ಮಂಗಳೂರು: ಪ್ರಸ್ತುತ ಸಂದರ್ಭದಲ್ಲಿ ಹೊಸ ಆವಿಷ್ಕಾರದ ಮೂಲಕ ಪರಿಸರ ಸ್ನೇಹಿ ಗಣಿಗಾರಿಕೆಗೆ ಒತ್ತು ನೀಡಿ, ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸಬೇಕಾಗಿದೆ ಎಂದು ಸೆಂಟ್ರಲ್ ಮೈನ್ ಪ್ಲಾನಿಂಗ್ ಆ್ಯಂಡ್ ಡಿಸೈನ್ ಇನ್‌ಸ್ಟಿಟ್ಯೂಟ್‌ನ ಸಿಎಂಡಿ ಮನೋಜ್‌ಕುಮಾರ್ ಹೇಳಿದರು.
ಸುರತ್ಕಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿಕೆ), ಕರ್ನಾಟಕ ಗಣಿ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ಹಸಿರು ಭವಿಷ್ಯಕ್ಕಾಗಿ ಗಣಿಗಾರಿಕೆ: ತಾಂತ್ರಿಕ ಬೆಳವಣಿಗೆಗಳು ಮತ್ತು ಸುಸ್ಥಿರ ಅಭ್ಯಾಸಗಳು’ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಭವಿಷ್ಯದ ಸಮಾಜದ ಅಗತ್ಯಗಳನ್ನು ದೃಷ್ಟಿಯಲ್ಲಿಟ್ಟು, ಗಣಿಗಾರಿಕೆ ಹೊಸ ಹೊಸ್ತಿಲಲ್ಲಿ ನಿಂತಿರುವ ನಾವು ಜೀವ ವೈವಿಧ್ಯ ರಕ್ಷಣೆ, ಸ್ಥಳೀಯ ಸಮುದಾಯಗಳ, ಅಗತ್ಯ ಮತ್ತು ಹಕ್ಕುಗಳನ್ನು ಗಮನದಲ್ಲಿಟ್ಟು ಕಾರ್ಯ ನಿರ್ವಹಿಸಬೇಕಾಗಿದೆ’ ಎಂದರು.
ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ ಮಾತನಾಡಿ, ‘ಅಮೂಲ್ಯ ಸಂಪನ್ಮೂಲ ಅರಸುತ್ತ ಭೂಮಿಯ ಆಳಕ್ಕೆ ಇಳಿಯುತ್ತಿರುವ ಸಂದರ್ಭದಲ್ಲಿ, ಪರಿಸರ ಮತ್ತು ಸಮುದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರದಿರುವಂತೆ ಎಚ್ಚವಹಿಸಬೇಕಾದ ಸವಾಲು ಇದೆ. ಗಣಿಗಾರಿಕೆ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಹೊಸ ಮಾರ್ಗ ಅನ್ವೇಷಿಸುವ ಮೂಲಕ ಸುಸ್ಥಿರ ಭವಿಷ್ಯಕ್ಕೆ ಕೊಡುಗೆ ನೀಡಬೇಕಾಗಿದೆ’ ಎಂದರು.
ಗಣಿ ಸುರಕ್ಷೆ ವಿಭಾಗದ ದಕ್ಷಿಣ ವಲಯದ ಉಪ ಮಹಾ ನಿರ್ದೇಶಕ ದೇವ್ ಕುಮಾರ್ ಮಾತನಾಡಿ, ‘ಹವಾಮಾನ ಬದಲಾವಣೆ ಮತ್ತು ಪರಿಸರ ನಾಶದ ಆತಂಕದ ಸಂದರ್ಭದಲ್ಲಿ ಹೊಸ ತಂತ್ರಜ್ಞಾನ ಆವಿಷ್ಕಾರ ಮತ್ತು ಅಳವಡಿಕೆ ಮುಖ್ಯವಾಗಿದೆ’ ಎಂದರು.
ಎನ್‌ಐಟಿಕೆ ನಿರ್ದೇಶಕ ಪ್ರೊ. ರವಿ ಅಧ್ಯಕ್ಷತೆ ವಹಿಸಿದ್ದರು. ಅಂತರರಾಷ್ಟ್ರೀಯ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಗಣಿ ಎಂಜಿನಿಯರ್ ಜಿ.ಆರ್.ಅಧಿಕಾರಿ, ಗಣಿ ವೃತ್ತಿಪರ ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಗಣಿ ವಿಭಾಗದ ಮುಖ್ಯಸ್ಥ ಪ್ರೊ.ಹರ್ಷವರ್ಧನ್, ಸಮ್ಮೇಳನದ ಸಂಚಾಲಕರಾದ ಪ್ರೊ.ಎಂ.ಅರುಣಾ, ಪ್ರೊ.ಎಂ. ಗೋವಿಂದರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.