ಕಡಬ (ಉಪ್ಪಿನಂಗಡಿ): ಕಡಬ ಪೇಟೆ ಅಭಿವೃದ್ಧಿ ಯೋಜನೆ ರೂಪಿಸಲು ಸಹಕಾರಿ ಆಗುವಂತೆ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ, ಇಂದಿರಾ ಕ್ಯಾಂಟೀನ್, ಗ್ರಂಥಾಲಯ, ವಾಹನ ನಿಲುಗಡೆ ವ್ಯವಸ್ಥೆಗೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗ ಗುರುತಿಸುವಂತೆ ತಹಶೀಲ್ದಾರ್‌ಗೆ ಪತ್ರ ಬರೆಯುವ ಸಂಬಂಧ ನಿರ್ಣಯ ಅಂಗೀಕರಿಸಲಾಯಿತು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬೀನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.
ಕಡಬದಲ್ಲಿ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಜಾಗ ಗುರುತಿಸಲು ಇದುವರೆಗೆ ಸಾಧ್ಯವಾಗಿಲ್ಲ. ಈ ಸಮಸ್ಯೆ ಪರಿಹರಿಸಲೇಬೇಕು ಎಂದು ಸದಸ್ಯ ಸೈಮನ್ ಸಿ.ಜೆ. ಆಗ್ರಹಿಸಿದರು.
ಇಂದಿರಾ ಕ್ಯಾಂಟೀನ್‌ಗೆ ಈಗಾಗಲೇ ಪಟ್ಟಣ ಪಂಚಾಯಿತಿ ಹೆಸರಿನಲ್ಲಿ 0.05 ಎಕರೆಯನ್ನು ಎಪಿಎಂಸಿ ಪ್ರಾಂಗಣದ ಬಳಿ ಕಾದಿರಿಸಲಾಗಿದೆ. ಆದರೆ, ಇಂದಿರಾ ಕ್ಯಾಂಟೀನ್ ನಿರ್ಮಿಸಲು ಕನಿಷ್ಠ 0.10 ಎಕರೆ ಬೇಕು ಎಂದು ತಿಳಿಸಿದ್ದಾರೆ ಎಂದು ಮುಖ್ಯಾಧಿಕಾರಿ ಲೀಲಾವತಿ ಸಭೆಗೆ ತಿಳಿಸಿದರು.
ಈ ಬಗ್ಗೆ ಚರ್ಚೆ ನಡೆದು ಇಂದಿರಾ ಕ್ಯಾಂಟೀನ್‌ಗೆ ಬೇರೆ ಜಾಗ ಗುರುತಿಸುವ ಬಗ್ಗೆ, ಗ್ರಂಥಾಲಯಕ್ಕೆ ಜಾಗ ಕಾದಿರಿಸಲು ತಹಶೀಲ್ದಾರ್‌ಗೆ ಪತ್ರ ಬರೆಯುವ ಬಗ್ಗೆ ನಿರ್ಣಯಿಸಲಾಯಿತು.
ಸದಸ್ಯ ಕೆ.ಎಂ. ಹನೀಫ್ ಮಾತನಾಡಿ, ಕಡಬ ಪೇಟೆಯಲ್ಲಿ ವಾಹನ ನಿಲುಗಡೆಗೆ ಜಾಗ ಇಲ್ಲ. ನಾನು ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿದ್ದಾಗ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ಕರೆದು ರೂಪರೇಷೆ ಮಾಡಲಾಗಿತ್ತು. ಆ ಕಡತ ಏನಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳಲ್ಲಿ ಕೇಳಿದರು. ಇದಕ್ಕೆ ಉತ್ತರಿಸಿದ ಪಟ್ಟಣ ಪಂಚಾಯಿತಿ ಸಿಬ್ಬಂದಿ ಹರೀಶ್, ಆ ಪ್ರಸ್ತಾವಕ್ಕೆ ಲೋಕೋಪಯೋಗಿ ಇಲಾಖೆಯ ವಿರೋಧ ಬಂದಿತ್ತು ಎಂದು ಹೇಳಿದರು. ಇದನ್ನು ಒಪ್ಪದ ಹನೀಫ್, ಎಲ್ಲ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡಿದ್ದರು. ಬಳಿಕ ಅದರ ಬಗ್ಗೆ ನಿಗಾ ವಹಿಸದೆ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ನಾವು ಒತ್ತಡ ತರಬೇಕು ಎಂದರು.
ಸದಸ್ಯರಾದ ಕೃಷ್ಣಪ್ಪ ಪೂಜಾರಿ, ರೋಹಿತ್, ಫೈಝಲ್, ಕೃಷ್ಣಪ್ಪ ನಾಯ್ಕ್, ಕುಸುಮಾ ಅಂಗಡಿಮನೆ, ಮೋಹನ ಮಜ್ಜಾರು ಮಾತನಾಡಿದರು.
ಉಪಾಧ್ಯಕ್ಷೆ ನೀಲಾವತಿ ಶಿವರಾಮ್, ಪಟ್ಟಣ ಪಂಚಾಯಿತಿ ಎಂಜಿನಿಯರ್ ಎಂ.ಆರ್.ಶಿವಕುಮಾರ್ ಭಾಗವಹಿಸಿದ್ದರು.