ADVERTISEMENT

ಸಂವಿಧಾನದ ಆಶಯದಂತೆ ದೇಶ ಕಟ್ಟೋಣ

ಸಂವಿಧಾನ ದಿನಾಚರಣೆ ಉದ್ಘಾಟಿಸಿದ ಯು.ಟಿ.ಖಾದರ್‌

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 4:25 IST
Last Updated 27 ನವೆಂಬರ್ 2025, 4:25 IST
ಸಂವಿಧಾನ ದಿನಾಚರಣೆಯ ಪ್ರಯುಕ್ತ ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಬಿ.ಆರ್‌.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ತಾರನಾಥ ಗಟ್ಟಿ ಕಾಪಿಕಾಡ್‌,  ನರ್ವಾಡೆ ವಿನಾಯಕ್ ಕಾರ್ಬಾರಿ ಮತ್ತಿತರರು  ಭಾಗವಹಿಸಿದ್ದರು: ಪ್ರಜಾವಾಣಿ ಚಿತ್ರ
ಸಂವಿಧಾನ ದಿನಾಚರಣೆಯ ಪ್ರಯುಕ್ತ ಮಂಗಳೂರಿನ ಅಂಬೇಡ್ಕರ್ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಬಿ.ಆರ್‌.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ತಾರನಾಥ ಗಟ್ಟಿ ಕಾಪಿಕಾಡ್‌,  ನರ್ವಾಡೆ ವಿನಾಯಕ್ ಕಾರ್ಬಾರಿ ಮತ್ತಿತರರು  ಭಾಗವಹಿಸಿದ್ದರು: ಪ್ರಜಾವಾಣಿ ಚಿತ್ರ   

 ಮಂಗಳೂರು: ‘ಸಂವಿಧಾನವನ್ನು ಓದಿ, ಅದರ ಆಶಯವನ್ನು ಅರ್ಥೈಸಿಕೊಂಡು ಸಮಾಜಕ್ಕೆ ಪೂರಕವಾಗುವಂತಹ ಕೆಲಸ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ದೇಶವನ್ನು ಕಟ್ಟುವ ಜವಾಬ್ದಾರಿ ನಮ್ಮದು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆಯುವವರಿಗೂ ಅದರ ಮಹತ್ವ ಮನವರಿಕೆ ಮಾಡಿಕೊಟ್ಟು ಅವರನ್ನೂ ಸತ್ಪ್ರಜೆಗಳನ್ನಾಗಿಸುವುದು ಅಗತ್ಯ’ ಎಂದು ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಂಗಳೂರು ಮಹಾನಗರಪಾಲಿಕೆ ಮತ್ತು ಸಮಾಜ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ಉರ್ವದ ನಗರದ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಅತ್ಯಂತ ಕಟ್ಟ ಕಡೆಯ ವ್ಯಕ್ತಿಯೂ ನಿರ್ಭಯದಿಂದ ಸಂಚರಿಸುವ ಸ್ಥಿತಿ ದೇಶದಲ್ಲಿದ್ದರೆ, ಅದಕ್ಕೆ ಅಂಬೇಡ್ಕರ್ ರಚಿಸಿದ ಸಂವಿಧಾನವೇ ಕಾರಣ. ಅದರಲ್ಲಿರುವ ಪ್ರತಿಯೊಂದು ಚಿಂತನೆಯೂ ಅರ್ಥಪೂರ್ಣ. ಅವುಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ದೇಶ ಬಲಿಷ್ಠ ಆಗಬಲ್ಲುದು. ದೇಶದ ಪ್ರಜೆಗಳೆಲ್ಲರೂ ಸಂವಿಧಾನಕ್ಕೆ ಬದ್ಧರಾಗಿರಬೇಕು. ಸಂವಿಧಾನವನ್ನು ಓದಿ ಉತ್ತಮ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಬಿ. ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧಿಯಂತಹ ಮಹಾನೀಯರ ಪುಸ್ತಕಗಳನ್ನು ಓದಬೇಕು’ ಎಂದು ಅವರು  ಸಲಹೆ ನೀಡಿದರು.

ADVERTISEMENT

ಗೋಕರ್ಣನಾಥ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಘುರಾಜ್ ಕದ್ರಿ, ‘ಸಂವಿಧಾನವು ಸಮಾಜದ ಭಯ  ನಿವಾರಣೆಗೆ ರೂಪಿಸಿಕೊಂಡ ವ್ಯವಸ್ಥೆ. ಯಾವುದೇ ಬಣ್ಣ, ಜಾತಿ, ಮತ, ಧರ್ಮದ ಭೇದವಿಲ್ಲದೆ ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣುವ ಅವಕಾಶ ಕಲ್ಪಿಸಿರುವುದೇ ಸಂವಿಧಾನ. ಸಂವಿಧಾನವೇ ಇಲ್ಲದಿದ್ದರೆ ದೇಶದ ಪರಿಸ್ಥಿತಿ ಹೇಗಿರುತ್ತಿತ್ತು ಎಂಬುದನ್ನು ಕಲ್ಪಿಸಿಕೊಳ್ಳಬೇಕು. ಸಂವಿಧಾನ ಜಾರಿಯಾದ ಬಳಿಕ ದೇಶದಲ್ಲಾದ ಬದಲಾವಣೆಗಳ ಮಹತ್ವವನ್ನು ಯುವಜನತೆ ಅರಿತುಕೊಳ್ಳಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ, ಮಂಗಳೂರು ಉಪ ವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಭಾಗವಹಿಸಿದ್ದರು.

ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಂವಿಧಾನ ಪೀಠಿಕೆಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ. ವಾಚಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ  ಬಿ.ಎಸ್.ಹೇಮಲತಾ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಅಡಿಗ ಧನ್ಯವಾದ ಸಲ್ಲಿಸಿದರು. ಪ್ರದೀಪ್ ಡಿ.ಎಂ. ಹಾವಂಜೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.