ADVERTISEMENT

ಜೆಟ್ಟಿ ಅಭಿವೃದ್ಧಿ: ಶೀಘ್ರ ಕಾಮಗಾರಿ ಪ್ರಾರಂಭಿಸಿ

ಲಕ್ಷದ್ವೀಪಕ್ಕೆ ಮೀಸಲಿರುವ ಸ್ಥಳ ಅಭಿವೃದ್ಧಿ ಕುರಿತಂತೆ ಪರಿಸರ ಸಾರ್ವಜನಿಕ ಸಭೆಯಲ್ಲಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 4:16 IST
Last Updated 11 ಡಿಸೆಂಬರ್ 2025, 4:16 IST
ಲಕ್ಷದ್ವೀಪಕ್ಕೆ ಮೀಸಲಿರುವ ಜೆಟ್ಟಿ ಅಭಿವೃದ್ಧಿ ಕುರಿತ ಸಾರ್ವಜನಿಕ ಅಭಿಪ್ರಾಯ ಆಲಿಕೆ ಸಭೆಯಲ್ಲಿ ಕಸಬಾ ಬೆಂಗ್ರೆಯ ಅಬ್ದುಲ್ ತಯ್ಯೂಬ್ ಮಾತನಾಡಿದರು : ಪ್ರಜಾವಾಣಿ ಚಿತ್ರ
ಲಕ್ಷದ್ವೀಪಕ್ಕೆ ಮೀಸಲಿರುವ ಜೆಟ್ಟಿ ಅಭಿವೃದ್ಧಿ ಕುರಿತ ಸಾರ್ವಜನಿಕ ಅಭಿಪ್ರಾಯ ಆಲಿಕೆ ಸಭೆಯಲ್ಲಿ ಕಸಬಾ ಬೆಂಗ್ರೆಯ ಅಬ್ದುಲ್ ತಯ್ಯೂಬ್ ಮಾತನಾಡಿದರು : ಪ್ರಜಾವಾಣಿ ಚಿತ್ರ   

ಮಂಗಳೂರು: ಹಳೆ ಮಂಗಳೂರು ಬಂದರಿನಲ್ಲಿ ಲಕ್ಷದ್ವೀಪಕ್ಕೆ ಮೀಸಲಿರುವ ಜೆಟ್ಟಿ ಅಭಿವೃದ್ಧಿಯನ್ನು ಶೀಘ್ರ ಪ್ರಾರಂಭಿಸುವ ಮೂಲಕ ಬಂದರು ಅಭಿವೃದ್ಧಿ, ಆರ್ಥಿಕ ವಹಿವಾಟು ಹೆಚ್ಚಬೇಕು ಎಂಬ ಬಹುಮತದ ಅಭಿಪ್ರಾಯ ಪರಿಸರ ಸಾರ್ವಜನಿಕ ಸಭೆಯಲ್ಲಿ ವ್ಯಕ್ತವಾಯಿತು.

ಕಾರ್ಗೊ ಮತ್ತು ಕ್ರೂಸ್ ಟರ್ಮಿನಲ್ ಸಂಬಂಧಿತ ಮೂಲ ಸೌಕರ್ಯದೊಂದಿಗೆ ಲಕ್ಷದ್ವೀಪಕ್ಕೆ ಮೀಸಲಾದ ಜೆಟ್ಟಿ ಅಭಿವೃದ್ಧಿ ಪಡಿಸುವ ಸಲುವಾಗಿ ಹಳೆ ಬಂದರಿನ ದಕ್ಷಿಣ ವಾರ್ಫ್ ಗೋದಾಮಿನಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್‌.ವಿ. ಅಧ್ಯಕ್ಷತೆಯಲ್ಲಿ ಬುಧವಾರ ಕರೆದಿದ್ದ ಸಭೆಯಲ್ಲಿ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.

ಟ್ರಾಲ್ ಬೋಟ್ ಅಸೋಸಿಯೇಷನ್ ಅಧ್ಯಕ್ಷ ಚೇತನ್ ಬೆಂಗ್ರೆ ಮಾತನಾಡಿ, ‘ಲಕ್ಷದ್ವೀಪಕ್ಕೆ ಮೀಸಲಾದ ಜೆಟ್ಟಿ ಅಭಿವೃದ್ಧಿ ಯೋಜನೆ ರೂಪಿಸಿ ಎರಡು ವರ್ಷ ಕಳೆದವು. ಯಾಕಾಗಿ ವಿಳಂಬ ಆಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಇದು ಅಭಿವೃದ್ಧಿ ಕಂಡರೆ ಹಳೆ ಬಂದರಿನ ಚಿತ್ರಣವೇ ಬದಲಾಗುತ್ತದೆ. ಬಂದರು ವ್ಯಾಪ್ತಿಯಲ್ಲಿ ಡ್ರೆಜ್ಜಿಂಗ್ ಕಾರ್ಯ ತುರ್ತಾಗಿ ನಡೆಯಬೇಕು’ ಎಂದರು.

ADVERTISEMENT

ಕಸಬಾ ಬೆಂಗ್ರೆ ಜಮಾತ್ ಅಧ್ಯಕ್ಷ ಬಿಲಾಲ್ ಮೊಯಿದ್ದೀನ್ ಮಾತನಾಡಿ, ‘ಕಸಬಾ ಬೆಂಗ್ರೆಯಲ್ಲಿ 30 ಸಾವಿರ ಜನಸಂಖ್ಯೆ ಇದೆ. ಕೂಲಿ ಕಾರ್ಮಿಕರು, ಮೀನು ವ್ಯಾಪಾರಿಗಳು, ಮೀನುಗಾರರು ಇಲ್ಲಿನ ನಿವಾಸಿಗಳು. ದಿನಕ್ಕೆ ಸರಾಸರಿ 5 ಸಾವಿರ ಜನರು ಮಂಗಳೂರಿಗೆ ಬರುತ್ತಾರೆ. ಪ್ರಯಾಣಿಕರ ಫೆರ್‍ರಿಯಲ್ಲಿ ಅವರು ನಿತ್ಯ ಪ್ರಯಾಣ ಮಾಡುತ್ತಾರೆ. ಯಾರಿಗಾದರೂ ಅನಾರೋಗ್ಯವಾದರೂ ಇದೇ ಫೆರ್‍ರಿಯನ್ನು ಅವಲಂಬಿಸಬೇಕು. ಲಕ್ಷದ್ವೀಪ ಜೆಟ್ಟಿ ಅಭಿವೃದ್ಧಿ ಹೆಸರಿನಲ್ಲಿ ಪ್ರಯಾಣಿಕರ ಫೆರ್‍ರಿಯನ್ನು 300 ಮೀಟರ್ ದೂರಕ್ಕೆ ತಳ್ಳಲಾಗುತ್ತಿದೆ. ಇದರಿಂದ ಕಸಬಾ ಬೆಂಗ್ರೆ ಜನರಿಗೆ ತೊಂದರೆಯಾಗುತ್ತದೆ’ ಎಂದರು.

‘ಸಭೆಯ ಬಗ್ಗೆ ಸ್ಥಳೀಯರು, ಮೀನುಗಾರರಿಗೆ ಸರಿಯಾದ ಮಾಹಿತಿ ನೀಡಿಲ್ಲ. ಜನರಿಗೆ ಮರೆಮಾಚಿ ಸಭೆ ನಡೆಸಲಾಗುತ್ತದೆಯೇ ಎಂಬ ಅನುಮಾನ ಮೂಡಿದೆ. ಕಸಬಾ ಬೆಂಗ್ರೆಯಿಂದ ಮಂಗಳೂರು ತಲುಪಲು ಕನಿಷ್ಠ 15 ನಿಮಿಷ ಬೇಕಾಗುತ್ತದೆ. ಫೆರ್‍ರಿಯನ್ನು ಮತ್ತೆ ಮುಂದಕ್ಕೆ ಹಾಕಿದರೆ ಮತ್ತಷ್ಟು ವಿಳಂಬವಾಗುತ್ತದೆ. ಫೆರ್‍ರಿ ಸ್ಥಳವನ್ನು ಯಾವುದೇ ಕಾರಣಕ್ಕೂ ಮುಂದಕ್ಕೆ ಹಾಕಬಾರದು’ ಎಂದು ಕಸಬಾ ಬೆಂಗ್ರೆಯ ಅಬ್ದುಲ್ ತಯ್ಯೂಬ್ ಬೆಂಗ್ರೆ ಆಗ್ರಹಿಸಿದರು.

ಪ್ರಸ್ತಾವಿತ ಯೋಜನೆ ಪ್ರಾಯೋಗಿಕವಾಗಿ ಸಾಧುವಲ್ಲ. ಇದಕ್ಕಿಂತ ಪೂರ್ವದಲ್ಲಿ ದಕ್ಷಿಣ ವಾರ್ಫ್ ಮತ್ತು ಉತ್ತರ ವಾರ್ಫ್‌ನಲ್ಲಿ ನಿರುಪಯುಕ್ತವಾಗಿರುವ ಜಾಗ ಸದ್ಬಳಕೆಗೆ ಆದ್ಯತೆ ನೀಡಬೇಕು ಎಂದು ಹಳೆಬಂದರು ಶ್ರಮಿಕರ ಸಂಘದ ಮುಖಂಡ ಬಿ.ಕೆ. ಇಮ್ತಿಯಾಜ್ ಒತ್ತಾಯಿಸಿದರು.

‘ಹಳೆ ಬಂದರಿನ ನಿರ್ವಹಣೆ ನಡೆಯುತ್ತಿಲ್ಲ. ಡ್ರೆಜ್ಜಿಂಗ್ ತುರ್ತಾಗಿ ಆಗಬೇಕು. ಹೂಳು ತುಂಬಿರುವುದರಿಂದ ದೊಡ್ಡ ಹಡಗುಗಳಿಗೆ ಬರಲು ಆಗುತ್ತಿಲ್ಲ ಎಂದು ಸ್ಥಳೀಯರಾದ ಎ.ಕೆ. ಉಸ್ಮಾನ್ ಹೇಳಿದರು.

ಬಂದರಿನಲ್ಲಿ ಡ್ರೆಜ್ಜಿಂಗ್ ವಿಳಂಬವಾಗುತ್ತಿದೆ. ವರ್ಷದ ಹಿಂದೆ ಒಂದು ವಾರದಲ್ಲಿ ಕಾಮಗಾರಿ ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದರೂ, ಇನ್ನೂ ಕಾಮಗಾರಿ ಮಾಡಿಲ್ಲ ಎಂದು ಮಾಜಿ ಕಾರ್ಪೊರೇಟರ್ ಅಬ್ದುಲ್ ಲತೀಫ್ ಆರೋಪಿಸಿದರು.

ಹಿರಿಯ ಪರಿಸರ ಅಧಿಕಾರಿ ಕೆ. ಕೀರ್ತಿಕುಮಾರ್, ಬಂದರು ಇಲಾಖೆಯ ಅಧಿಕಾರಿ ಮನೋಹರ್ ಉಪಸ್ಥಿತರಿದ್ದರು.

ಜೆಟ್ಟಿ ಅಭಿವೃದ್ಧಿಗೆ ಗುರುತಿಸಿದ ಜಾಗವನ್ನು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ವೀಕ್ಷಿಸಿದರು : ಪ್ರಜಾವಾಣಿ ಚಿತ್ರ
ಲಕ್ಷದ್ವೀಪ ಜೆಟ್ಟಿ ಅಭಿವೃದ್ಧಿ ಕುರಿತ ಪರಿಸರ ಸಮಾಲೋಚನೆ ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಮಾತನಾಡಿದರು : ಪ್ರಜಾವಾಣಿ ಚಿತ್ರ

‘₹65 ಕೋಟಿ ಅನುದಾನ’

2022ರಲ್ಲಿ ಅನುಮೋದನೆಗೊಂಡಿರುವ ಲಕ್ಷದ್ವೀಪಕ್ಕೆ ಮೀಸಲಿರುವ ಜೆಟ್ಟಿ ಅಭಿವೃದ್ಧಿ ಯೋಜನೆಗೆ  ಮೇ 19 2025ರಂದು ಸಿಆರ್‌ಜಡ್ ಅನುಮತಿ ದೊರೆತಿದೆ. ಸಾಗರಮಾಲಾ ಯೋಜನೆಯಡಿ ದೊರೆತ ₹65 ಕೋಟಿ ಅನುದಾನದಲ್ಲಿ ಕರ್ನಾಟಕ ಜಲಸಾರಿಗೆ ಮಂಡಳಿಯು ಕಾಮಗಾರಿ ನಿರ್ವಹಿಸಲಿದೆ ಎಂದು ಪರಿಸರ ಅಧಿಕಾರಿ ಲಕ್ಷ್ಮಿಕಾಂತ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.