
ಮಂಗಳೂರು: ‘ಜೆಮಿಮಾ...ಎಡ್ಡೆ ‘...’ ಕಜಿಪು ಉಂಡು...ಇಲ್ಲಗ್ ಬಲ...’ (ಜೆಮಿಮಾ, ಒಳ್ಳೆಯ ಸಾರು ಮಾಡಿದ್ದೇವೆ, ಮನೆಗೆ ಬಂದು ಊಟು ಮಾಡುವಿಯಂತೆ..)
ನವಿ ಮುಂಬೈನ ಡಾ.ಡಿ.ವೈ ಪಾಟೀಲ ಸ್ಪೋರ್ಟ್ಸ್ ಅಕಾಡೆಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳ ಪ್ರಖರ ಮತ್ತು ನಿಖರ ದಾಳಿಯನ್ನು ಪುಡಿಗಟ್ಟಿದ ಮುಂಬೈ ಭಾಂಡೂಫ್ ಪ್ರದೇಶದದ 25 ವರ್ಷ ವಯಸ್ಸಿನ ಹುಡುಗಿ ಬೌಂಡರಿಗಳ ಮಳೆಗರೆಯುತ್ತಿದ್ದಾಗ ಪ್ರೇಕ್ಷಕರ ಗ್ಯಾಲರಿಯಿಂದ ಅಭಿಮಾನಿಯೊಬ್ಬರು ಪ್ರೀತಿಯಿಂದ ನೀಡಿದ ಮಾತು ಇದು.
ಮುಂಬೈಯಲ್ಲಿ ಜನಿಸಿ ಮುಂಬೈಯಲ್ಲೇ ಬೆಳೆದು ಅಲ್ಲೇ ಆಟವಾಡುತ್ತ ಬೆಳಗುತ್ತಿರುವ ಬಲಗೈ ಬ್ಯಾಟರ್ ಮತ್ತು ಆಫ್ ಬ್ರೇಕ್ ಬೌಲರ್ ಜೆಮಿಮಾ ರಾಡ್ರಿಗಸ್‌ಗೂ ತುಳುವಿಗೂ ಏನು ಸಂಬಂಧ ಎಂಬ ಪ್ರಶ್ನೆಗೆ ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡ ಪೋಸ್ಟ್‌ಗಳು ಮತ್ತು ಕಮೆಂಟ್‌ಗಳಲ್ಲಿ ಉತ್ತರವಿತ್ತು. ಜೆಮಿಮಾ ಮುಂಬೈಯವರಾಗಿದ್ದರೂ ಅವರ ತಂದೆ ಐವನ್ ರಾಡ್ರಿಗಸ್ ಮಂಗಳೂರಿನವರು.
ಐವನ್–ಲವಿತಾ ದಂಪತಿ ಜೆಮಿಮಾ ಮತ್ತು ಇಬ್ಬರು ಗಂಡುಮಕ್ಕಳು ಸಣ್ಣವರಿದ್ದಾಗ ಮುಂಬೈಗೆ ಹೋದವರು. ಈಗಲೂ ಅವರು ಮಂಗಳೂರಿನ ಕುಲಶೇಖರದಲ್ಲಿರುವ ತಮ್ಮ ಮನೆಗೆ ಬರುತ್ತಾರೆ ಎಂದು ಪರಿಚಿತರು ಹೇಳುತ್ತಾರೆ. ಇಂಥ ಸಂಬಂಧ ಇರಿಸಿಕೊಂಡಿರುವುದರಿಂದಲೇ ಐವನ್ ಬಗ್ಗೆಯೂ ಜೆಮಿಮಾ ಬಗ್ಗೆಯೂ ಮಂಗಳೂರು ಮತ್ತು ಉಡುಪಿಯ ಕ್ರಿಕೆಟ್ ಪ್ರಿಯರು ಖುಷಿಯಲ್ಲಿದ್ದಾರೆ. 3 ಟೆಸ್ಟ್, 58 ಏಕದಿನ ಮತ್ತು 112 ಟಿ20 ಪಂದ್ಯಗಳನ್ನು ಆಡಿರುವ ಜೆಮಿಮಾ ಏಕದಿನ ಕ್ರಿಕೆಟ್‌ನಲ್ಲಿ ಈ ಹಿಂದೆ ಎರಡು ಶಕತ (ಐರ್ಲೆಂಡ್ ವಿರುದ್ಧ 102, ದಕ್ಷಿಣ ಆಫ್ರಿಕಾ ಎದುರು 123) ಸಿಡಿಸಿದ್ದರೂ ಗುರುವಾರ ಆಸ್ಟ್ರೇಲಿಯಾ ಎದುರಿನ ಶಕತದ (ಅಜೇಯ 127) ಮೂಲಕ ದೇಶದ ಕಣ್ಮಣಿಯಾಗಿದ್ದಾರೆ. ಕರಾವಳಿಯ ಜನರು ಕೊಂಡಾಡಿದ್ದಾರೆ.
ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ಗುರುವಾರ ರಾತ್ರಿಯಿಂದ ಜೆಮಿಮಾ ಚಿತ್ರ ಮತ್ತು ವಿಡಿಯೊಗಳು ಕಂಡುಬಂದಿದ್ದು ಹಲವರ ಇನ್‌ಸ್ಟಾಗ್ರಾಂ ಮತ್ತು ಎಕ್ಸ್ ಹ್ಯಾಂಡಲ್‌ಗಳ ತುಂಬ ಅವರ ಗುಣಗಾನ ಕಂಡುಬಂತು. ಫೇಸ್‌ಬುಕ್‌ನ ವೈಯಕ್ತಿಕ ಮತ್ತು ಸಂಘಸಂಸ್ಥೆಗಳ ಅಕೌಂಟ್‌ಗಳಲ್ಲಿ ತುಳುನಾಡ ಹುಡುಗಿ, ಮಂಗಳೂರಿನ ಪ್ರತಿಭೆ ಎಂಬ ಹೆಮ್ಮೆಯ ಮಾತುಗಳು ಹರಿದಾಡಿವೆ.
‘ರಾಷ್ಟ್ರವಾದಿ ತೌಳವೆ’ ಎಂಬ ಅಕೌಂಟ್‌ನಲ್ಲಿ ‘ಭಾರತ ತಂಡವನ್ನು ಚಾಂಪಿಯನ್ ರೀತಿ ಆಡಿ ಫೈನಲ್‌ಗೆ ತಲುಪಿಸಿದ್ದು ನಮ್ಮ ಜಿಲ್ಲೆಯ ಜೆಮಿಮಾ’ ಎಂದು ಉಲ್ಲೇಖಿಸಿದ್ದರೆ ನಮ್ಮ ಕುಂದಾಪುರ ಎಂಬ ಖಾತೆದಾರರು ಜೆಮಿಮಾ ಅವರನ್ನು ಕಡಲನಾಡಿನ ಹೆಮ್ಮೆಯ ಮಗಳು ಎಂದು ಬಣ್ಣಿಸಿದ್ದಾರೆ. ‘ನೀವು ಮಂಗಳೂರು ಮತ್ತು ಭಾರತಕ್ಕೆ ಹೆಮ್ಮೆ ತಂದಿದ್ದೀರಿ..’ ಎಂದು ಕೂಡ ‘ನಮ್ಮ ಕುಂದಾಪುರ’ ಅಭಿಪ್ರಾಯಪಟ್ಟಿದೆ. ಜೆಮಿಮಾ ಅವರನ್ನು ಪ್ರಶಂಸಿದವರ ಪಟ್ಟಿಯಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರೂ ಇದ್ದಾರೆ.
ಬ್ಯಾಸ್ಕೆಟ್‌ಬಾಲ್, ಫುಟ್‌ಬಾಲ್ ಮೂಲಕ ಆರಂಭ
ಸಣ್ಣ ವಯಸ್ಸಿನಲ್ಲಿ ಬ್ಯಾಸ್ಕೆಟ್‌ಬಾಲ್ ಮತ್ತು ಫುಟ್‌ಬಾಲ್ ಆಡುತ್ತಿದ್ದ ಜೆಮಿಮಾ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಮೊದಲು ಹಾಕಿಯನ್ನೂ ಆಡಿದ್ದಾರೆ. ನಂತರ ಸಹೋದರರಿಗೆ ಬೌಲಿಂಗ್ ಮಾಡುತ್ತ ಕ್ರಿಕೆಟ್‌ನತ್ತ ಹೊರಳಿದವರು. 2012–13ರಲ್ಲಿ ಮಹಾರಾಷ್ಟ್ರ 19 ವರ್ಷದೊಳಗಿನವರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು. ಸೌರಾಷ್ಟ್ರ ವಿರುದ್ಧ ದ್ವಿಶತಕ ಸಿಡಿಸಿ ಮಿಂಚಿದರು. ಚಾಲೆಂಜರ್ ಟ್ರೋಫಿ, ಭಾರತ ‘ಎ’ ಸರಣಿ ಇತ್ಯಾದಿಗಳಲ್ಲಿ ಆಡಿದ ಅವರು ನಂತರ ಟೆಸ್ಟ್, ಏಕದಿನ ಮತ್ತು ಟಿ20 ತಂಡಗಳಲ್ಲಿ ಅವಿಭಾಜ್ಯರಾದರು.
ತಮ್ಮ ಮುದ್ದಿನ ಶ್ವಾನ ‘ಜೇಡ್’ ಜೊತೆ ಆಟವಾಡುವ, ಗಿಟಾರ್ ಹಿಡಿದು ಹಾಡುವ ಹುಡುಗಿ ಜೆಮಿಮಾ ಅವರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಖ್ಯೆಯ ಹಿಂಬಾಲಕರು ಇದ್ದಾರೆ. ಕೋವಿಡ್–19 ಲಾಕ್‌ಡೌನ್ ಸಂದರ್ಭದಲ್ಲಿ ರೀಲ್‌ಗಳ ಮೂಲಕವೂ ಅವರು ಗಮನ ಸೆಳೆದಿದ್ದರು.