ADVERTISEMENT

ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 7:47 IST
Last Updated 10 ಅಕ್ಟೋಬರ್ 2021, 7:47 IST

ಮಂಗಳೂರು: ಮೂಡುಬಿದಿರೆಯಲ್ಲಿ ಮುಸ್ಲಿಂ ಪುರುಷನೊಂದಿಗೆ ಪರಿಚಿತ ಹಿಂದೂ ಮಹಿಳೆಯರು ಕಾರಿನಲ್ಲಿ ಪ್ರಯಾಣಿಸಿದ್ದನ್ನು ಪ್ರಶ್ನಿಸಿದ ಬಜರಂಗದಳ ಕಾರ್ಯಕರ್ತರು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ.

ಶನಿವಾರ ಬೆಳಿಗ್ಗೆ ಉಡುಪಿ ಜಿಲ್ಲೆಯ ಕಾರ್ಕಳದ ಗೀತಾ ತನ್ನ ಸ್ನೇಹಿತೆ ಮಂಜುಳಾ ಅವರ ಜೊತೆ ತಮ್ಮ ಆ್ಯಕ್ಟಿವಾ ಸ್ಕೂಟಿಯಲ್ಲಿ ಮನೆಯಿಂದ ಮೂಡುಬಿದಿರೆಯ ಹನುಮಾನ್ ದೇವಸ್ಥಾನಕ್ಕೆ ಪೂಜೆಗೆಂದು ತೆರಳಿದ್ದರು. ಮಾರ್ಗಮಧ್ಯೆ ಸಾಣೂರು ಎಂಬಲ್ಲಿ ಗೀತಾ ಅವರ ಪರಿಚಯದ ಅಶ್ರಫ್ ಹಾಗೂ ಅವರ ಪತ್ನಿ ಸೌದ ಭೇಟಿಯಾಗಿದ್ದಾರೆ. ಮಾರುತಿ ಆಲ್ಟೊ ಕಾರು ನಿಲ್ಲಿಸಿದ ಅಶ್ರಫ್, ಗೀತಾ ಅವರೊಂದಿಗೆ
ಮಾತಿಗಿಳಿದರು.

ಗೀತಾ ಹಾಗೂ ಮಂಜುಳಾ ಅವರನ್ನು ಅಶ್ರಫ್ ಕಾರಿನಲ್ಲಿ ಕೂರಿಸಿಕೊಂಡು, ಮೂಡುಬಿದಿರೆ ಕಡೆಗೆ ತೆರಳುತ್ತಿದ್ದರು. ಬೆಳಿಗ್ಗೆ 10.30ರ ಸುಮಾರಿಗೆ ಕಾರು ಕೆಸರುಗದ್ದೆ ತಲುಪುತ್ತಿದ್ದಂತೆ 2–3 ಬೈಕ್‌ಗಳಲ್ಲಿ ಬಂದ ಆರರಿಂದ ಎಂಟು ಮಂದಿ ಬಜರಂಗದಳ ಕಾರ್ಯಕರ್ತರು ಕಾರಿಗೆ ಅಡ್ಡ ಗಟ್ಟಿದ್ದಾರೆ.

ADVERTISEMENT

ಈ ಸಂದರ್ಭದಲ್ಲಿ ಕಾರಿನಲ್ಲಿ ಇದ್ದವರ ಮೇಲೆ ಹಲ್ಲೆ ಮಾಡಿ, ಮೊಬೈಲ್‌ನಲ್ಲಿ ಫೋಟೊ ಹಾಗೂ ವಿಡಿಯೊ ಚಿತ್ರೀಕರಣ ಮಾಡಿ ಮಾನಹಾನಿಗೆ ಯತ್ನಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರ ಬಂಧನ: ಪ್ರಕರಣದ ನಾಲ್ಕು ಮಂದಿ ಸಂತ್ರಸ್ತರು ಕೂಡ ಕಾರ್ಕಳದವರು. ಕಾರಿನಲ್ಲಿ ತೆರಳುತ್ತಿದ್ದ ಮಹಿಳೆಯರಿಗೆ ಅಗೌರವ ತರುವ ರೀತಿಯಲ್ಲಿ ದುಷ್ಕರ್ಮಿಗಳು ವರ್ತಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಸಂಹಿತ್ ರಾಜ್ ಮತ್ತು ಸಂದೀಪ್ ಪೂಜಾರಿ ಎಂಬುವವರನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.