ADVERTISEMENT

ಮಂಗಳೂರು: ಬಹರೇನ್‌ನಿಂದ 40 ಟನ್‌ ಆಮ್ಲಜನಕ ಹೊತ್ತು ತಂದ ತಲ್ವಾರ್‌

ನೌಕಾಪಡೆಯ ಸಮುದ್ರ ಸೇತು–2 ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 5 ಮೇ 2021, 11:09 IST
Last Updated 5 ಮೇ 2021, 11:09 IST
ಐಎನ್ಎಸ್ ತಲ್ವಾರ್
ಐಎನ್ಎಸ್ ತಲ್ವಾರ್   

ಮಂಗಳೂರು: ಬಹರೇನ್‌ನಿಂದ 40 ಟನ್ ದ್ರವೀಕೃತ ಆಮ್ಲಜನಕ ಹೊತ್ತ ಭಾರತೀಯ ನೌಕಾಪಡೆಯ ಹಡಗು ಐಎನ್ಎಸ್ ತಲ್ವಾರ್ ಬುಧವಾರ ಮಧ್ಯಾಹ್ನ ಇಲ್ಲಿನ ನವಮಂಗಳೂರು ಬಂದರು ತಲುಪಿದೆ.

ಬಹರೇನ್‌ನ ಮನಾಮಾದಿಂದ ಎರಡು ಕ್ರಯೋಜೆನಿಕ್ ಐಸೋಕಂಟೈನರ್‌ಗಳಲ್ಲಿ 40 ಟನ್ ಆಮ್ಲಜನಕ ಹಾಗೂ ವೈದ್ಯಕೀಯ ಉಪಕರಣಗಳನ್ನು ಈ ಹಡಗು ಹೊತ್ತು ತಂದಿದೆ.

ಕೋವಿಡ್–19 ಸಂದರ್ಭದಲ್ಲಿ ಭಾರತೀಯ ನೌಕಾಪಡೆಯು ಸಮುದ್ರ ಸೇತು–2 ಕಾರ್ಯಾಚರಣೆ ಆರಂಭಿಸಿದ್ದು, ವಿದೇಶಗಳಿಂದ ಹಡಗಿನ ಮೂಲಕ ಆಮ್ಲಜನಕ, ವೈದ್ಯಕೀಯ ಉಪಕರಣಗಳನ್ನು ತರಲಾಗುತ್ತಿದೆ. ಈಗಾಗಲೇ ಹಲವಾರು ಹಡಗುಗಳು ವಿದೇಶ ತಲುಪಿದ್ದು, ಅಲ್ಲಿಂದ ಆಮ್ಲಜನಕವನ್ನು ಹೊತ್ತು ತರುತ್ತಿವೆ.

ADVERTISEMENT

ಐಎನ್‌ಎಸ್‌ ಐರಾವತ್‌ ಹಡಗು ಸಿಂಗಪುರದಿಂದ ಹಾಗೂ ಐಎನ್‌ಎಸ್‌ ಕೊಲ್ಕತ್ತ ಹಡಗು ಕುವೈತ್‌ನಿಂದ ದ್ರವೀಕೃತ ಆಮ್ಲಜನಕವನ್ನು ಹೊತ್ತು ಬರುತ್ತಿದ್ದು, ಶೀಘ್ರದಲ್ಲಿಯೇ ಭಾರತಕ್ಕೆ ಮರಳಲಿವೆ. ಇದರ ಜೊತೆಗೆ ಇನ್ನೂ ಮೂರು ಹಡಗುಗಳು ಕುವೈತ್‌, ದೋಹಾದಿಂದ ಆಮ್ಲಜನಕ ತರಲಿವೆ.

ದೇಶದಲ್ಲಿ ಅಗತ್ಯವಿರುವ ಕಡೆಗಳಿಗೆ ಈ ಹಡಗುಗಳು ಆಮ್ಲಜನಕವನ್ನು ಪೂರೈಕೆ ಮಾಡಲಿದ್ದು, ಆಯಾ ಭಾಗದಲ್ಲಿ ಈ ಆಮ್ಲಜನಕ ಬಳಕೆ ಮಾಡಿಕೊಳ್ಳಬಹುದಾಗಿದೆ.

ಮಂಗಳೂರಿಗೆ ಬಂದಿರುವ ಆಮ್ಲಜನಕದ ಟ್ಯಾಂಕ್‌ಗಳನ್ನು ಉಚಿತವಾಗಿ ನಿರ್ವಹಣೆ ಮಾಡುವಂತೆ ಕೇಂದ್ರ ಸರ್ಕಾರವು ನವಮಂಗಳೂರು ಬಂದರು ಮಂಡಳಿಗೆ ಈಗಾಗಲೇ ಸೂಚನೆ ನೀಡಿದೆ. ಈ ಆಮ್ಲಜನಕವು ಕರಾವಳಿಯ ಜಿಲ್ಲೆಗಳ ಆಸ್ಪತ್ರೆಗಳಿಗೆ ವಿತರಣೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.