ADVERTISEMENT

ಜಲಸಿರಿ: ಮನೆಗಳಿಗೆ ಸಮೀಕ್ಷಾ ತಂಡ ಭೇಟಿ

ಅಗತ್ಯ ಸಹಕಾರ ನೀಡಲು ಮಹಾನಗರ ಪಾಲಿಕೆ ಆಯುಕ್ತರ ಮನವಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 16:25 IST
Last Updated 24 ಜನವರಿ 2020, 16:25 IST
ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ಕುಮಾರ್ ಹೆಗ್ಡೆ
ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ಕುಮಾರ್ ಹೆಗ್ಡೆ   

ಮಂಗಳೂರು: ಜಲಸಿರಿ ಯೋಜನೆಯಡಿ ನಗರದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ನಿರಂತರ ನೀರು ಯೋಜನೆಗೆ ಸಂಬಂಧಿಸಿದಂತೆ ಸಮೀಕ್ಷೆ ನಡೆಸಲು ಸೂಯೆಝ್‌ ಕಂಪನಿಯ ತಂಡ ಮನೆಗಳಿಗೆ ಭೇಟಿ ನೀಡಲಿದ್ದು, ನಾಗರಿಕರು ಸಹಕರಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ಎಸ್‌. ಅಜಿತ್‌ಕುಮಾರ್ ಹೆಗ್ಡೆ ಮನವಿ ಮಾಡಿದರು.

ನಗರದ ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಡಿಬಿ ನೆರವಿನ ನಿರಂತರ ನೀರು ಸರಬರಾಜು ಯೋಜನೆಯನ್ನು ಮಂಗಳೂರು ಮಹಾನಗರ ಪಾಲಿಕೆ, ಸೂಯೆಝ್‌ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್, ಸೂಯೆಝ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಡಿಆರ್ಎಸ್ ಇನ್‌ಫ್ರಾಟೆಕ್ ಪ್ರೈವೇಟ್ ಲಿಮಿಟೆಡ್ (ಜೆವಿ ಪಾಲುದಾರ), ಯುನಿಟೆಕ್ ಬ್ಯುಸಿನೆಸ್ ಪಾರ್ಕ್ ಜಂಟಿಯಾಗಿ ನಿರ್ವಹಿಸುತ್ತಿವೆ ಎಂದರು.

ಮುಂದಿನ 30 ವರ್ಷಗಳ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಮಹಾನಗರ ಪಾಲಿಕೆಯ ಎಲ್ಲ 60 ವಾರ್ಡ್‌ಗಳಲ್ಲಿ ನಿರಂತರ ನೀರು ಸರಬರಾಜು ಮಾಡಲು ಈ ಯೋಜನೆ ರೂಪಿಸಲಾಗಿದೆ ಎಂದರು.

ADVERTISEMENT

ಒಟ್ಟು ₹792.42 ಕೋಟಿ ಯೋಜನಾ ವೆಚ್ಚವಾಗಿದ್ದು, ಇದರಲ್ಲಿ ಎಂಟು ವರ್ಷಗಳ ನಿರ್ವಹಣೆಯನ್ನು ಕಂಪನಿಯೇ ಮಾಡಲಿದೆ. ಕಾಮಗಾರಿ ವೆಚ್ಚ ₹587.67 ಕೋಟಿಯಾಗಿದ್ದು, ನಿರ್ವಹಣಾ ವೆಚ್ಚ ₹204.75 ಕೋಟಿಯಾಗಿದೆ. ಖಾಸಗಿ ಕಂಪನಿಯು 2019ರ ಡಿಸೆಂಬರ್ 24 ರಿಂದ 2031ರ ಆಗಸ್ಟ್ 23 ರವರೆಗೆ ನಿರ್ವಹಣೆಯ ಗುತ್ತಿಗೆಯನ್ನು ಪಡೆದುಕೊಂಡಿದೆ ಎಂದು ತಿಳಿಸಿದರು.

ಸೂಯೆಝ್‌ ಇಂಡಿಯಾ ಕಂಪನಿಯ ಸಮೀಕ್ಷಾ ಸಿಬ್ಬಂದಿ ಮನೆಗಳು, ಕೈಗಾರಿಕೆಗಳು, ಹೋಟೆಲ್‌ಗಳು, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು, ಬ್ಯಾಂಕುಗಳು, ಚಿತ್ರಮಂದಿರಗಳು, ಶಿಕ್ಷಣ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳಿಗೆ ಭೇಟಿ ನೀಡಲಿದ್ದಾರೆ. ಕಟ್ಟಡ ಸಂಖ್ಯೆ, ವಾಟರ್ ಮೀಟರ್ ಸಂಖ್ಯೆ, ವಿದ್ಯುತ್ ಮೀಟರ್‌ನ ಆರ್ಆರ್ ಸಂಖ್ಯೆ, ಕಟ್ಟಡದ ಫೋಟೋ ಮತ್ತು ಸಂಬಂಧಿತ ವಿವರಗಳನ್ನು ಸಂಗ್ರಹಿಸಲಿದ್ದಾರೆ. ಸಮೀಕ್ಷಾ ಸಿಬ್ಬಂದಿಗೆ ಕೆಯುಐಡಿಎಫ್‌ಸಿಯಿಂದ ಗುರುತಿನ ಚೀಟಿ ನೀಡಲಾಗಿದೆ ಎಂದು ವಿವರಿಸಿದರು.

ಕೆಯುಐಡಿಎಫ್‌ಸಿ ಕಾರ್ಯನಿರ್ವಾಹಕ ಎಂಜಿನಿಯರ್ ವಲ್ಸನ್ ಎಂ. ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.