ಮಂಗಳೂರು: ಪಾವೂರು ಉಳಿಯ, ರಾಣಿಪುರ ಹಾಗೂ ಉಳ್ಳಾಲ ಹೊಯ್ಗೆ ದ್ವೀಪದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿಲ್ಲಿಸುವಂತೆ ಒತ್ತಾಯಿಸಿ, ಸೆ.27ರಂದು ಮಧ್ಯಾಹ್ನ 3 ಗಂಟೆಗೆ ಡಾ. ಅಂಬೇಡ್ಕರ್ ವೃತ್ತದಿಂದ ಮಿಲಾಗ್ರಿಸ್‌ವರೆಗೆ ಪಾದಯಾತ್ರೆ ನಡೆಸಿ, ನಂತರ ಮಿನಿ ವಿಧಾನಸೌಧದ ಎದುರು ಸಾರ್ವಜನಿಕರ ಸಭೆ ನಡೆಸಲಾಗುವುದು ಎಂದು ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ ಅಧ್ಯಕ್ಷ ಆಲ್ವಿನ್ ಡಿಸೋಜ ಹೇಳಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉಳ್ಳಾಲ ತಾಲ್ಲೂಕಿನ ಪಾವೂರು ಉಳಿಯ ದ್ವೀಪದಲ್ಲಿ 55 ಕುಟುಂಬಗಳು ನೂರಾರು ವರ್ಷಗಳಿಂದ ವಾಸವಾಗಿವೆ. ಇಲ್ಲಿ ಇದ್ದ 80 ಎಕರೆ ಪ್ರದೇಶ ಇತ್ತು, ಅಕ್ರಮ ಮರಳು ಗಣಿಗಾರಿಕೆಯಿಂದ ಈ ದ್ವೀಪದ ಭೂಭಾಗ 40 ಎಕರೆಗೆ ತಲುಪಿದೆ. ಅಲ್ಲಿನ ಜನರಿಗೆ ರಸ್ತೆ, ಶುದ್ಧ ಕುಡಿಯುವ ನೀರು ಇಲ್ಲ. ಇಲ್ಲಿ ನಿರಂತರವಾಗಿ ನಡೆಯುವ ಅಕ್ರಮ ಮರಳು ಗಣಿಗಾರಿಕೆ ನಿಲ್ಲಿಸುವಂತೆ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಲವು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ’ ಎಂದರು.
ಮರಳು ಗಣಿಗಾರಿಕೆಯಿಂದ ರಾಣಿಪುರ ಉಳಿಯದಲ್ಲಿ (ಕುದ್ರು) ಮನೆಗಳು ಅಪಾಯದಲ್ಲಿವೆ. ಉಳ್ಳಾಲ ಹೊಯ್ಗೆಯ ನಿವಾಸಿಗಳು ಮೀನು ಹಿಡಿಯುವ ಹಾಗೂ ಚಿಪ್ಪು ಹೆಕ್ಕಿ ಜೀವನ ನಡೆಸುತ್ತಾರೆ. ಜನರ ಗೋಳು ಕೇಳುವವರಿಲ್ಲದಂತಾಗಿದೆ. ಜಿಲ್ಲಾಡಳಿತವನ್ನು ಎಚ್ಚರಿಸುವ ಉದ್ದೇಶದಿಂದ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಕಥೋಲಿಕ್ ಸಭಾದ ಪ್ರಮುಖರಾದ ರೋಯ್ ಕ್ಯಾಸ್ತಲಿನೊ, ಪಾವ್ ರೋಲ್ಸಿ ಡಿಕೋಸ್ತ, ಸ್ಟ್ಯಾನಿ ಲೋಬೊ, ಗಿಲ್ಬರ್ಟ್ ಡಿಸೋಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.