ಬಂಧನ
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಸಾಕ್ಷಿ ದೂರುದಾರನಿಗೆ ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆತನನ್ನು ಬಿಗಿ ಪೊಲೀಸ್ ಭದ್ರತೆಯೊಂದಿಗೆ ಶಿವಮೊಗ್ಗ ಜೈಲಿಗೆ ಶನಿವಾರ ಕಳುಹಿಸಲಾಯಿತು.
ಪ್ರಕರಣದ ಸಾಕ್ಷಿ ದೂರುದಾರ ‘ತಾನು ಹೂತುಹಾಕಿದ್ದ ಮೃತದೇಹ ವೊಂದರ ಬುರುಡೆ’ ಎಂದು ಹೇಳಿಕೊಂಡು ಮನುಷ್ಯನ ತಲೆಬುರುಡೆ ಯೊಂದನ್ನು ಒಪ್ಪಿಸಿದ್ದ. ವಿಚಾರಣೆ ವೇಳೆ, ‘ಆ ತಲೆಬುರುಡೆ ನಾನು ಹೂತು ಹಾಕಿದ್ದ ಮೃತದೇಹದ್ದಲ್ಲ’ ಎಂದು ಒಪ್ಪಿಕೊಂಡಿದ್ದ. ಆತನನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಬಂಧಿಸಿ, ಆ.23ರಂದು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆತನಿಗೆ ಸೆ.3ರ ವರೆಗೆ ಎಸ್‌ಐಟಿ ವಶಕ್ಕೆ ಒಪ್ಪಿಸಿದ್ದ ನ್ಯಾಯಾಲಯ, ನಂತರ ಎಸ್‌ಐಟಿ ಕಸ್ಟಡಿಯ ಅವಧಿಯನ್ನು ಸೆ. 6ರವರೆಗೆ ವಿಸ್ತರಿಸಿತ್ತು.
ಎಸ್‌ಐಟಿ ಅಧಿಕಾರಿಗಳು ಸಾಕ್ಷಿದೂರುದಾರನನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
‘ಸಾಕ್ಷಿ ದೂರುದಾರನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರಕರಣದ ತನಿಖೆ ಮುಂದುವರಿಯಲಿದೆ. ಆತ ಈಗಾಗಲೇ ನೀಡಿರುವ ಹೇಳಿಕೆಗಳನ್ನು ಆಧರಿಸಿ ಕೆಲವರಿಂದ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಮುಂದುವರಿಯಲಿದೆ’ ಎಂದು ಮೂಲಗಳು ಹೇಳಿವೆ.
ಸಾಕ್ಷಿ ದೂರುದಾರನಿಗೆ ಆಶ್ರಯ ಒದಗಿಸಿದ್ದ ಜಯಂತ್ ಟಿ., ಆತನ ವಿಡಿಯೊ ಚಿತ್ರೀಕರಿಸಿದ್ದ ಯೂಟ್ಯೂಬರ್ ಅಭಿಷೇಕ್ ಹಾಗೂ ಗಿರೀಶ ಮಟ್ಟೆಣ್ಣವರ ಶನಿವಾರವೂ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಧರ್ಮಸ್ಥಳದಲ್ಲಿ ಕೊಲೆಯಾಗಿದ್ದ ಸೌಜನ್ಯಾ ಅವರ ಮಾವ ವಿಠಲ ಗೌಡ ಅವರನ್ನೂ ಬೆಳ್ತಂಗಡಿ ಕಚೇರಿಗೆ ಕರೆಸಿಕೊಂಡ ಎಸ್‌ಐಟಿ ಅಧಿಕಾರಿಗಳು, ಅವರಿಂದ ಶುಕ್ರವಾರ ರಾತ್ರಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.
ಮಂಗಳೂರು: ಪ್ರಕರಣದ ವಿಚಾರಣೆಗೆ ಮುನ್ನವೇ ಸಾಕ್ಷಿ ದೂರುದಾರ ತಂದೊಪ್ಪಿಸಿದ್ದ ಮನುಷ್ಯನ ತಲೆಬುರುಡೆಯನ್ನು ನೇತ್ರಾವತಿ ಸ್ನಾನಘಟ್ಟದ ಸಮೀಪದ ಕಾಡಿನಿಂದಲೇ ತೆಗೆಯಲಾಗಿತ್ತು ಎಂದು ಗೊತ್ತಾಗಿದೆ.
‘ಆ ಬುರುಡೆ ಇದ್ದ ಜಾಗವನ್ನು ಕೊಲೆಯಾದ ಸೌಜನ್ಯಾ ಅವರ ಮಾವ ವಿಠಲ ಗೌಡ ಅವರೇ ಸಾಕ್ಷಿದೂರುದಾರನಿಗೆ ತೋರಿಸಿದ್ದರು. ಅಲ್ಲಿಂದ ತೆಗೆದ ಬುರುಡೆಯನ್ನೇ ಸಾಕ್ಷಿ ದೂರುದಾರ ವಕೀಲರ ತಂಡಕ್ಕೆ ತೋರಿಸಿದ್ದ. ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದ ಆತ, ಆ ಬುರುಡೆಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ತಲೆ ಬುರುಡೆಯನ್ನು ಹೊರತೆಗೆಯಲಾಗಿದೆ ಎನ್ನಲಾದ ಜಾಗವು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸಮೀಪ ಉಜಿರೆ–ಧರ್ಮಸ್ಥಳ ರಸ್ತೆಯ ಪಕ್ಕದಲ್ಲಿ ಬಂಗ್ಲೆಗುಡ್ಡೆಯಲ್ಲಿರುವ ಕಾಡಿನ ಒಳಗಿದೆ. ವಿಠಲ ಗೌಡ ಅವರನ್ನು ಎಸ್‌ಐಟಿ ಅಧಿಕಾರಿಗಳು ಸ್ಥಳಕ್ಕೆ ಕರೆದೊಯ್ದು ಶನಿವಾರ ಮಹಜರು ನಡೆಸಿದರು. ಈ ವೇಳೆ ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದ ಜಯಂತ ಟಿ. ಅವರೂ ಇದ್ದರು. ಸಾಕ್ಷಿ ದೂರುದಾರನನ್ನು ಬೆಳ್ತಂಗಡಿ ಜೆಎಂಎಂಸಿ ನ್ಯಾಯಾಲಯದಿಂದ ಶಿವಮೊಗ್ಗ ಜೈಲಿಗೆ ಕಳುಹಿಸಿಕೊಟ್ಟ ಬಳಿಕವೇ ಈ ಮಹಜರು ನಡೆದಿದ್ದು, ಈ ವೇಳೆ ಸಾಕ್ಷಿ ದೂರುದಾರ ಅಲ್ಲಿ ಇರಲಿಲ್ಲ.
ಸಾಕ್ಷಿ ದೂರುದಾರ ಶವ ಹೂತಿರುವುದಾಗಿ ನೇತ್ರಾವತಿ ಸ್ನಾನಘಟ್ಟದ ಸಮೀಪದಲ್ಲಿ ತೋರಿಸಿದ್ದ 11ನೇ ಜಾಗಕ್ಕಿಂತ 100 ಮೀ ದೂರದಲ್ಲಿ ನೆಲದ ಮೇಲೆ ಮೃತದೇಹದ ಮೂಳೆಗಳು ಪತ್ತೆಯಾಗಿದ್ದವು. ಈ ಜಾಗಗಳು ಉಜಿರೆ– ಧರ್ಮಸ್ಥಳ ರಸ್ತೆ ಪಕ್ಕದ ಈ ದಟ್ಟ ಕಾಡಿನಲ್ಲೇ ಇವೆ.
ಈ ಬುರುಡೆಯನ್ನು ಸಾಕ್ಷಿ ದೂರುದಾರನೇ ಹೊರ ತೆಗೆದಿದ್ದನೇ ಅಥವಾ ಬೇರೆಯವರು ಅದನ್ನು ತಂದು ಆತನಿಗೆ ಒಪ್ಪಿಸಿದ್ದರೆ ಎಂಬ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.
ಸಾಕ್ಷಿದಾರರ ರಕ್ಷಣಾ ಯೋಜನೆ 2018ರ ಅಡಿ ಸಾಕ್ಷಿ ದೂರುದಾರನಿಗೆ ಒದಗಿಸಲಾಗಿರುವ ರಕ್ಷಣೆಯ ಅವಧಿ ಇದೇ 9ರಂದು ಕೊನೆಗೊಳ್ಳಲಿದೆ. ‘ಇದೊಂದು ಪ್ರಮುಖ ಪ್ರಕರಣವಾಗಿರುವ ಕಾರಣ ಸಾಕ್ಷಿ ದೂರುದಾರನಿಗೆ ಸಾಕ್ಷಿದಾರರ ಸಂರಕ್ಷಣಾ ಯೋಜನೆಯಡಿ ಒದಗಿಸಿರುವ ರಕ್ಷಣೆಯನ್ನು ಮುಂದುವರಿಸುವ ಅಗತ್ಯ ಬೀಳಬಹುದು’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಸಾಕ್ಷಿ ದೂರುದಾರನಿಗೆ ರಕ್ಷಣೆ ಒದಗಿಸುವ ಕುರಿತ ಆದೇಶದಲ್ಲಿ ಮಾರ್ಪಾಡು ಮಾಡುವ ಬಗ್ಗೆ ಸಕ್ಷಮ ಪ್ರಾಧಿಕಾರವೇ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಸಾಕ್ಷಿ ದೂರುದಾರನಿಗೆ ಬೆದರಿಕೆ ಇದೆಯೇ ಎಂಬ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ಅವರಿಂದ ವರದಿ ಪಡೆದು ಸಕ್ಷಮ ಪ್ರಾಧಿಕಾರವು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.