ADVERTISEMENT

ವೇಣೂರು: ಮಹಾಮಸ್ತಕಾಭಿಷೇಕದೊಂದಿಗೆ ಜನಮಂಗಳ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2023, 11:15 IST
Last Updated 21 ಸೆಪ್ಟೆಂಬರ್ 2023, 11:15 IST
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲ ಮಾತನಾಡಿದರು
ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲ ಮಾತನಾಡಿದರು   

ಉಜಿರೆ: ವೇಣೂರಿನಲ್ಲಿ 2024ರ ಫೆ.22ರಿಂದ ಮಾರ್ಚ್ 1ರವರೆಗೆ ನಡೆಯುವ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಸಂಪರ್ಕ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿನ ಸೌಲಭ್ಯ, ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಮೊದಲಾದ ಜನಮಂಗಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲ ಹೇಳಿದರು.

ವೇಣೂರಿನ ಯಾತ್ರಿನಿವಾಸದಲ್ಲಿ ಹಮ್ಮಿಕೊಂಡಿದ್ದ ದಶಲಕ್ಷಣ ಪರ್ವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಸ್ತಕಾಭಿಷೇಕ ಸಂದರ್ಭದಲ್ಲಿ ಎಲ್ಲರೂ ಕ್ಷಮಾ ಧರ್ಮದ ಪಾಲನೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ADVERTISEMENT

ಮಸ್ತಕಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ ಅವರು ಕೊಡುಗೆಯಾಗಿ ನೀಡಿದ ಕೃತಕ ಕಾಲನ್ನು ಮಂಗಳೂರು ಬೋಂದೆಲ್‌ನ ಪಾರ್ವತಿ ಅವರಿಗೆ ನೀಡಲಾಯಿತು.

ಉತ್ತಮ ಕ್ಷಮಾ ಧರ್ಮದ ಕುರಿತು ನಿವೃತ್ತ ಪ್ರಾಧ್ಯಾಪಕಿ ಬೆಳ್ತಂಗಡಿಯ ತ್ರಿಶಲಾ ಯು.ಮಲ್ಲ ಉಪನ್ಯಾಸ ನೀಡಿ, ನಾವು ಸಮಾಧಾನದಿಂದ ವರ್ತಿಸಿದರೆ ನಮಗೂ, ಇತರರಿಗೂ ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಎಂಜಿನಿಯರ್ ಶಿವಪ್ರಸಾದ ಅಜಿಲ ಇದ್ದರು. ಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ ಕುಮಾರ್ ಇಂದ್ರ ಸ್ವಾಗತಿಸಿದರು.

ಅಳದಂಗಡಿ ಮಿತ್ರಸೇನ ಜೈನ್ ಶಾಂತಿಮಂತ್ರ ಪಠಿಸಿದರು.

ಮಹಾವೀರ ಜೈನ್ ಮೂಡುಕೋಡಿಗುತ್ತು ವಂದಿಸಿದರು.

ಸಭೆ 25ರಂದು: ಮಹಾಮಸ್ತಕಾಭಿಷೇಕದ ಸಿದ್ಧತೆಗಳ ಸಗ್ಗೆ ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆಯು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸೆ.25ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಮಹಾಮಸ್ತಕಾಭಿಷೇಕ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಇಂದ್ರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.