ADVERTISEMENT

ಆರೋಗ್ಯ ವ್ಯವಸ್ಥೆ ಬಲಪಡಿಸಲು ಆಗ್ರಹ

ಜನವಾದಿ ಮಹಿಳಾ ಸಂಘಟನೆ ಧರಣಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 15:24 IST
Last Updated 28 ಜುಲೈ 2020, 15:24 IST
ಮಂಗಳೂರಿನಲ್ಲಿ ಮಿನಿ ವಿಧಾನ ಸೌಧ ಎದುರು ಮಂಗಳವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಧರಣಿ ನಡೆಸಲಾಯಿತು. ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ಮಿನಿ ವಿಧಾನ ಸೌಧ ಎದುರು ಮಂಗಳವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವತಿಯಿಂದ ಧರಣಿ ನಡೆಸಲಾಯಿತು. ಪ್ರಜಾವಾಣಿ ಚಿತ್ರ   

ಮಂಗಳೂರು: ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಒತ್ತಾಯಿಸಿ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ನಗರದ ಮಿನಿ ವಿಧಾನಸೌಧದ ಮುಂದೆ ಧರಣಿ ನಡೆಸಲಾಯಿತು.

ಜೆಎಂಎಸ್ ಜಿಲ್ಲಾ ಸಮಿತಿಯ ಅಧ್ಯಕ್ಷೆ ಜಯಂತಿ ಬಿ.ಶೆಟ್ಟಿ ಮಾತನಾಡಿ, ‘ಕೋವಿಡ್-19 ದೇಶದಾದ್ಯಂತ ವ್ಯಾಪಕವಾಗಿ ಹೆಚ್ಚುತ್ತಿದೆ. ಈ ಸಾಂಕ್ರಾಮಿಕ ರೋಗವನ್ನು ಎದುರಿಸಿ, ಜನತೆಗೆ ಧೈರ್ಯ ಮತ್ತು ಶಕ್ತಿಯನ್ನು ಕೊಡಬೇಕಾದ ಕೇಂದ್ರ-ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಕುಟುಂಬದ ಹೊಣೆ ಹೊತ್ತಿರುವ ಮಹಿಳೆಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ’ ಎಂದರು.

ಹಲವಾರು ಖಾಸಗಿ ಆಸ್ಪತ್ರೆಗಳು ಜನರನ್ನು ಸುಲಿಗೆ ಮಾಡುತ್ತಿವೆ. ಕೋವಿಡ್‌ಯೇತರ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಇಲ್ಲದೇ ಜನರು ಪರದಾಡುತ್ತಿದ್ದಾರೆ ಎಂದು ದೂರಿದರು.

ADVERTISEMENT

ವೈದ್ಯಕೀಯ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಮುಂಚೂಣಿ ಕೊರೊನಾ ಯೋಧರಿಗೆ ಸೂಕ್ತ ಸೌಲಭ್ಯ ಮತ್ತು ಸರಿಯಾದ ವೇತನ ನೀಡುತ್ತಿಲ್ಲ. ಮಹಿಳೆಯರು ಹೆರಿಗೆ ಸಂಬಂಧಿತ ಸಮಸ್ಯೆಗಳಿಂದ ಯಾತನೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಟ್ಯಂತರ ಪ್ಯಾಕೇಜ್‌ ಘೋಷಣೆ ಮಾಡಿದರೂ ಜನಸಾಮಾನ್ಯರಿಗೆ ತಲು‍ಪುತ್ತಿಲ್ಲ. ಇದರ ಲಾಭವನ್ನು ಕಾರ್ಪೊರೇಟ್ ಬಂಡವಾಳಶಾಹಿಗಳು ಪಡೆದುಕೊಂಡಿದ್ದಾರೆ. ಸರ್ಕಾರ ಕೂಡಲೇ ದೇಶದ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಚಳವಳಿ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಎಸ್‌ಎಫ್‌ಐ ನಾಯಕಿ ಮಾಧುರಿ ಬೋಳಾರ್, ಜೆಎಂಎಸ್ ನಾಯಕಿಯರಾದ ಭಾರತಿ ಬೋಳಾರ್, ವಿಲಾಸಿನಿ ತೊಕ್ಕೊಟ್ಟು, ಲೋಲಾಕ್ಷಿ ಬಂಟ್ವಾಳ, ಪ್ರಮೀಳಾ ದೇವಾಡಿಗ, ಭವ್ಯಾ ಮುಚ್ಚೂರು, ರೋಹಿಣಿ ಜಲ್ಲಿಗುಡ್ಡೆ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.