ADVERTISEMENT

ಗುಂಪು ಹಲ್ಲೆಯಿಂದ ವ್ಯಕ್ತಿ ಸಾವು -ನಾಲ್ವರ ವಿರುದ್ಧ ಪ್ರಕರಣ

ಇಂದಬೆಟ್ಟು: ಜಮೀನು ವಿಚಾರದಲ್ಲಿ ಜಗಳ

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 15:48 IST
Last Updated 23 ಜುಲೈ 2022, 15:48 IST

ಬೆಳ್ತಂಗಡಿ: ತಾಲ್ಲೂಕಿನ ಇಂದಬೆಟ್ಟು ಗ್ರಾಮದ ಶಾಂತಿನಗರದಲ್ಲಿ ಜಮೀನಿನ ವಿಚಾರದಲ್ಲಿ ನಡೆದ ಜಗಳದ ಸಂದರ್ಭ ಸ್ಥಳೀಯರ ಗುಂಪೊಂದು ಪರಿಶಿಷ್ಟ ಪಂಗಡದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದೆ. ಹಲ್ಲೆಗೊಳಗಾದ ವ್ಯಕ್ತಿಯು ತೀವ್ರ ಆಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

ಮೃತರನ್ನು ಇಂದಬೆಟ್ಟು ಗ್ರಾಮದ ಕುವೆತ್ಯಾರು ಮನೆಯ ಜಾರಪ್ಪ ನಾಯ್ಕ ಎಂದು ಗುರುತಿಸಲಾಗಿದೆ.
‘ಶಾಂತಿನಗರ ಬಳಿಯ ಜಮೀನಿನಲ್ಲಿ ಜಾರಪ್ಪ ನಾಯ್ಕ ಅವರ ತಮ್ಮ ನಾರಾಯಣ ನಾಯ್ಕ ವಾಸವಾಗಿದ್ದರು. ಜಮೀನಿನ ವಿಚಾರವಾಗಿ ನಾರಾಯಣ ನಾಯ್ಕ ಮತ್ತು ಇತರರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಸ್ಥಳಕ್ಕೆ ನಾರಾಯಣ ನಾಯ್ಕ ಅವರ ಅಣ್ಣ ಜಾರಪ್ಪ ನಾಯ್ಕ ಹಾಗೂ ಅವರ ಮಗ ರಾಜಶೇಖರ ತೆರಳಿ ಪ್ರಶ್ನಿಸಿದ್ದಾರೆ. ಈ ಸಂದರ್ಭ ಮನೋಹರ ಗೌಡ ಎಂಬಾತ ಜಾರಪ್ಪ ನಾಯ್ಕ ಅವರನ್ನು ಕೈಯಿಂದ ದೂಡಿದ್ದರು. ಕೆಳಗೆ ಬೀಳುತ್ತಿದ್ದ ಅವರನ್ನು ಮಗ ರಾಜಶೇಖರ ಹಿಡಿದುಕೊಂಡರು. ಆದರೆ ಇದೇ ಸಂದರ್ಭ ಜಾರಪ್ಪ ನಾಯ್ಕರು ತೀವ್ರ ಅಸ್ವಸ್ಥಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು, ಜಾರಪ್ಪ ನಾಯ್ಕರು ಮೃತಪಟ್ಟಿರುವುದಾಗಿ ತಿಳಿಸಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಜಾರಪ್ಪ ನಾಯ್ಕ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯೆಂದು ಗೊತ್ತಿದ್ದರೂ ಚಂದ್ರಕಾಂತ ನಾಯ್ಕ, ಮನೋಹರ ಗೌಡ, ಹರಿಪ್ರಸಾದ ಪೂಜಾರಿ, ದೀಪಕ್ ಶೆಟ್ಟಿ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಅವರ ಮರಣಕ್ಕೆ ಕಾರಣರಾಗಿದ್ದಾರೆ’ ಎಂದು ರಾಜಶೇಖರ ಅವರು ದೂರು ನೀಡಿದ್ದಾರೆ.

ADVERTISEMENT

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

‘ಮೃತ ವ್ಯಕ್ತಿಯ ಕುಟುಂಬದವರು ನೀಡಿದ ದೂರಿನ ಅನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ವಯವೂ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಸಾಕ್ಷ್ಯಗಳನ್ನು ಆಧರಿಸಿ ತನಿಖೆ ಕೈಗೊಳ್ಳಲಾಗುತ್ತಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೃಷಿಕೇಶ್‌ ಸೋನಾವಣೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.