ADVERTISEMENT

International Workers Day: ಕಾರ್ಮಿಕರಿಗೆ ವಿಮಾನಯಾನದ ಸುಯೋಗ

ಕಾರ್ಮಿಕರ ದಿನಾಚರಣೆ– ಪುತ್ತೂರಿನ ಎಸ್‌ಆರ್‌ಕೆ ಸಂಸ್ಥೆ ಉದ್ಯೋಗಿಗಳಿಗೆ ವಿಶೇಷ ಪ್ರವಾಸ

​ಪ್ರಜಾವಾಣಿ ವಾರ್ತೆ
Published 2 ಮೇ 2025, 5:21 IST
Last Updated 2 ಮೇ 2025, 5:21 IST
ವಿಮಾನದಲ್ಲಿ ಪ್ರಯಾಣಿಸಲು ಸಜ್ಜಾಗಿರುವ ಪುತ್ತೂರಿನ ಎಸ್‌ಆರ್‌ಕೆ ಲ್ಯಾಡರ್ಸ್ ಕಂಪನಿಯ ಕಾರ್ಮಿಕರು: ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್
ವಿಮಾನದಲ್ಲಿ ಪ್ರಯಾಣಿಸಲು ಸಜ್ಜಾಗಿರುವ ಪುತ್ತೂರಿನ ಎಸ್‌ಆರ್‌ಕೆ ಲ್ಯಾಡರ್ಸ್ ಕಂಪನಿಯ ಕಾರ್ಮಿಕರು: ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್   

ಮಂಗಳೂರು: ಪುತ್ತೂರಿನ ಕೃಷಿ ಉಪಕರಣಗಳನ್ನು ಉತ್ಪಾದಿಸುವ ‘ಎಸ್‌ಆರ್‌ಕೆ ಲ್ಯಾಡರ್ಸ್‌’ ಕಂಪನಿಯು ಕಾರ್ಮಿಕರ ದಿನಾಚರಣೆ ಅಂಗವಾಗಿ ತನ್ನ 50ಕ್ಕೂ ಹೆಚ್ಚು ಕಾರ್ಮಿಕರಿಗೆ ಮೊದಲ ಸಲ ವಿಮಾನಯಾನ ಕೈಗೊಳ್ಳುವ ಅವಕಾಶವನ್ನು ಗುರುವಾರ ಕಲ್ಪಿಸಿತು.

ಕಾರ್ಮಿಕರಿಗೆ ಬೆಂಗಳೂರು ಮತ್ತು ಮೈಸೂರಿಗೆ ಎರಡು ದಿನಗಳ ಪ್ರವಾಸ ಏರ್ಪಡಿಸುವ ಮೂಲಕ ಅವರ ಪಾಲಿಗೆ ಈ ದಿನವನ್ನು ಕಂಪನಿಯ ಮಾಲೀಕ ಕೇಶವ ಅಮೈ (ಅವರು ಅಂಧರು) ಸ್ಮರಣೀಯವಾಗಿಸಿದ್ದಾರೆ. 

‘ನಾನು ವಿಮಾನದಲ್ಲಿ ಪ್ರಯಾಣಿಸುತ್ತೇನೆ ಎಂದು ಯಾವತ್ತೂ ಭಾವಿಸಿರಲಿಲ್ಲ. ನಮ್ಮ ಕಂಪನಿಯ ಮಾಲೀಕರಾದ ಕೇಶವ ಅಮೈ ಅವರು ಪ್ರವಾಸ ಏರ್ಪಡಿಸಿ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿದ್ದಾರೆ ಎಂಬ ವಿಷಯ ಗೊತ್ತಾದಾಗ ನನ್ನ ಕುಟುಂಬದವರು ನೆರೆಹೊರೆಯವರ ಸಂತೋಷಕ್ಕೆ ಪಾರವೇ ಇರಲಿಲ್ಲ’ ಎಂದು ಕಂಪನಿಯಲ್ಲಿ ಸಹಾಯಕಿಯಾಗಿ ದುಡಿಯುತ್ತಿರುವ ಕೆ.ಭಾರತಿ ಹೇಳಿದರು.

ADVERTISEMENT

‘ಕಂಪನಿಯ ಶೇ 95ರಷ್ಟು ಉದ್ಯೊಗಿಗಳು ಬದುಕಿನಲ್ಲಿ ಮೊದಲ ಸಲ ವಿಮಾನವೇರಿ ಬೆಂಗಳೂರಿಗೆ ಪ್ರಯಾಣಿಸಿದರು’ ಎಂದು 26 ವರ್ಷಗಳ ಹಿಂದೆ ಈ ಕಂಪನಿಯ ಶುರುವಾಗಿದ್ದ ದಿನದಿಂದಲೂ  ಉದ್ಯೋಗಿಯಾಗಿರುವ ವಸಂತ ತಿಳಿಸಿದರು. 

ಬಜಪೆಯಲ್ಲಿರುವ ಮಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣವರೆಗೆ ಖಾಸಗಿ ಬಸ್‌ನಲ್ಲಿ ತೆರಳಿದ ಕಾರ್ಮಿಕರು, ಅಲ್ಲಿಂದ ವಿಮಾನದಲ್ಲಿ ಬೆಂಗಳೂರು ತಲುಪಿದರು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಿಂದ ಅವರನ್ನು ಹವಾನಿಯಂತ್ರಿತ ಬಸ್‌ನಲ್ಲಿ ಬೆಂಗಳೂರಿನ ಹೊರವಲಯದಲ್ಲಿರುವ ಕಡಬಗೆರೆಯ ರೆಸಾರ್ಟ್‌ಗೆ ಕರೆದೊಯ್ಯಲಾಯಿತು.

‘ಕಾರ್ಮಿಕರು ಶುಕ್ರವಾರ ಬೆಳಿಗ್ಗೆ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿನ  ಪ್ರವಾಸಿ ತಾಣಗಳನ್ನು ವೀಕ್ಷಿಸಿದ ಬಳಿಕ ಪುತ್ತೂರಿಗೆ ಮರಳಲಿದ್ದಾರೆ’ ಎಂದು ಕೇಶವ ಅಮೈ ತಿಳಿಸಿದರು. 

‘ಕಂಪನಿಯ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಕಳೆದ ವರ್ಷ (2024ರಲ್ಲಿ)  ಕಾರ್ಮಿಕರ ಕ್ರೀಡಾಕೂಟ, ವಿಶೇಷ ಮಕ್ಕಳ ಸಂಗಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. 97 ವರ್ಷ ಹಳೆಯ ಶಾಲೆಯ ಅಭಿವೃದ್ಧಿಪಡಿಸಿದ್ದೆವು. 16 ಗಂಟೆಗಳ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಿದ್ದೆವು. ಅದರಲ್ಲಿ 11 ಸಾವಿರ ಮಂದಿ ಭಾಗವಹಿಸಿದ್ದರು’ ಎಂದು ಅವರು ತಿಳಿಸಿದರು.

ಎಸ್‌ಆರ್‌ಕೆ ಕಂಪನಿಯು ಅಡಕೆ ಮತ್ತು ಕಾಳುಮೆಣಸು ಕೊಯಿಲಿಗೆ ಬಳಸುವ ಅಲ್ಯುಮಿನಿಯಂ ಏಣಿಗಳ ಸಹಿತ ಅನೇಕ ಕೃಷಿ ಪರಿಕರಗಳನ್ನು ತಯಾರಿಸುತ್ತದೆ. ಕೃಷಿ ಪರಿಕರಗಳಿಗೆ ಇರುವ ಬೇಡಿಕೆ ಈಡೇರಿಸಲು ಉದ್ಯೋಗಿಗಳು ಈ ವರ್ಷ ಜನವರಿಯಿಂದ ಮಾರ್ಚ್‌ವರೆಗೆ ಭಾನುವಾರದ ರಜಾದಿನಗಳಲ್ಲೂ ಕೆಲಸ ಮಾಡಿದ್ದರು. ಮಾಡಿರುವ ಹೆಚ್ಚುವರಿ ಅವಧಿಯ ಕೆಲಸಕ್ಕೆ ಪ್ರೋತ್ಸಾಹಧನವನ್ನು ನೀಡಿದ್ದರ ಹೊರತಾಗಿಯೂ ಕೇಶವ ಅವರು ಕಾರ್ಮಿಕರನ್ನು ಸಂತೋಷವಾಗಿಡಲು, ಅವರ ಬದುಕಿನಲ್ಲಿ ಈಡೇರಿಸಿಕೊಳ್ಳಲು ಸಾಧ್ಯವಾಗದ್ದನ್ನು ಒದಗಿಸಬೇಕೆಂದು ಬಯಸಿದ್ದರು. 

‘ಹಿರಿಯ ಉದ್ಯೋಗಿಗಳಲ್ಲಿ ಸಲಹೆ ಕೇಳಿದಾಗ ಅವರೆಲ್ಲರೂ ಎರಡು ದಿನ ಪ್ರವಾಸ ಕಾರ್ಯಕ್ರಮ ಏರ್ಪಡಿಸುವುದಕ್ಕೆ ಒಪ್ಪಿದರು’ ಎಂದು ಕೇಶವ ಅಮೈ ತಿಳಿಸಿದರು. 19 ವರ್ಷದವರಿದ್ದಾಗಲೇ ಕೇಶವ ಅವರು ದೃಷ್ಟಿಯನ್ನು ಕಳೆದುಕೊಂಡಿದ್ದಾರೆ.  

‘ನನ್ನ ಸೋದರನ ಹೃದಯವಂತಿಕೆಯನ್ನು ವರ್ಣಿಸಲು ನನ್ನ ಬಳಿ ಮಾತುಗಳಿಲ್ಲ’ ಎನ್ನುತ್ತಾರೆ ಕೇಶವ ಅವರ ಸೊದರಿ ಸತ್ಯವತಿ ಎ.

‘ಹಿಡಿದದ್ದನ್ನು ಛಲದಿಂದ ಸಾಧಿಸುವ ಕೇಶವ ಸದಾ ಉದ್ಯೋಗಿಗಳ ಹಾಗೂ ಬಡವರ ಯೋಗಕ್ಷೇಮದ ಬಗ್ಗೆ ಆಲೋಚಿಸುವ ವ್ಯಕ್ತಿ. ನನ್ನ ಇನ್ನೊಬ್ಬ ಸೋದರಿ ಶ್ರೀಲತಾ ಎ ಅವರೂ ಇದಕ್ಕೆ ಕೈಜೋಡಿಸುತ್ತಾರೆ’ ಎಂದು ಅವರು ಹೇಳಿದರು.

ಕೇಶವ ಅಮೈ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.