ADVERTISEMENT

ಬೆಳ್ತಂಗಡಿ | ಮರೋಡಿ ಕ್ಷೇತ್ರದಲ್ಲಿ ವರ್ಷಾವಧಿ ಆಯನ–ಸಿರಿಗಳ ಜಾತ್ರೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 7:06 IST
Last Updated 4 ಫೆಬ್ರುವರಿ 2026, 7:06 IST
   

ಬೆಳ್ತಂಗಡಿ: ಆಲಡೆ ಕ್ಷೇತ್ರ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ ಆಲಡೆ ಕ್ಷೇತ್ರ ಮರೋಡಿಯಲ್ಲಿ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆಯು ಭಾನುವಾರ ಆರಂಭಗೊಂಡಿದ್ದು, ವಿವಿಧ ಧಾರ್ಮಿಕ ವಿಧಿವಿಧಾನಗಳು ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಬಾಲಕೃಷ್ಣ ಪಾಂಗಣ್ಣಾರ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ.

ಭಾನುವಾರ ವಾಸ್ತುರಾಕ್ಷೋಘ್ನ ಹೋಮ, ಪ್ರಕಾರ ಬಲಿ, ಸೋಮವಾರ ಧ್ವಜಾರೋಹಣ, ಪ್ರಸಾದ ವಿತರಣೆ, ದೊಡ್ಡ ರಂಗಪೂಜೆ ವ್ಯಾಘ್ರಚಾಮುಂಡಿ ಸಹಿತ ರಕ್ಷೇಶ್ವರಿ, ಮೈಸಂದಾಯ ದೈವಗಳಿಗೆ ಸೇವೆ, ಸಾಂಸ್ಕೃತಿಕ ವೇದಿಕೆಯಲ್ಲಿ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ, ಹಿರಿಯಡ್ಕ ಶ್ರೀ ವೀರಭದ್ರ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರದಿಂದ ಶ್ರೀ ಕ್ಷೇತ್ರ ಹಿರಿಯಡ್ಕ ಕ್ಷೇತ್ರ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.

ಮಂಗಳವಾರ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಆಶ್ಲೇಷ ಬಲಿ, ರಾತ್ರಿ ನಿತ್ಯವಿಧಿ ಕವಾಟ ಬಂಧನ, ಪಟ್ಟದಪಂಜುರ್ಲಿ ಮತ್ತು ಕಲ್ಕುಡ ದೈವಗಳ ಕೋಲ, ಕುಣಿತ ಭಜನೆ, ಸಾಂಸ್ಕೃತಿಕ ವೇದಿಕೆಯಲ್ಲಿ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಣತಿ ಮತ್ತು ಪ್ರದೇಶ್ ಜೋಷಿ ಇವರಿಂದ ಜಾದೂ ಪ್ರದರ್ಶನ ಜರುಗಿತು.

ADVERTISEMENT

ಇಂದು ಸಿರಿಗಳ ಜಾತ್ರೆ: ಬುಧವಾರ ತುಲಾಭಾರ ಸೇವೆ ದರ್ಶನಬಲಿ ಹಾಗೂ ಮಹಾಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಬಲಿಉತ್ಸವ, ಸಿರಿಗಳ ಚಾತ್ರೆ, ಕುಮಾರ ದರ್ಶನ, ಕೊಡಮಣಿತ್ತಾಯ ದೈವದ ನೇಮೋತ್ಸವ, ದೈವದೇವರ ಭೇಟಿ, ಅವಧೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ ಕುಣಿತ ಭಜನಾ ಕಾರ್ಯಕ್ರಮ ಜರುಗಲಿದೆ.

ಸಾಂಸ್ಕೃತಿಕ ವೇದಿಕೆಯಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮ, ವಾಗ್ಮಿ ಶ್ರೀಕಾಂತ್ ಶೆಟ್ಟಿ ಅವರಿಂದ ಧಾರ್ಮಿಕ ಪ್ರವಚನ, ವಿಜಯಕುಮಾರ್ ಕೊಡಿಯಾಲ್‌ ಬೈಲು ನಿರ್ದೇಶನದಲ್ಲಿ ಶುಭರಾಜ್ ರಾವ್ ಕಾವೂರುರವರ ಛತ್ರಪತಿ ಶಿವಾಜಿ ತುಳು ನಾಟಕ ಪ್ರದರ್ಶನವಿದೆ. ಗುರುವಾರ ಸಂಪ್ರೋಕ್ಷಣೆ, ಕಲಶಾಭಿಷೇಕ, ಮಂತ್ರಾಕ್ಷತೆಯೊಂದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.

ಕ್ಷೇತ್ರದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್‌, ಪ್ರಧಾನ ಆರ್ಚಕ ಸುಬ್ರಹ್ಮಣ್ಯ ಭಟ್‌, ಜೀರ್ಣೋದ್ಧಾರ ಸಮಿತಿ ಮುಂಬೈ ಘಟಕದ ಅಧ್ಯಕ್ಷ ನಾರಾಯಣ ಸುವರ್ಣ, ಆಡಳಿತ ಸಮಿತಿಯ ಸದಸ್ಯರು, ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.