ADVERTISEMENT

4 ಸರ್ಕಾರಿ ಶಾಲೆಗಳಿಗೆ ಇಸ್ರೇಲ್‌ ಸ್ಮಾರ್ಟ್‌ ಬೋರ್ಡ್‌

ಅನಂತಾಡಿ ಶಾಲೆಯಲ್ಲಿ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 8:29 IST
Last Updated 16 ಜನವರಿ 2026, 8:29 IST
ಅನಂತಾಡಿ ಶಾಲೆಗೆ ಕೊಡುಗೆ ನೀಡಿದ ಸ್ಮಾರ್ಟ್‌ ಬೋರ್ಡ್‌ನಲ್ಲಿ ಇಸ್ರೇಲ್ ದೇಶದ ಕಾನ್ಸುಲ್ ಜನರಲ್ ಓರ್ಲಿ ವೈಟ್ಜ್‌ಮನ್ ಅವರು ಬೆರಳಿನ ಮೂಲಕ ಅಕ್ಷರಗಳನ್ನು ಬರೆದರು. ಕ್ಯಾ.ಬ್ರಿಜೇಶ್ ಚೌಟ ಭಾಗವಹಿಸಿದ್ದರು 
ಅನಂತಾಡಿ ಶಾಲೆಗೆ ಕೊಡುಗೆ ನೀಡಿದ ಸ್ಮಾರ್ಟ್‌ ಬೋರ್ಡ್‌ನಲ್ಲಿ ಇಸ್ರೇಲ್ ದೇಶದ ಕಾನ್ಸುಲ್ ಜನರಲ್ ಓರ್ಲಿ ವೈಟ್ಜ್‌ಮನ್ ಅವರು ಬೆರಳಿನ ಮೂಲಕ ಅಕ್ಷರಗಳನ್ನು ಬರೆದರು. ಕ್ಯಾ.ಬ್ರಿಜೇಶ್ ಚೌಟ ಭಾಗವಹಿಸಿದ್ದರು    

ಮಂಗಳೂರು: ಇಸ್ರೇಲ್ ಜೊತೆಗಿನ ಸಂಬಂಧವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರದ ‘ಮಾಶಾವ್’ ಕಾರ್ಯಕ್ರಮದಡಿ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ಶಾಲೆಗಳಿಗೆ  ತಲಾ ₹ 3.5 ಲಕ್ಷ ಮೊತ್ತದ ಸ್ಮಾರ್ಟ್ ಬೋರ್ಡ್‌ಗಳನ್ನು ಒದಗಿಸಲಾಗುತ್ತಿದೆ.  

ಅನಂತಾಡಿ ಬಂಟ್ರಿಂಜದ ಅನಂತಾಡಿಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಶಾಲೆ, ವಿಟ್ಲದ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಯ ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ಶಿಕ್ಷಣ ಸಂಸ್ಥೆಗಳು, ಮಣ್ಣಗುಡ್ಡೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಗಳು ಸ್ಮಾರ್ಟ್ ಬೋರ್ಡ್‌ಗಳನ್ನು ಒದಗಿಸಲಾಗುತ್ತಿದೆ. ಅನಂತಾಡಿ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತಕ್ಕೆ ಇಸ್ರೇಲ್ ದೇಶದ ಕಾನ್ಸುಲ್ ಜನರಲ್ ಓರ್ಲಿ ವೈಟ್ಜ್‌ಮನ್ ಸ್ಮಾರ್ಟ್ ಬೋರ್ಡ್‌ಗಳನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ಹಸ್ತಾಂತರಿಸಿದರು. 

‘ಕೃಷಿ ಹಾಗೂ ಶಿಕ್ಷಣದಲ್ಲಿ ಜಾಗತಿಕ ಮಟ್ಟದ ತಂತ್ರಜ್ಞಾನ ಹೊಂದಿರುವ ಇಸ್ರೇಲ್‌ನ ಸಹಕಾರವನ್ನು ಜಿಲ್ಲೆಯ ಅಭಿವೃದ್ಧಿಗಾಗಿ ಬಳಸಿಕೊಳ್ಳುವ ಪ್ರಯತ್ನದ ಮೊದಲ ಭಾಗವಾಗಿ ಈ ಯೋಜನೆ ಅನುಷ್ಠಾನಗೊಂಡಿದೆ’ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ತಿಳಿಸಿದರು.

ADVERTISEMENT

ಇಸ್ರೇಲ್ ದೇಶದ ಕಾನ್ಸುಲ್ ಜನರಲ್ ಓರ್ಲಿ ವೈಟ್ಜ್‌ಮನ್, ‘ಈ ಸ್ಮಾರ್ಟ್ ಬೋರ್ಡ್‌ಗಳ ಮೂಲಕ ಡಿಜಿಟಲ್ ಶಿಕ್ಷಣಕ್ಕೆ ಹೊಸ ವೇಗ ಸಿಗಲಿದೆ. ವ್ಯಾಪಾರ ಹಾಗೂ ಸಾಂಸ್ಕೃತಿಕವಾಗಿಯೂ ಇಸ್ರೇಲ್ ಮತ್ತು ದಕ್ಷಿಣ ಕನ್ನಡದ ನಡುವಿನ ಸಂಬಂಧ ಇನ್ನಷ್ಟು ವೃದ್ಧಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಸದ ಕ್ಯಾ. ಬ್ರಿಜೇಶ್‌ ಚೌಟ, ‘ಕೃಷಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಇಸ್ರೇಲ್‌ನ ಅತ್ಯಾಧುನಿಕ ತಂತ್ರಜ್ಞಾನವನ್ನು ನಮ್ಮ ಜಿಲ್ಲೆಗೆ ಪರಿಚಯಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆ. ಶಿಕ್ಷಣದಲ್ಲಿ ತಂತ್ರಜ್ಞಾನದ ಅಳವಡಿಕೆಯಿಂದ  ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆ ಜಾಗತಿಕ ಮಟ್ಟಕ್ಕೆ ಹೆಚ್ಚಲಿದೆ’ ಎಂದರು.

ಶಾಸಕರಾದ ರಾಜೇಶ್ ನಾಯ್ಕ್ , ಅನಂತಾಡಿ ಶಾಲೆ ಮುಖ್ಯೋಪಾಧ್ಯಾಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ದ.ಕ. ಜಿಲ್ಲೆಯ 4 ಶಾಲೆಗಳಿಗೆ ಇಸ್ರೇಲಿ ಸ್ಮಾರ್ಟ್‌ ಬೋರ್ಡ್‌ ಪ್ರತಿ ಸ್ಮಾರ್ಟ್‌ ಬೋರ್ಡ್‌ಗೆ ಋ 3.5 ಲಕ್ಷ ವೆಚ್ಚ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.