
ಕಡಬ: ವ್ಯವಹಾರಿಕ ಜ್ಞಾನ, ಕೌಶಲ, ಗಣಿತದ ಮೂಲಕ್ರಿಯೆಗಳು, ವಿಜ್ಞಾನ, ಪರಿಸರ ಅಧ್ಯಯನ, ಕನ್ನಡ ಭಾಷೆ ಇತ್ಯಾದಿ ಕಲಿಕೆಗೆ ಪ್ರೋತ್ಸಾಹಿಸುವ ವಿಶಿಷ್ಟ ಕಲಿಕಾ ಹಬ್ಬವಾಗಿ ತಾಲ್ಲೂಕಿನ ಪುಣ್ಚಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆ ಆಯೋಜಿಸಲಾಗಿತ್ತು.
ಮಕ್ಕಳು ತಾವು ತಂದಿದ್ದ ತಾಜಾ ತರಕಾರಿ, ಹಣ್ಣು, ಸೊಪ್ಪುಗಳು, ಧಾನ್ಯಗಳು, ಜೇನು, ಹೂವು, ಗೆರಟೆಯ ಸೌಟು, ಹೂವಿನ ಗಿಡಗಳು, ಪೊರಕೆ, ತಿಂಡಿ– ತಿನಿಸು, ಗೃಹೋಪಯೋಗಿ ವಸ್ತುಗಳು, ಪಾನೀಯಗಳು, ಲೇಖನ ಸಾಮಾಗ್ರಿಗಳನ್ನು ಮಾರಾಟ ಮಾಡಿದರು. ಮಾರಾಟ– ಖರೀದಿ, ಲೆಕ್ಕಾಚಾರ, ಸಂವಹನ, ಹೊಣೆಗಾರಿಕೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರು.
ಸಂತೆಯಲ್ಲಿ 30 ಮಳಿಗೆಗಳು, 25 ಬಗೆಯ ಆಟಗಳಿದ್ದವು. ಮಕ್ಕಳು ಸುಮಾರು ₹16 ಸಾವಿರ ಮೊತ್ತದ ವ್ಯವಹಾರ ನಡೆಸಿದರು. ಪೋಷಕರು, ಊರವರು ಗ್ರಾಹಕರಾಗಿ ಭಾಗವಹಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.
ಶಿಕ್ಷಣ ಇಲಾಖೆಯ ಮೆಟ್ರಿಕ್ ಮೇಳದ ಪರಿಕಲ್ಪನೆಯಲ್ಲಿ ಗ್ರಾಹಕರ ನೋಂದಣಿ, ಅಳತೆಯಲ್ಲಿ ನೀವೆಷ್ಟು ಜಾಣರು?, ಎಸೆ ರಿಂಗು ಪಡೆ ವಸ್ತು, ಲೆಕ್ಕ ನೀನೆಷ್ಟು ಪಕ್ಕ?, ನಿಮಗೆಷ್ಟು ನೆನಪು, ಆಕೃತಿಗಳಿಂದ ಗೊಂಬೆ ತಯಾರಿ, ನಿಮ್ಮ ಎತ್ತರ ತಿಳಿಯಿರಿ, ಹೂ ಬೇಕೇ ಹೂ, ಅಕ್ಷರ ವೃಕ್ಷ, ಗಡಿಯಾರದಲ್ಲಿ ಕೋನಗಳ ಗಮ್ಮತ್ತು, ನಿಮ್ಮ ಮೂಗಿನ ಉದ್ದ ಗೊತ್ತೇ, ಎಷ್ಟಪ್ಪ ಎಷ್ಟು ನೀ ಹೇಳಿದಷ್ಟು, ನಿಮ್ಮ ತೂಕ ತಿಳಿಯಿರಿ, ಒಗಟು ಬಿಡಿಸಿದವನೇ ಜಾಣ, ಹಿಟ್ಟು ಮುಟ್ಟಿ ಧಾನ್ಯದ ಹೆಸರು ಹೇಳು, ಪದಬಂಧ, ಭಿನ್ನರಾಶಿ, ಪ್ರಶ್ನೆ ಒಂದು ಉತ್ತರ, ಅಳತೆ ಮಾಡಿ ನೋಡು, ಲಕ್ಕಿ ಗೇಮ್ ಹೀಗೆ ವೈವಿಧ್ಯಮಯ ಚಟುವಟಿಕೆಗಳನ್ನು ಮಕ್ಕಳು ನಿರ್ವಹಿಸಿದರು.
ತೂಕದ ಯಂತ್ರದಲ್ಲಿ ಬೆಂಡೆಕಾಯಿ ತೂಕ ಮಾಡುವ ಮೂಲಕ ಸಂತೆ ಉದ್ಘಾಟಿಸಿದ ಸವಣೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು ಅವರು, ‘ಲೆಕ್ಕಾಚಾರದ ಕೌಶಲ ಎಳವೆಯಿಂದಲೇ ಬೆಳೆಯಬೇಕು. ಆ ನಿಟ್ಟಿನಲ್ಲಿ ಕಲಿಕೆಯನ್ನು ಪಠ್ಯಕ್ಕೆ ಸೀಮಿತಗೊಳಿಸದೆ, ಜೀವನದ ಅನುಭವಗಳೊಂದಿಗೆ ಬೆಸೆಯುವ ಉದ್ದೇಶದಿಂದ ಮಕ್ಕಳ ಸಂತೆ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದು ಹೇಳಿದರು.
ಸವಣೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜಯಂತ್ ವೈ. ಮಾತನಾಡಿ, ತರಗತಿ ಕೋಣೆಯೊಳಗೆ ಕಲಿತದ್ದನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಾಗ ನೈಜ ಕಲಿಕೆಯಾಗುತ್ತದೆ. ಈ ಉದ್ದೇಶದಿಂದ ಇಲಾಖೆಯು ಮೆಟ್ರಿಕ್ ಮೇಳಗಳನ್ನು ಹಮ್ಮಿಕೊಳ್ಳಲು ಸೂಚಿಸಿದೆ ಎಂದರು.
ಸವಣೂರು ಗ್ರಾಮ ಪಂಚಾಯಿತಿ ಸದಸ್ಯ ಗಿರಿಶಂಕರ ಸುಲಾಯ, ಎಸ್‌ಡಿಎಂಸಿ ಅಧ್ಯಕ್ಷ ವಿಜಯ ಕುಚ್ಚೆಜಾಲು, ಉಪಾಧ್ಯಕ್ಷೆ ಯಮುನಾ, ಹಿರಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮುಖ್ಯಶಿಕ್ಷಕಿ ರಶ್ಮಿತಾ ನರಿಮೊಗರು, ಶಿಕ್ಷಕಿಯರಾದ ಶೋಭಾ ಕೆ, ಭಾಗೀರಥಿ, ಲೀಲಾವತಿ, ಭವಾನಿ, ಎಸ್‌ಡಿಎಂಸಿ ಸದಸ್ಯರು ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.