
ಮಂಗಳೂರು: ‘ಹಾವು ಕಚ್ಚಿ ಬೇಕಾದರೂ ಸಾಯಬಹುದು, ಆದರೆ ಅಕ್ಕಿ ಕಚ್ಚಿ ಸಾಯಬಾರದು ಎಂಬುದು ತುಳುವಿನ ಪ್ರಸಿದ್ಧ ಗಾದೆ. ಇಳುವರಿ ಹೆಚ್ಚಿಸಲು ಮಾಡುವ ತಂತ್ರಗಳಿಂದಾಗಿ, ಹಾಕುವ ರಸಗೊಬ್ಬರಗಳಿಂದಾಗಿ ಉಣ್ಣುವ ತಟ್ಟೆಯಲ್ಲಿ ವಿಷಾನ್ನ ಸೇರಿಕೊಂಡಿದೆ’ ಎಂದು ಉಪನ್ಯಾಸಕಿ ಜ್ಯೋತಿ ಚೇಳಾಯ್ರು ಹೇಳಿದರು.
ಶಿಶಿರ– ಶಿಕ್ಷಕ ಶಿಕ್ಷಣ ರಂಗ, ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗ ಹಾಗೂ ತುಳು ಸ್ನಾತಕೋತ್ತರ ಹಳೆ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ತುಳು ಪರ್ಬ ಸಂಭ್ರಮ ವಿಚಾರ ಗೋಷ್ಠಿಯಲ್ಲಿ ಅವರು ತುಳುವರ ಕೃಷಿ ಬದುಕಿನ ಕುರಿತು ಮಾತನಾಡಿದರು.
‘ಮುಡಿ ಅಕ್ಕಿಯಲ್ಲಿ ಹುಳಗಳಾಗುವುದು ಮಾಮೂಲಿ. ಅಕ್ಕಿ ಹುಳವನ್ನು ಪಕ್ಕಕ್ಕಿಟ್ಟು ಉಣ್ಣುತ್ತಿದ್ದೆವು. ಈಗಿನ ಅಕ್ಕಿಯಲ್ಲಿ ಹುಳಗಳು ಸಿಗುವುದಿಲ್ಲ. ಏಕೆಂದರೆ ಅದಕ್ಕೆ ಅಷ್ಟು ರಾಸಾಯನಿಕ ಹಾಕಿರುತ್ತಾರೆ. ಅದರಲ್ಲಿ ಹುಳಗಳು ಬದುಕುವುದು ಬಿಡಿ, ಅದನ್ನು ತಿನ್ನುವ ನಾವು ಬದುಕುಳಿದಿರುವುದೇ ಹೆಚ್ಚು’ ಎಂದರು.
‘ಕೆಸರಿನಲ್ಲಿ ಒಂದು ದಿನ’ ಎಂದು ಕಾರ್ಯಕ್ರಮ ಆಚರಿಸಿ, ಮೈಗೆ ಕೆಸರು ಮೆತ್ತಿಕೊಳ್ಳುತ್ತಿದ್ದೇವೆ. ವರ್ಷಕ್ಕೊಮ್ಮೆ ಕೆಸರಿನಲ್ಲಿ ಹೊರಳಾಡಿದರೆ ಸಾಲದು. ಬದುಕುಳಿಯಬೇಕಾದರೆ ಅನುದಿನವೂ ಕೆಸರಿನ ಜೊತೆ ಸೆಣಸಿ ಉಣ್ಣುವ ಅನ್ನವನ್ನು ನಾವೆ ಬೆಳೆಯಲು ಸಾಧ್ಯವಾಗಬೇಕು’ ಎಂದರು.
‘ಹಳ್ಳಿ ಹಳ್ಳಿಗಳಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಆದರೆ ಕೃಷಿ ಮರೀಚಿಕೆಯಾಗಿದೆ. ತುಳುವರ ಜೀವಾಳವಾಗಿದ್ದ ಭತ್ತದ ಕೃಷಿಯೇ ಮೂಲೆಗುಂಪಾಗಿದೆ. ಬೈಲಿನುದ್ದಕ್ಕೂ ಸುಗಂಧ ಬೀರುವ ಗಂಧಸಾಲೆ ಭತ್ತವೂ ಸೆರಿದಂತೆ ಹವಾಮಾನಕ್ಕೆ ತಕ್ಕುದಾದ ನೂರಾರು ತಳಿಗಳು ನಮ್ಮಲ್ಲಿದ್ದವು. ಅವೆಲ್ಲವನ್ನೂ ಕಳೆದುಕೊಂಡಿದ್ದೇವೆ. ನಾವೀಗ ಮಾವಿನಹಣ್ಣಿಗಿಂತ ಜಾಸ್ತಿ ಡ್ರ್ಯಾಗನ್, ರಂಬುಟಾನ್‌ನಂನ್ನಂತಹ ಹಣ್ಣುಗಳನ್ನು ತಿನ್ನುತ್ತಿದ್ದೇವೆ ’ ಎಂದು
‘ತುಳುವರು ಯಾವತ್ತೂ ಕೃಷಿಯನ್ನು ಲಾಭ ನಷ್ಟದ ಆಯಾಮದಲ್ಲಿ ಕಂಡವರಲ್ಲ. ಏಕೆಂದರೆ ನಮ್ಮವರ ಪಾಲಿಗೆ ಕೃಷಿಯೇ ಬದುಕಾಗಿತ್ತು. ಮೈದುಂಬಿದ ಭತ್ತದ ಗದ್ದೆಗಳನ್ನು ಕಂಡು ಬೆಳೆದವರು ನಾವು. ಈ ಎಲ್ಲೆಲ್ಲೂ ಕಟ್ಟಡ. ಯಾವ ಕಂಪ್ಯೂಟರ್ ಕೂಡ ಅಕ್ಕಿಯನ್ನು ಕೊಡುವುದಿಲ್ಲ. ಯಾವ ಕೃತಕ ಬುದ್ಧಿಮತ್ತೆಯಿಂದಲೂ (ಎ.ಐ) ಅನ್ನವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ತುಳುವರು ಯಾವತ್ತೂ ಸಂಕ್ರಾಂತಿ, ಸಿಂಗೊಡೆಯಂದು ( ತುಳುವರ ತಿಂಗಳ ಮೊದಲ ದಿನ) ನೆಲ ಅಗೆದವರಲ್ಲ. ಈಗ ಯಂತ್ರಗಳು ಅನುದಿನವೂ ಅಗೆಯುತ್ತಿವೆ. ಕೃಷಿಯ ಜೊತೆ ನಮ್ಮ ಸ್ವಂತಿಕೆಯನ್ನೇ ಕಳೆದುಕೊಂಡಿದ್ದೇವೆ’ ಎಂದರು.
ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ, ‘ಗ್ರೀಕ್‌ನ ಹೋಮರ್ ಕವಿಯ ಈಲಿಯೆಡ್ ಕಾವ್ಯಕ್ಕೆ ಸರಿ ಸಮಾನವಾದ ಮತ್ತೊಂದು ಕಾವ್ಯ ಇದ್ದರೆ ಅದು ತುಳುವಿನ ಸಿರಿ ಪಾಡ್ದನ. ಬೇರೆ ಬೇರೆ ರಾಷ್ಟ್ರಗಳ ವಿದ್ವಾಂಸರು ನಮ್ಮತ್ತ ನೋಡುತ್ತಿದ್ದಾರೆ. ತಮಿಳಿನ ಪ್ರಾಚೀನ ಸಂಗಂ ಸಾಹಿತ್ಯದಲ್ಲೂ ತುಳುವರ ಪ್ರಾಮಾಣಿಕತೆಯ ಉಲ್ಲೇಖ ಕಾಣಸಿಗುತ್ತವೆ. ಆದರೆ ನಮ್ಮತನದ ಬಗ್ಗೆ ನಮಗೇ ಅರಿವಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಮಡಂತ್ಯಾರು ಬಡಗ ಕಜೆಕಾರಿನಲ್ಲಿ 2500 ವರ್ಷಗಳಿಗೂ ಹಳೆಯ 30 ಕ್ಕೂ ಹೆಚ್ಚು ಕಲ್ಲುಗೋರಿಗಳಿದ್ದವು. ಇಂತಹ ಐತಿಹಾಸಿಕ ಕುರುಹುಗಳನ್ನೇ 15– 20 ವರ್ಷಗಳಿಂದೀಚೆಗೆ ನಾವು ಕಳೆದುಕೊಂಡಿದ್ದೇವೆ. ಅಂತಹ ಐತಿಹಾಸಿಕ ಪ್ರಜ್ಞೆ ನಮ್ಮದು’ ಎಂದರು.
ಯಕ್ಷಗಾನ ವಿದ್ವಾಂಸ ದಿನಕರ ಪಚ್ಚನಾಡಿ, ‘ತುಳು ಸಂಸ್ಕೃತಿ, ಸಂಸ್ಕಾರ ಕಣ್ಮರೆ ಆಗಲು ಬಿಡಬಾರದು. ಅದಕ್ಕಾಗಿ ಯುವ ಸಮುದಾಯ ತುಳುವಿನಲ್ಲಿ ಕತೆ, ಕವಿತೆ, ನಾಟಕ.. ಏನನ್ನಾದರೂ ಬರೆಯುತ್ತಿರಬೇಕು’ ಎಂದರು.
‘ಅಭಿಮಾನವಿದ್ದರೆ ಮಾತ್ರ ಉಳಿಯಲಿದೆ ಭಾಷೆ’
‘ಒಂದು ಭಾಷೆ ನೆಲದ ಸಂಸ್ಕೃತಿ ಪರಂಪರೆಯ ಪ್ರತಿಬಿಂಬ. ಆಹಾರ ಶೈಲಿ ರೀತಿ-ನೀತಿಗಳೆಲ್ಲವೂ ಭಾಷೆಯ ಮೇಲೆ ಅವಲಂಬಿತವಾಗಿರುತ್ತದೆ. ತುಳು ಸಂಸ್ಕೃತಿ ಆಹಾರ ಶೈಲಿ ಸಂಪ್ರದಾಯ ಆಚರಣೆಗಳು ದೇಶದಲ್ಲೇ ವಿಭಿನ್ನ. ಇವುಗಳನ್ನು ಮುಂದಿನ ತಲೆಮಾರಿಗೂ ಕೊಂಡೊಯ್ಯುವ ಗುರುತರ ಹೊಣೆ ತುಳುವರ ಮೇಲಿದೆ. ಭಾಷೆ ಮೇಲೆ ಅಭಿಮಾನ ಇದ್ದಾಗ ಮಾತ್ರ ಅದನ್ನು ಉಳಿಸಿಕೊಳ್ಳಲು ಸಾಧ್ಯ’ ಎಂದು ವಿಧಾನ ಸಭಾಧ್ಯಕ್ಷ ಯು. ಟಿ. ಖಾದರ್ ಅಭಿಪ್ರಾಯಪಟ್ಟರು. ತುಳು ಪರ್ಬ ಸಂಭ್ರಮ ವಿಚಾರ ಗೋಷ್ಠಿ ಮತ್ತು ಕವಿ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್.ಧರ್ಮ ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ. ಸಿ. ಭಂಡಾರಿ ವಿಶ್ವವಿದ್ಯಾನಿಲಯ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ನಿಟ್ಟೆಗುತ್ತು ಕರ್ನಲ್ ಶರತ್ ಭಂಡಾರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಶಿಶಿರದ ಅಧ್ಯಕ್ಷ ಸುಭಾಷ್ ಚಂದ್ರ ಕಣ್ವತೀರ್ಥ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಗಣಪತಿ ಗೌಡ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಮಾಧವ ಎಂ.ಕೆ. ಭಾಷಾ ಸಂಘದ ಸಹ ನಿರ್ದೇಶಕಿ ಪ್ರೊ. ನಾಗರತ್ನ ಎನ್. ರಾವ್ ಶಿಶಿರಂ ಖಜಾಂಚಿ ಆರ್. ಚೇತನ್ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಲಕ್ಷ್ಮಿದೇವಿ ಭಾಷಾ ಸಂಘದ ಪ್ರೊ.ನಾಗರತ್ನ ರಾವ್ ತುಳು ಎಂ.ಎ. ಹಳೆ ವಿದ್ಯಾರ್ಥಿ ಸಂಘದ ಖಜಾಂಚಿ ಪ್ರಶಾಂತಿ ಇರುವೈಲು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.