ಮಂಗಳೂರು: ಬಿಡುವಿಲ್ಲದ ಕೆಲಸ ಸೃಷ್ಟಿಸುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ದೇಹ ಮತ್ತು ಮನಸ್ಸನ್ನು ಕೊಂಚ ನಿರಾಳಗೊಳಿಸಲು ಪ್ರತಿದಿನ ಐದು ನಿಮಿಷವನ್ನು ಯೋಗ ಮತ್ತು ಪ್ರಾಣಾಯಾಮಕ್ಕೆ ಮೀಸಲಿಡಿ. ಇವು ನಿಮ್ಮ ಒತ್ತಡ ನಿವಾರಕಗಳಾಗಿ ಕೆಲಸ ಮಾಡುತ್ತವೆ...
ಉದ್ಯೋಗಿಗಳು ಕಚೇರಿಯಲ್ಲೇ ಕುಳಿತು ಮಾಡಬಹುದಾದ ಸುಲಭ ಯೋಗ ಮತ್ತು ಪ್ರಾಣಾಯಾಮವನ್ನು ಆಯುಷ್ ಮಂತ್ರಾಲಯ ಪರಿಚಯಿಸಿದೆ. ಇದಕ್ಕಾಗಿಯೇ ರೂಪಿತವಾಗಿರುವ ‘y-break’ ಎಂಬ ಆ್ಯಪ್ ಹಲವರ ಮನಗೆದ್ದಿದೆ ಎನ್ನುವ ವೆನ್ಲಾಕ್ ಆಸ್ಪತ್ರೆಯ ಆಯುಷ್ ವಿಭಾಗದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ವೈದ್ಯಾಧಿಕಾರಿ ಡಾ. ಪ್ರಕಾಶ್ ಎ.ಜೆ ಅವರು ಈ ಆ್ಯಪ್‌ನ ಉಪಯೋಗದ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಾಣಾಯಾಮ, ನಿಂತು ಮಾಡಬಹುದಾದ ಆಸನಗಳು, ಧ್ಯಾನ ಈ ಮೂರನ್ನು ಆ್ಯಪ್‌ನಲ್ಲಿ ಕೇಂದ್ರೀಕರಿಸಲಾಗಿದೆ. ಅವು ಇಲ್ಲಿವೆ.
ಭ್ರಾಮರಿ ಪ್ರಾಣಾಯಾಮ: ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ, ನಿದ್ರಾಹೀನತೆಯಿಂದ ಬಳಲುವವರ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ನಾಡಿಶುದ್ಧಿ ಪ್ರಾಣಾಯಾಮ: ಪ್ರತಿನಿತ್ಯ ಇದನ್ನು ಮಾಡುವುದರಿಂದ ದೇಹ ಶುದ್ಧಗೊಳುತ್ತದೆ, ಅಧಿಕ ರಕ್ತದೊತ್ತಡ ಕಡಿಮೆ ಮಾಡಿ, ಸ್ಮರಣಶಕ್ತಿ ಮತ್ತು ಏಕಾಗ್ರತೆ ಹೆಚ್ಚಿಸಲು ಸಹಕಾರಿ.
ತಾಡಾಸನ, ಊರ್ಧ್ವ ಹಸ್ತೋತ್ಥಾನಾಸನ, ಸ್ಕಂದ ಚಕ್ರಾಸನ, ಉತ್ಥಾನ ಮಂಡೂಕಾಸನ, ಕಟಿ ಚಕ್ರಾಸನ, ಅರ್ಧ ಚಕ್ರಾಸನ, ಪ್ರಸರಿತ ಪಾದೋತ್ಥಾನಾಸನ ಇವುಗಳನ್ನು ಕಚೇರಿಯಲ್ಲಿ ಯಾವುದೇ ಸಮಯದಲ್ಲೂ ಮಾಡಬಹುದು. ಬಹುಹೊತ್ತು ಕುಳಿತು ಕೆಲಸ ಮಾಡುವವರು ಈ ಆಸನಗಳನ್ನು ಅಭ್ಯಾಸ ಮಾಡಿದರೆ, ಭುಜಗಳು ಬಲಗೊಳ್ಳುತ್ತವೆ, ಕಾಲು ಸದೃಢವಾಗುತ್ತದೆ, ದೇಹ ನಿರಾಳವಾಗುತ್ತದೆ, ಸೊಂಟದ ಭಾಗದಲ್ಲಿರುವ ಬೊಜ್ಜು ಕರಗುತ್ತದೆ. ವೈ ಬ್ರೇಕ್ ಆ್ಯಪ್ ಅನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು ಎನ್ನುತ್ತಾರೆ ಡಾ. ಪ್ರಕಾಶ್.
ಡಿ–ಸ್ಟ್ರೆಸ್, ರಿ–ಫ್ರೆಶ್, ರಿ–ಫೋಕಸ್ ಈ ಮೂರು ಅಂಶಗಳು ಇವುಗಳಲ್ಲಿ ಅಡಕವಾಗಿವೆ. ಅಲ್ಲದೆ, ಇದು ವೈಜ್ಞಾನಿಕವಾಗಿ ದೃಢಪಟ್ಟಿದೆ. ನಿತ್ಯ ಅಭ್ಯಾಸ ಮಾಡುತ್ತಿರುವ ಹಲವರಿಗೆ ಇದು ಅನುಭವಕ್ಕೆ ನಿಲುಕಿದೆ ಎಂಬುದು ಅವರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.