ADVERTISEMENT

ಮೆಟ್ಟಿಲುಗಳ ಸಹಾಯವಿಲ್ಲದೆ ಗಡಾಯಿಕಲ್ಲು ಏರಿದ ಜ್ಯೋತಿರಾಜ್

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2023, 14:04 IST
Last Updated 12 ಫೆಬ್ರುವರಿ 2023, 14:04 IST
   

ಬೆಳ್ತಂಗಡಿ/ ಉಜಿರೆ: ಚಿತ್ರದುರ್ಗದ ಜ್ಯೋತಿರಾಜ್ ಯಾನೆ ಕೋತಿರಾಜ್ ಅವರು ಭಾನುವಾರ ಎರಡೇ ತಾಸುಗಳಲ್ಲಿ ಬರೀ ಕೈಗಳ ಸಹಾಯದಿಂದ ಗಡಾಯಿಕಲ್ಲು (ಜಮಾಲಾಬಾದ್/ ನರಸಿಂಹಗಡ) ಏರಿ ಸಾಹಸ ಮೆರೆದಿದ್ದಾರೆ.

ಸುರಕ್ಷತೆಯ ದೃಷ್ಟಿಯಿಂದ ಅವರು ಸೊಂಟಕ್ಕೆ ರೋಪ್ ಅಳವಡಿಸಿಕೊಂಡಿದ್ದರು. ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲನ್ನು ಮೆಟ್ಟಿಲುಗಳ ಸಹಾಯವಿಲ್ಲದೆ ನಿರಾತಂಕವಾಗಿ ಅವರು ಏರಿದರು.

ನಾಲ್ಕು ಕಡೆ ವಿಶ್ರಾಂತಿ: ಅರಣ್ಯ ಇಲಾಖೆಯ ಸೂಚನೆಯಂತೆ ಸೊಂಟಕ್ಕೆ ಕಟ್ಟಿದ ಬೆಲ್ಟ್ ಹಾಗೂ ಪಕ್ಕದಲ್ಲಿದ್ದ ರೋಪ್‌ಗೆ ಹುಕ್ ಮೂಲಕ ಸಂಪರ್ಕ ಕಲ್ಪಿಸಿ ಸುರಕ್ಷತೆ ದೃಷ್ಟಿಯಿಂದ ಮೇಲೇರಲು ಅವಕಾಶ ನೀಡಲಾಗಿತ್ತು. ಇವರು ಒಂದೊಂದು ಅಡಿ ಮೇಲೇರಿದಂತೆ ಗಡಾಯಿಕಲ್ಲಿನ ಮೇಲ್ಭಾಗದಲ್ಲಿದ್ದ ಅವರ ಸಂಗಡಿಗರು ರೋಪನ್ನು ಬಿಗಿಯುತ್ತ ಹತ್ತಲು ಸಹಾಯ ಆಗುವಂತೆ ವ್ಯವಸ್ಥೆ ಮಾಡುತ್ತಿದ್ದರು.

ADVERTISEMENT

ಗಡಾಯಿಕಲ್ಲು ಹತ್ತಲು ಎರಡು ತಾಸು ಪಡೆದುಕೊಂಡ ಜ್ಯೋತಿರಾಜ್ ಮಧ್ಯೆ ನಾಲ್ಕು ಕಡೆಗಳಲ್ಲಿ ಕಲ್ಲಿನ ಪೊಟರೆ ಹಾಗೂ ಮರಗಳಲ್ಲಿ ಅರ್ಧ ಗಂಟೆ ಅವಧಿ ವಿಶ್ರಾಂತಿ ಪಡೆದಿರುವುದಾಗಿ ತಿಳಿಸಿದ್ದಾರೆ. ಗಡಾಯಿಕಲ್ಲು ಹತ್ತಿದ ಬಳಿಕ ಅರ್ಧ ತಾಸು ವಿಶ್ರಾಂತಿ ಪಡೆದು ಮಾಮೂಲು ಮೆಟ್ಟಿಲಿನ ಮೂಲಕ ಕೆಳಗಿಳಿದು ಬಂದರು.

ಅಲ್ಲಲ್ಲಿ ವೀಕ್ಷಣೆ: ಕೋತಿರಾಜ್‌ ಅವರ ಸಾಹಸವನ್ನು ವೀಕ್ಷಿಸಲು ಚಂದ್ಕೂರು ದೇವಸ್ಥಾನದ ಸುತ್ತಮುತ್ತ ನೂರಾರು ಮಂದಿ ಸೇರಿದ್ದರು. ವನ್ಯಜೀವಿ ವಿಭಾಗವು ಜ್ಯೋತಿರಾಜ್ ಮತ್ತು ಅವರ ತಂಡಕ್ಕೆ ಮಾತ್ರ ಅರಣ್ಯ ಭಾಗದ ಮೂಲಕ ಗಡಾಯಿಕಲ್ಲಿನ ಬುಡಭಾಗಕ್ಕೆ ಹೋಗಲು ಅನುಮತಿ ನೀಡಿದ ಕಾರಣ, ವೀಕ್ಷಣೆಗೆ ಬಂದವರು ಚಂದ್ಕೂರು ದೇವಸ್ಥಾನದ ಪರಿಸರದಿಂದಲೇ ವೀಕ್ಷಣೆ ನಡೆಸಬೇಕಾಯಿತು.

ಭಾನುವಾರ ಬೆಳಿಗ್ಗೆ 9.50ಕ್ಕೆ ಚಂದ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅರ್ಚಕ ಗಣೇಶ್ ಭಟ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದ ಉತ್ತರ ಭಾಗದಿಂದ ಗಡಾಯಿಕಲ್ಲು ಏರುವ ಮೊದಲು ತೆಂಗಿನಕಾಯಿ ಒಡೆಯಲಾಯಿತು. 11.50ಕ್ಕೆ ಗಡಾಯಿಕಲ್ಲು ಶಿಖರ ಏರಿ ಕನ್ನಡ ಬಾವುಟ ಹಾರಿಸಿ ತಮ್ಮ ಬಹುದಿನದ ಆಸೆಯನ್ನು ಪೂರೈಸಿಕೊಂಡರು.

ಕುದುರೆಮುಖ ವನ್ಯಜೀವಿ ವಿಭಾಗದ ಆರ್‌ಎಫ್ಒ. ಸ್ವಾತಿ, ಅರಣ್ಯ ರಕ್ಷಕ ಕಿರಣ್ ಪಾಟೀಲ್ ಉಪಸ್ಥಿತರಿದ್ದರು. ಚಿತ್ರದುರ್ಗದಿಂದ ಬಂದ ಬಸವರಾಜ್, ರಾಜಶೇಖರ್, ಪವನ್ ಜೋಸ್, ನಿಂಗರಾಜು, ಮದನ್, ನವೀನ್, ಅಭಿ ಹಾಗೂ ಪವನ್ ಕುಮಾರ್, ಲಾಯಿಲ ಗ್ರಾಮ ಪಂಚಾಯಿತಿ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜೆ, ಶೌರ್ಯ ವಿಪತ್ತು ತಂಡದ ಸದಸ್ಯರು ಸಹಕಾರ ನೀಡಿದರು.

ತನ್ನ ತಂಡದ ಜೊತೆಗೆ ಶನಿವಾರ ತಾಲ್ಲೂಕಿಗೆ ಬಂದಿದ್ದ ಜ್ಯೋತಿರಾಜ್‌ ಪೂರ್ವ ಸಿದ್ಧತೆಗಳನ್ನು ನಡೆಸಿದ್ದರು. ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದರು. ಶಾಸಕ ಹರೀಶ್ ಪೂಂಜ ಮತ್ತು ಅರಣ್ಯ ಇಲಾಖೆಯ ಸಹಕಾರವನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.