ADVERTISEMENT

28ರಿಂದ ಕಡಬ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 12:37 IST
Last Updated 25 ಫೆಬ್ರುವರಿ 2020, 12:37 IST

ರಾಮಕುಂಜ(ಉಪ್ಪಿನಂಗಡಿ): ಕಡಬ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಶ್ರೀರಾಮಕುಂಜೇಶ್ವರ ಪದವಿ ಕಾಲೇಜಿನ ಆವರಣದಲ್ಲಿ ಇದೇ 28 ಮತ್ತು 29ರಂದು ನಡೆಯಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಕೋಶಾಧಿಕಾರಿ ಕೆ. ಸೇಸಪ್ಪ ರೈ ಹೇಳಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಕಡಬ ತಾಲ್ಲೂಕಿನ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ ವಿಶ್ವೇಶ ತೀರ್ಥ ಸಾಮೀಜಿಯವರ ಕರ್ಮಭೂಮಿ ರಾಮಕುಂಜದಲ್ಲಿ ನಡೆಯುತ್ತಿರುವುದರಿಂದ ಈ ಸಮ್ಮೇಳನ ಅವರಿಗೆ ಸಮರ್ಪಣೆಯಾಗಲಿದೆ ಎಂದರು.

28ರಂದು ಬೆಳಿಗ್ಗೆ ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಆರ್.ಕೆ. ಧ್ವಜಾರೋಹಣ ನೆರವೇರಿಸುವರು. ಮಧ್ಯಾಹ್ನ ಕನ್ನಡ ಭುವನೇಶ್ವರಿಯ ಮೆರವಣಿಗೆಗೆ ತಾಲ್ಲೂಕು ಪಂಚಾಯಿತಿ ಸದಸ್ಯೆ ಜಯಂತಿ ಗೌಡ ಚಾಲನೆ ನೀಡಲಿದ್ದಾರೆ. ಉದ್ಯಮಿ ಎಸ್. ಕೆ. ಆನಂದ್ ಕುಮಾರ್ ಪುಷ್ಪಾರ್ಷನೆ , ಶ್ರೀರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್. ಉದ್ಘಾಟನೆ, ಕನ್ನಡ ಸಾಹಿತ್ಯ ಪಡಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಪರಿಷತ್ ಧ್ವಜಾರೋಹಣ , ಕಡಬ ತಾಲ್ಲೂಕು ಘಟಕದ ಅಧ್ಯಕ್ಷ ಜನಾರ್ಧನ ಗೌಡ ಪಣೆಮಜಲು ಸಮ್ಮೇಳನ ಧ್ವಜಾರೋಹಣ ನೆರವೇರಿಸುವರು. ಸಂಜೆ ನಡೆಯುವ ಸಮ್ಮೇಳನವನ್ನು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಉದ್ಘಾಟಿಸುವರು’ ಎಂದರು

ADVERTISEMENT

ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶಿರ್ವಚನ ನೀಡಲಿದ್ದಾರೆ. ಸುಳ್ಯ ಶಾಸಕ ಎಸ್. ಅಂಗಾರ ಸ್ಮರಣ ಸಂಚಿಕೆ ಬಿಡುಗಡೆ , ಸಮ್ಮೇನಾಧ್ಯಕ್ಷ ಟಿ. ನಾರಾಯಣ ಭಟ್ ಅಧ್ಯಕ್ಷೀಯ ಭಾಷಣ ಮಾಡುವರು. ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಮುಖ್ಯ ಅತಿಥಿಯಾಗಿರುವರು.

29ರಂದು ಬೆಳಿಗ್ಗೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕಕಾರ್ಯಕ್ರಮಗಳು. ವಿದ್ಯಾರ್ಥಿ ಕವಿಗೋಷ್ಠಿ ನಡೆಯಲಿದೆ, ಬಳಿಕಕನ್ನಡ ವಿಚಾರಗೋಷ್ಠಿ, ಕವಿಗೋಷ್ಠಿ, ಸಮ್ಮೇನಾಧ್ಯಕ್ಷರೊಂದಿಗೆ ಸಂವಾದ, ಸಾಧಕರಿಗೆ ಸನ್ಮಾನ ಜರುಗಲಿದೆ. ಸಂಜೆ ಸಮಾರೋಪ ಸಮಾರಂಭದಲ್ಲಿ ಡಾ. ಚಂದ್ರಶೇಖರ ದಾಮ್ಲೆ ಸಮಾರೋಪ ಭಾಷಣ, ಸಮ್ಮೆಳನಾಧ್ಯಕ್ಷ ನಾರಾಯಣ ಭಟ್ ಅವರಿಂದ ನುಡಿ, ಉದ್ಯಮಿ ಬಲರಾಮ ಆಚಾರ್ಯರಿಂದ ದಾನಿಗಳಿಗೆ ಗೌರವಾರ್ಪಣೆ ನಡೆಯಲಿದೆ ಎಂದು ಸೇಸಪ್ಪ ರೈ ತಿಳಿಸಿದರು.

ಪರಿಷತ್ ಘಟಕದ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಪುತ್ತೂರು ಘಟಕದ ಅಧ್ಯಕ್ಷ ಐತ್ತಪ್ಪ ನಾಯ್ಕ, ಸಹ ಸಂಚಾಲಕ ಡಾ. ಸಂಕೀರ್ತ್‌ ಹೆಬ್ಬಾರ್ ಪೂರಕ ಮಾಹಿತಿ ನೀಡಿ, ‘ಪುಸ್ತಕ ಮಳಿಗೆ, ವಸ್ತು ಪ್ರದರ್ಶನ ಮಾರಾಟ ಮಳಿಗೆಗಳ, ಅಚ್ಚುಕಟ್ಟಾದ ವಾಹನ ಪಾರ್ಕಿಂಗ್ ಇರಲಿದೆ. 2000 ಕ್ಕೂ ಮಿಕ್ಕಿ ಸಾಹಿತ್ಯಾಭಿಮಾನಿಗಳ ನಿರೀಕ್ಷೆ ಇದ್ದು, ಊಟ ತಿಂಡಿಯ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಸ್ವಾಗತ ಸಮಿತಿ ಸಂಚಾಲಕ ವೇದವ್ಯಾಸ ರಾಮಕುಂಜ, ಕಾರ್ಯದರ್ಶಿ ಗಣರಾಜ್ ಕುಂಬ್ಳೆ, ಸತೀಶ್ ನಾಯಕ್, ರಾಧಾಕೃಷ್ಣ ಕೆ.ಎಸ್., ಡಾ. ಎಚ್.ಜಿ. ಶ್ರೀಧರ್, ಗ್ರೇಸಿ ಪಿಂಟೋ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.