
ಮಂಗಳೂರು: ‘ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ವಲಸಿಗರು ಯಾರು? ಅವರು ಅಲ್ಲಿಗೆ ಬಂದು ನೆಲೆಸಲು ಅವಕಾಶ ಕೊಟ್ಟಿದ್ದು ಯಾರು, ಅವರು ಬಂದಿದ್ದು ಏಕೆ? ಅವರು ಬಂದಿದ್ದು ಎಲ್ಲಿಂದ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು. ಇದಕ್ಕಾಗಿ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು’ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಒತ್ತಾಯಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಅಲ್ಲಿ ಒಕ್ಕಲೆಬ್ಬಿಸಿದವರಿಂದ ಯಾವುದೇ ದಾಖಲೆ ಪತ್ರವನ್ನು ಕೇಳದೆಯೇ ಅವರಿಗೆ ನಾಲ್ಕೈದು ಕಿ.ಮೀ ದೂರದಲ್ಲಿ ಪುನರ್ವಸತಿ ಕಲ್ಪಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಾಗಿದೆ. ಈ ಬೆಳವಣಿಗೆಗಳ ಹಿಂದೆ ವಸತಿ ಸಚಿವ ಜಮೀರ್ ಅಹಮದ್ ಖಾನ್ ಕೈವಾಡ ಇದೆ’ ಎಂದು ಅವರು ಆರೋಪಿಸಿದರು.
‘ಅಕ್ರಮ ವಲಸಿಗರಿಗೆ ವಸತಿ ಕಲ್ಪಿಸುವುದರ ಹಿಂದೆ ಕೇರಳದ ರಾಜಕೀಯ ಒತ್ತಡ ಕೆಲಸ ಮಾಡಿದೆ.ಎರಡೂವರೆ ವರ್ಷದಲ್ಲಿ ರಾಜ್ಯದ ಬಡವರಿಗೆ ಸರ್ಕಾರ ಒಂದೇ ಒಂದು ಮನೆ ಕೊಟ್ಟಿಲ್ಲ. ನಗರದಲ್ಲಿ ವಸತಿ ಜಮೀನಿಗಾಗಿ ನಮೂನೆ 94 ಸಿ ಮತ್ತು 94ಸಿ.ಸಿ ಅಡಿ ಅರ್ಜಿ ಸಲ್ಲಿಸಲಿಕ್ಕೂ ಅವಕಾಶ ಕಲ್ಪಿಸಿಲ್ಲ. ನಮ್ಮ ರಾಜ್ಯದವರ ಪರಿಸ್ಥಿತಿ ಹೀಗಿರುವಾಗ ಹೊರರಾಜ್ಯದ ಅಕ್ರಮ ವಲಸಿಗರಿಗೆ ಮನೆ ಕಟ್ಟಿಕೊಡುವ ಔಚಿತ್ಯವಾದರೂ ಏನು’ ಎಂದು ಅವರು ಪ್ರಶ್ನಿಸಿದರು.
‘ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ಮನೆಕಟ್ಟಿಕೊಂಡ ವಲಸಿಗರಿಗೆ ಒಮ್ಮೆಗೆ ಮಾತ್ರ ಅನ್ವಯವಾಗುವಂತೆ ಉಚಿತವಾಗಿ ಮನೆ ಕಟ್ಟಿಕೊಡುವುದಾಗಿ ಸರ್ಕಾರ ಹೇಳುತ್ತಿದೆ. ಸಚಿವ ಸಂಪುಟಕ್ಕೆ ಈ ಬಗ್ಗೆ ವಿಶೇಷ ಅಧಿಕಾರ ಇರಬಹುದು. ಆದರೂ ಈ ವಿಚಾರದಲ್ಲಿ ಕಾನೂನು ಹೋರಾಟ ನಡೆಸುವ ಬಗ್ಗೆ ಚಿಂತನೆ ನಡೆಸಿದ್ದೇವೆ’ ಎಂದರು.
‘ಕೋಗಿಲು ಬಡಾವಣೆಯಲ್ಲಿ 2023ರವರೆಗೆ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮ ವಸತಿಗಳು ಇರಲಿಲ್ಲ. 2023ಕ್ಕೂ ಹಿಂದಿನ ಗೂಗಲ್ ನಕಾಶೆಯಲ್ಲಿ ಅಲ್ಲಿ ಬೆರಳೆಣಿಕೆಯ ಮನೆಗಳಿದ್ದುದು ಕಾಣಿಸುತ್ತದೆ. ಜಮೀರ್ ಅವರ ಗ್ಯಾಂಗ್ ಅಕ್ರಮ ವಲಸಿಗರನ್ನು ಅಲ್ಲಿ ಕರೆತಂದು ಕೂರಿಸಿದೆ. ಅಲ್ಲಿನ ಎಲ್ಲಾ ಜಾಗವನ್ನು ಒತ್ತುವರಿ ಮಾಡಲಾಗಿದೆ. ಇದರ ಹಿಂದೆ ದೊಡ್ಡ ಪಿತೂರಿ ನಡೆದಿದೆ’ ಎಂದು ಆರೋಪಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹಮದ್ ಖಾನ್ ಅವರ ಜಮೀನನ್ನು ನಾವು ಹೋಗಿ ಒತ್ತುವರಿ ಮಾಡಿದರೆ, ನಮಗೆ ಅಲ್ಲಿ ಮನೆ ಕಟ್ಟಿಸಿ ಕೊಡುತ್ತಾರೆಯೇ?. ಮುಸಲ್ಮಾನರ ಮತಕ್ಕಾಗಿ ಈ ರೀತಿ ಮಾಡುವುದು ಸರಿಯಲ್ಲ. ಎಲ್ಲೆಲ್ಲಿಂದ ಬಂದು ಅಕ್ರಮವಾಗಿ ನೆಲೆಸಿದವರಿಗೆ ಮನೆ ಕಟ್ಟಿಕೊಡುವ ಸರ್ಕಾರ ರಾಜ್ಯದಲ್ಲೇ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿ ಕೊಟ್ಟಿಲ್ಲ. ಕೇರಳದಲ್ಲಿ ಕಾಡಾನೆ ದಾಳಿಗೊಳಗಾದರೂ ನಮ್ಮ ರಾಜ್ಯದಿಂದ ಪರಿಹಾರ ನೀಡಲಾಗುತ್ತದೆ. ರಾಜ್ಯದ ಜನತೆ ಕ್ಷಮಿಸಲಾಗದ ಅನ್ಯಾಯವನ್ನು ಸರ್ಕಾರ ಮಾಡುತ್ತಿದೆ’ ಎಂದರು.
ಈಶಾನ್ಯ ಹಾಗೂ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ನೆಲೆಸಲು ‘ಇನ್ನರ್ ಲೈನ್ ಪರ್ಮಿಟ್’ ಪಡೆಯುವ ವ್ಯವಸ್ಥೆಯನ್ನು ನಮ್ಮ ರಾಜ್ಯದಲ್ಲೂ ಜಾರಿಗೆ ತರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದಕ್ಕೂ ಮೊದಲು ನಮ್ಮ ರಾಜ್ಯದಲ್ಲಿ ಎಷ್ಟು ಮಂದಿಗೆಸ್ವಂತ ಸೂರು ಇಲ್ಲ, ಸ್ವಂತ ಜಮೀನು ಹೊಂದಿಲ್ಲ ಎಂಬ ದತ್ತಾಂಶಗಳನ್ನು ಕಲೆ ಹಾಕಿ ಅದಕ್ಕೊಂದು ವ್ಯವಸ್ಥೆ ಕಲ್ಪಿಸಿಕೊಳ್ಳಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.