
ಮಂಗಳೂರು: ತಣ್ಣೀರುಬಾವಿಯ ಶುಭ್ರ ಬಾನಂಗಳದ ತುಂಬಾ ಶನಿವಾರ ಮುಸ್ಸಂಜೆ ನಾನಾ ಆಕಾರಗಳ, ಬಣ್ಣಬಣ್ಣದ ಗಾಳಿಪಟಗಳು ಹಾರಾಡಿದವು. ಕಡಲ ತೀರದಲ್ಲಿ ಬೀಸುತ್ತಿದ್ದ ತಂಗಾಳಿಯ ಅಲೆಗೆ ನರ್ತಿಸುತ್ತಾ ರಂಗಿನಾಟ ಮೂಡಿಸಿದ ಈ ಬಾನಾಡಿಗಳು ನೋಡುಗರ ಮೈಮನ ರಂಜಿಸಿದವು.
ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶಗಳಿಂದ ಬಂದಿದ್ದ ಗಾಳಿಪಟ ಹಾರಿಸುವವರು ವಿಶಿಷ್ಟ, ವಿಭಿನ್ನ, ಕಲಾತ್ಮಕ ಗಾಳಿಪಟಗಳನ್ನು ಹಾರಿಸಿ ಕೈಚಳಕ ಪ್ರದರ್ಶಿಸಿದರು. ಕರಾವಳಿ ಉತ್ಸವದ ಅಂಗವಾಗಿ ತಣ್ಣೀರುಬಾವಿಯ ಬ್ಲೂ ಬೇ ಬೀಚ್‌ನಲ್ಲಿ ಆಯೋಜಿಸಿರುವ ಅಂತರರಾಷ್ಟ್ರೀಯ ಉತ್ಸವ ಇಲ್ಲಿನವರಿಗೂ ದೇಶ ವಿದೇಶಗಳ ಗಾಳಿಪಟಗಳ ವೈವಿಧ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಿತು.
ಟೀಮ್ ಮಂಗಳೂರು ಹವ್ಯಾಸಿ ಗಾಳಿಪಟ ತಂಡವು ಒಎನ್‌ಜಿಸಿ, ಎಂಆರ್‌ಪಿಎಲ್ ಸಹಯೋಗದಲ್ಲಿ ಏರ್ಪಡಿಸಿರುವ ಈ ಉತ್ಸವದಲ್ಲಿ ಈ ಬಾರಿ ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಸ್ವೀಡನ್, ಇಂಡೊನೇಷ್ಯಾ ಸೇರಿದಂತೆ 15 ದೇಶಗಳು ಹಾಗೂ ಭಾರತದ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಕೇರಳ 32 ಗಾಳಿಪಟ ಹಾರಿಸುವವರು ಬಂದಿದ್ದರು. ಸಾಂಪ್ರದಾಯಿಕ, ಏರೋಫಾಯಿಲ್, ಇನ್‌ಫ್ಲೇಟಬಲ್, ಕ್ವಾಡ್ ಲೈನ್ ಸ್ಪೋರ್ಟ್ ಗಾಳಿಪಟಗಳಿದ್ದವು. ಸ್ಥಳೀಯರೂ ಗಾಳಿಪಟ ಹಾರಿಸಿ ಸಂಭ್ರಮಪಟ್ಟರು.
ಪ್ರಾಣಿಗಳು, ಪಕ್ಷಿಗಳು, ಸಿನಿಮಾದ ಸೂಪರ್ ಹೀರೊಗಳು, ಸರೀಸೃಪಗಳು, ಕಾಲ್ಪನಿಕ ಚಿತ್ರಗಳು, ಜಾನಪದ ಕಲಾಕೃತಿಗಳನ್ನು ಒಳಗೊಂಡ ಗಾಳಿಪಟಗಳು ಬಾನಂಗಳದಲ್ಲಿ ದೃಶ್ಯಕಾವ್ಯ ಬರೆದವು. ಆನೆ, ಚಿರತೆ, ನರಿ, ಇಲಿ, ಬೆಕ್ಕು, ಮೊಸಳೆ, ತಿಮಿಂಗಿಲ, ಶಾರ್ಕ್, ಡೈನೋಸಾರ್, ಕಾಂಗರೂ, ಗರುಡ, ಡ್ರ್ಯಾಗನ್, ರೇಫಿಶ್ ಗಾಳಿಪಟವಾಗಿ ಬಾನಲ್ಲಿ ಹಾರುತ್ತಿದ್ದವು. ಟಾಮ್ ಆ್ಯಂಡ್ ಜೆರ್ರಿ, ಮೋಟು ಪತ್ಲು, ಪಾಂಡಾ, ಬಾತು, ಸ್ಪೈಡರ್‌ಮ್ಯಾನ್ ಗಾಳಿಪಟಗಳನ್ನು ನೋಡಿ ಮಕ್ಕಳು ಕೇಕೆ ಹಾಕಿದರು. ಜೋಕರ್ ಗಾಳಿಪಟ ಎಲ್ಲರ ಮೊಗದಲ್ಲಿ ಕಿರುನಗೆ ಮೂಡಿಸಿತು.
2ನೇ ಬಾರಿಗೆ ಉತ್ಸವಕ್ಕೆ ಬಂದಿದ್ದ ಇಂಗ್ಲೆಂಡ್‌ನ ಕ್ಲೇರ್ ಮತ್ತು ಡೇವ್ ಹಾರ್ಡ್ವಿಕ್ ದಂಪತಿ 25 ಮೀಟರ್ ಉದ್ದದ, ಬಣ್ಣಬಣ್ಣದ ‘ಕ್ರೇಜಿ ಫಿಶ್’, ‘ಹ್ಯಾಮರ್‌ಹೆಡ್ ಶಾರ್ಕ್’ ಗಾಳಿಪಟ ಹಾರಿಸಿದರು. ಫ್ರಾನ್ಸ್‌ನಿಂದ ಬಂದಿದ್ದ ಸಾಂಡ್ರಿನ್ ಹಾರಿಸಿದ ಹೃದಯಾಕಾರದ ಗಾಳಿಪಟ ಸುಂದರವಾಗಿತ್ತು. ದೇಶದ ವಿವಿಧ ಭಾಗಗಳ ಕಲೆ, ಸಂಸ್ಕೃತಿ ವೈವಿಧ್ಯದ ಗಾಳಿಪಟಗಳಿದ್ದವು. ಟೀಮ್ ಮಂಗಳೂರು ತಂಡದ ಯಕ್ಷ, ವಿಭೀಷಣ, ಗರುಡ ಗಾಳಿಪಟ ಮನಮೋಹಕವಾಗಿತ್ತು.
‘ನನಗೆ ಮಂಗಳೂರಿನಲ್ಲಿ ಗೆಳೆಯರಿದ್ದು, ಸುಮಾರು ಇಪ್ಪತ್ತೈದು ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಇಲ್ಲಿ ನಡೆಯುವ ಗಾಳಿಪಟ ಉತ್ಸವದಲ್ಲಿ ಪ್ರತಿವರ್ಷ ಭಾಗವಹಿಸುತ್ತೇನೆ. ಇಲ್ಲಿನ ಸಂಸ್ಕೃತಿ, ಸ್ಥಳಗಳು ನನಗೆ ತುಂಬಾ ಇಷ್ಟ’ ಎಂದು ಸಾಂಡ್ರಿನ್ ಹೇಳಿದರು.
ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ‘ಎಂಐಕೆಎಫ್ 2026’ರ ತ್ರಿವರ್ಣ ಧ್ವಜದಲ್ಲಿ ‘ಭಾರತ್’ ಎಂದು ಬರೆದಿದ್ದ ಗಾಳಿಪಟ ಹಾರಿಸುವುದರ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಎಂಆರ್‌ಪಿಎಲ್‌ನ ರಿಫೈನರಿ ನಿರ್ದೇಶಕ ನಂದಕುಮಾರ್ ವಿ. ಪಿಳ್ಳೈ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಟೀಮ್ ಮಂಗಳೂರು ಸಿಬ್ಬಂದಿ ಭಾಗವಹಿಸಿದ್ದರು. ಆಹಾರ ಮೇಳ, ಗಾಳಿಪಟ ಮಾರಾಟ ಮಳಿಗೆಗಳಿದ್ದವು.
ಉತ್ಸವ ಭಾನುವಾರವೂ (ಜ. 18) ನಡೆಯಲಿದೆ. ಬರುವವರಿಗೆ ಸುಲ್ತಾನ್ ಬತ್ತೇರಿಯಿಂದ ಫಾಲ್ಗುಣಿ ನದಿ ಮೂಲಕ ಫೆರಿ ಸೇವೆ, ಕೆಐಒಸಿಎಲ್ ವೃತ್ತದಿಂದ ಬ್ಲೂ ಬೇ ಬೀಚ್‌ವರೆಗೆ ಬಸ್ ಮೂಲಕ ಪಿಕಪ್ ಆ್ಯಂಡ್ ಡ್ರಾಪ್ ವ್ಯವಸ್ಥೆ ಕಲ್ಪಿಸಲಾಗಿದೆ.