ವೇಳೆ ಪೊಲೀಸ್‌ ಗಸ್ತು ಹೆಚ್ಚಿಸಲು ಸೂಚನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.