ADVERTISEMENT

ಕದ್ರಿ ಜಾತ್ರೆ: ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ?

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 5:06 IST
Last Updated 20 ಜನವರಿ 2023, 5:06 IST
   

‌‌ಮಂಗಳೂರು: ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿರುವ ಇಲ್ಲಿನ ಪ್ರಸಿದ್ಧ ಕದ್ರಿ ಮಂಜುನಾಥ ದೇವಾಲಯದಲ್ಲಿ ಇದೇ 25ರ ವರೆಗೆ ನಡೆಯುತ್ತಿರುವ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿದ ಬ್ಯಾನರ್‌ ಹಾಕಿದ್ದನ್ನು ಗುರುವಾರ ತೆರವುಗೊಳಿಸಲಾಗಿದೆ.

ಕುಕ್ಕರ್ ಬಾಂಬ್ ಸ್ಫೋಟದ ಬಗ್ಗೆ ಉಲ್ಲೇಖಿಸಿರುವ ಬ್ಯಾನರ್‌ನಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದ ಕದ್ರಿ ಘಟಕದ ಹೆಸರು ಇತ್ತು.

‘ಸನಾತನ ಧರ್ಮದ ಆಚರಣೆ ಮತ್ತು ನಂಬಿಕೆಯಲ್ಲಿ ವಿಶ್ವಾಸ ಇರುವ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಇದೆ. ಕುಕ್ಕರ್ ಬಾಂಬ್ ಪ್ರಕರಣದ ಆರೋಪಿ ಮೊದಲು ಟಾರ್ಗೆಟ್ ಮಾಡಿದ್ದು, ಕದ್ರಿ ದೇವಸ್ಥಾನ. ಇಂತಹ ಮನಃಸ್ಥಿತಿ ಮತ್ತು ವಿಗ್ರಹಾರಾಧನೆ ಹರಾಂ ಎಂದು ನಂಬಿದ ಯಾರಿಗೂ ವ್ಯಾಪಾರಕ್ಕೆ ಅವಕಾಶವಿಲ್ಲ’ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿತ್ತು.

ADVERTISEMENT

ಜಾತ್ರೆಯ ವಿಧಿಗಳು ಆರಂಭ ಆಗಿರುವುದರಿಂದ ರಸ್ತೆಯುದ್ದಕ್ಕೂ ಸ್ಟಾಲ್‌ಗಳನ್ನು ಅಳವಡಿಸಲಾಗಿದೆ. ಇಲ್ಲಿ ಮುಸ್ಲಿಂ ವ್ಯಾಪಾರಿಗಳು ಹಲವು ವರ್ಷಗಳಿಂದ ವ್ಯಾಪಾರಕ್ಕೆ ಬರುತ್ತಿದ್ದರು. ಅಂತೆಯೇ ಈ ಬಾರಿ ಕೂಡ ಅಂಗಡಿಗಳನ್ನು ಹಾಕಿದ್ದರು. ಆದರೆ, ಅವರನ್ನು ಇಲ್ಲಿಂದ ವಾಪಸ್ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಮಕ್ಕಳ ಆಟಿಕೆ, ಬ್ಯಾಗ್ ಮಾರಾಟಕ್ಕೆ ಬೇರೆ ಕಡೆಗಳಿಂದ ಐದಾರು ಮುಸ್ಲಿಂ ವ್ಯಾಪಾರಿಗಳು ಬಂದಿದ್ದರು. ಕುತ್ತಿಗೆಗೆ ಶಾಲು ಹಾಕಿಕೊಂಡು ಬಂದಿದ್ದ ನಾಲ್ಕೈದು ಮಂದಿ, ಇವರಿಗೆ ಇಲ್ಲಿ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ತಿಳಿಸಿದರು. ಅವರು ವಿಧಿಯಿಲ್ಲದೆ ಸಾಮಗ್ರಿ ತುಂಬಿಕೊಂಡು ಹೋದರು’ ಎಂದು ಉತ್ತರ ಪ್ರದೇಶದಿಂದ ಬಂದ ವ್ಯಾಪಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬುಧವಾರ ರಸ್ತೆ ಬದಿಯಲ್ಲಿ ಅಂಗಡಿಗಳು ಸಾಲುಸಾಲಾಗಿದ್ದವು. ಗುರುವಾರ ಅಂಗಡಿಗಳ ಸಂಖ್ಯೆ ಕಡಿಮೆ ಇದ್ದಿದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.