ADVERTISEMENT

ಇಂಧನ ಭದ್ರತೆಗೆ ಹಸಿರು ಜಲಜನಕ: ಇಂಧನ ಇಲಾಖೆಯ ಅಭಯ್ ಬಾಕ್ರೆ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 7:30 IST
Last Updated 21 ಫೆಬ್ರುವರಿ 2026, 7:30 IST
ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅಭಯ್ ಭಾಕ್ರೆ ಹಾಗೂ ಸೂರ್ಯನಾರಾಯಣ್ ಮಾತುಕತೆ ನಡೆಸಿದರು. ಬ್ರಿಜೇಶ್ ಚೌಟ ಪಾಲ್ಗೊಂಡಿದ್ದರು.   ಪ್ರಜಾವಾಣಿ ಚಿತ್ರ 
ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅಭಯ್ ಭಾಕ್ರೆ ಹಾಗೂ ಸೂರ್ಯನಾರಾಯಣ್ ಮಾತುಕತೆ ನಡೆಸಿದರು. ಬ್ರಿಜೇಶ್ ಚೌಟ ಪಾಲ್ಗೊಂಡಿದ್ದರು.   ಪ್ರಜಾವಾಣಿ ಚಿತ್ರ    

ಪ್ರಜಾವಾಣಿ ವಾರ್ತೆ

ಮಂಗಳೂರು: ನೈಸರ್ಗಿಕವಾಗಿ ಸಿಗುವ ಸೌರಶಕ್ತಿ ಮತ್ತು ಪವನ ಶಕ್ತಿ ಬಳಸಿ ಸೃಷ್ಟಿಸುವ ನವೀಕರಿಸಬಲ್ಲ ಇಂಧನವನ್ನು ಹಸಿರು ಜಲಜನಕವಾಗಿ ಪರಿವರ್ತಿಸುವ ಕಾರ್ಯದತ್ತ ಕೇಂದ್ರ ಗಮನ ನೀಡುತ್ತಿದ್ದು ಇದು ದೇಶದ ಇಂಧನ ಭದ್ರತೆಗೆ ಸಹಕಾರಿ ಆಗಲಿದೆ ಎಂದು ಇಂಧನ ಕಾರ್ಯಕ್ಷಮತೆ ಬ್ಯೂರೊದ ಮಹಾನಿರ್ದೇಶಕ ಅಭಯ್ ಭಾಕ್ರೆ ತಿಳಿಸಿದರು.  

ಇಟಲಿಯ ಮಿರ್ ಗ್ರೂಪ್‌ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಿರ್‌ ನೆಟ್‌ ಝೀರೊ ವಿಜನ್‌’ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ನವೀಕರಿಸಬಲ್ಲ ಇಂಧನ ಮತ್ತು ಹಸಿರು ಜಲಜನಕ ಭವಿಷ್ಯದ ಕೈಗಾರಿಕೆ ಆಗಲಿದ್ದು ಉದ್ಯೋಗ ಸೃಷ್ಟಿಗೂ ಕಾರಣವಾಗಲಿದೆ. ಪ್ರತಿಯೊಂದು ಆರ್ಥಿಕ ವಲಯದಲ್ಲೂ ಇದನ್ನು ಕಾರ್ಯಸಾಧು ಮಾಡಿದರೆ ‘ಆತ್ಮನಿರ್ಭರ ಊರ್ಜ’ ಪರಿಕಲ್ಪನೆಗೆ ಇಂಬು ಸಿಗಲಿದೆ ಎಂದರು. 

ADVERTISEMENT

‘ಪಳೆಯುಳಿಕೆ ಆಶ್ರಿತ ಇಂಧನವನ್ನು ಬಳಸಿ ಇತ್ತೀಚಿನ ಒಂದೂವರೆ ಶತಮಾನದಿಂದ ಭೂಮಿತಾಯಿ ಒಡಲನ್ನೂ ಮೇಲ್ಮೈಯನ್ನೂ ಹಾಳುಗೆಡವಲಾಗಿದೆ. ಹಾಗೆ ಮಾಡದೆ ಇದ್ದಿದ್ದರೆ ಈಗ ಜನರ ಜೀವನಮಟ್ಟ ಚೆನ್ನಾಗಿರುತ್ತಿತ್ತು. 100 ವರ್ಷಗಳ ಹಿಂದೆ ನೈಸರ್ಗಿಕ ಇಂಧನ ಮೂಲವನ್ನೇ ಆಶ್ರಯಿಸಿ ಹಡಗುಗಳು ಸಾಗುತ್ತಿದ್ದವು. ನವೀಕರಿಸಬಹುದಾದ ಇಂಧನದಿಂದ ತಯಾರಿಸಿದ ಮೆಥನಾಲ್ ಬಳಸಿ ಕಾರ್ಯನಿರ್ವಹಿಸುವ ಒಟ್ಟು 60 ಹಡಗುಗಳು ಈಗ ಪ್ರಪಂಚದಲ್ಲಿ ಇವೆ. ಇದು ಹಿಂದಿನ ಕಾಲಕ್ಕೆ ವಾಪಸಾಗುವ ಸಾಧ್ಯತೆಯತ್ತ ಬೆಳಕು ಚೆಲ್ಲಿದೆ’ ಎಂದು ಅವರು ಹೇಳಿದರು. 

‘ಕೈಗಾರಿಕೆ, ಸಾರಿಗೆ, ಅಡುಗೆ ಇತ್ಯಾದಿಗಳಲ್ಲಿ ಪರಿವರ್ತಿತ ಹಸಿರು ಜಲಜನಕವನ್ನು ಬಳಸಬಹುದಾಗಿದೆ. ಹಸಿರು ಅಮೋನಿಯವನ್ನು ರಸಗೊಬ್ಬರವಾಗಿಯೂ ಬಳಸಹುದಾಗಿದೆ. ಸೂರ್ಯನ ಬೆಳಕು ಮತ್ತು ಗಾಳಿ ಧಾರಾಳವಾಗಿ ಲಭ್ಯವಿರುವ ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಂಥ ರಾಜ್ಯಗಳಲ್ಲಿ ಇದಕ್ಕೆ ಪೂರಕವಾದ ವಾತಾವರಣವಿದೆ. ಭಾರತದ 100 ಪ್ರದೇಶಗಳಲ್ಲಿ ‘ನೆಟ್ ಝೀರೊ’ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಇದರ ಪ್ರಯೋಗವಾಗಿದೆ. 5 ನಗರಗಳಲ್ಲಿ ಪ್ರಾಯೋಗಿಕವಾಗಿ ಹಸಿರು ಇಂಧನದಿಂದ ತಯಾರಿಸಿದ ನೈಸರ್ಗಿಕ ಅನಿಲ ಬಳಕೆ ಆಗುತ್ತಿದೆ’ ಎಂದು ಅವರು ಹೇಳಿದರು.

ತಾರಸಿ ಮೇಲೆ ಸೌರಶಕ್ತಿ ಉಪಕರಣಗಳ ಅಳವಡಿಕೆ ಮತ್ತು ಕುಸುಮ್ ಯೋಜನೆಯಿಂದಾಗಿ ಭಾರತದಲ್ಲಿ ಸೌರಶಕ್ತಿ ಬಳಕೆ 130 ಗಿಗಾವ್ಯಾಟ್ ಸಾಮರ್ಥ್ಯವನ್ನು ಮೀರಿದೆ. ಸೌರ ವಿದ್ಯುತ್ ಬಳಕೆಯ ಸಾಮರ್ಥ್ಯವನ್ನು ವರ್ಷದಲ್ಲಿ 50 ಗಿಗಾವ್ಯಾಟ್‌ಗೆ ತಲುಪಿಸಲು ಸಾಧ್ಯವಾದರೆ ‘ನೆಟ್‌ ಝೀರೊ’ ಹಾದಿಯಲ್ಲಿ ಮಹತ್ವದ ಹೆಜ್ಜೆ ಇರಿಸಿದಂತಾಗುತ್ತದೆ’ ಎಂದರು. 

ಮಿರ್ ಗ್ರೂಪ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಫಾಲೆ ಮೊರಾಝೊ ಮಾತನಾಡಿ ನೈಸರ್ಗಿಕ ಮಾದರಿಗಳನ್ನು ಅನುಸರಿಸಿದರೆ ಸುಸ್ಥಿರ ನಗರಗಳನ್ನು ಸ್ಥಾಪಿಸಬಹುದಾಗಿದೆ. ನೈಸರ್ಗಿಕ ಸಂಪನ್ಮೂಲ ಉಳಿಸಿ, ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಹಸಿರು ಇಂಧನ ಬಳಕೆಯತ್ತ ಮುಖ ಮಾಡಿದರೆ ಹೊಸ ಸುಸ್ಥಿರ ಮಾರ್ಗ ಕಂಡುಕೊಳ್ಳುವುದು ಸುಲಭ ಎಂದರು. 

ಇಟಲಿ ಕಾನ್ಸುಲ್ ಜನರಲ್ ಜಾನ್ ಡೊಮಿನಿಕೊ ಮಿಲಾನೊ, ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ, ಎಸ್‌ಇಝಡ್ ಕಾರ್ಯನಿರ್ವಹಣಾಧಿಕಾರಿ ಸೂರ್ಯನಾರಾಯಣ, ಮಿರ್‌ ಗ್ರೂಪ್‌ನ ಪ್ರಮೋದ್ ಪಿಂಟೊ, ನಿತಿನ್ ಶೆಟ್ಟಿ ಮತ್ತು ನಿತಿಕ್ ರತ್ನಾಕರ್, ಗೋಕುಲ್ ದಾಸ್ ಪಾಲ್ಗೊಂಡಿದ್ದರು.  

ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳು ಪ್ರಜಾವಾಣಿ ಚಿತ್ರ 

Quote - ಮಂಗಳೂರು ವಲಯದಲ್ಲಿ ಸಮಗ್ರ ವೈದ್ಯಕೀಯ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರವನ್ನು ಕೋರಲಾಗುವುದು. ಮಂಗಳೂರಿನಲ್ಲಿ ನಿರ್ಮಾಣವಾಗುವ ಪ್ಲಾಸ್ಟಿಕ್ ಪಾರ್ಕ್ ಕಾಮಗಾರಿ ಶೇ 90ರಷ್ಟು ಮುಕ್ತಾಯಗೊಂಡಿದೆ. ಕ್ಯಾಪ್ಟನ್ ಬ್ರಿಜೇಶ್ ಚೌಟ ದಕ್ಷಿಣ ಕನ್ನಡ ಸಂಸದ

Quote - ಕರ್ನಾಟಕದ ಪವನಶಕ್ತಿ ಬಳಕೆ ಪ್ರಮಾಣ 1331.48 ಮೆಗಾವ್ಯಾಟ್‌ಗೆ ಹೆಚ್ಚಿದ್ದು 2024–25ನೇ ಸಾಲಿನಲ್ಲಿ ದೇಶದಲ್ಲೇ ಮೊದಲ ಸ್ಥಾನ ಗಳಿಸಿದೆ. 2070 ವೇಳೆ ನೆಟ್‌ ಝೀರೊ ಕನಸು ನನಸು ಮಾಡಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಟಿ.ಡಿ ರಾಜೇಗೌಡ ಕ್ರೆಡೆಲ್‌ ಅಧ್ಯಕ್ಷ

Cut-off box - ಮತ್ಸರದ ಹೇಳಿಕೆ: ಚೌಟ ಮಂಗಳೂರಿನಲ್ಲಿ ಅಭಿವೃದ್ಧಿಗೆ ಪೂರಕವಾದ ವಾತಾವರಣ ಇದೆ. ಆದರೆ ಕೆಲವರು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡಿ ಇಲ್ಲಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಅದು ಒಂದರ್ಥದಲ್ಲಿ ಮತ್ಸರದ ಹೇಳಿಕೆಯಷ್ಟೆ ಎಂದರು ಸಂಸದ ಬ್ರಿಜೇಶ್ ಚೌಟ ಹೇಳಿದರು.  2024ರ ನವೆಂಬರ್‌ನಲ್ಲಿ ‘ಬ್ಯಾಕ್‌ ಟು ಊರು’ ಪರಿಕಲ್ಪನೆಯಡಿ ಅಭಿವೃದ್ಧಿ ಯೋಜನೆಯನ್ನು ಹಾಕಿಕೊಂಡ ನಂತರ ಹಲವು ಉತ್ತಮ ಬೆಳವಣಿಗೆಗಳು ಇಲ್ಲಿ ಆಗಿವೆ ಎಂದು ಅವರು ಹೇಳಿದರು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.