ADVERTISEMENT

ಕದ್ರಿ ಗೋಪಾಲನಾಥ ಅಂತ್ಯಕ್ರಿಯೆ 14ರಂದು, ಅಂತಿಮ ದರ್ಶನಕ್ಕೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 13:28 IST
Last Updated 13 ಅಕ್ಟೋಬರ್ 2019, 13:28 IST
ಮಂಗಳೂರಿನ ಪುರಭವನಕ್ಕೆ ಭೇಟಿ ನೀಡಿದ ಸಂಸದ ನಳಿನ್‌ಕುಮಾರ್ ಕಟೀಲ್‌, ಕದ್ರಿ ಗೋಪಾಲನಾಥರ ಅಂತಿಮ ದರ್ಶನದ ಸಿದ್ಧತೆಗಳ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದರು.
ಮಂಗಳೂರಿನ ಪುರಭವನಕ್ಕೆ ಭೇಟಿ ನೀಡಿದ ಸಂಸದ ನಳಿನ್‌ಕುಮಾರ್ ಕಟೀಲ್‌, ಕದ್ರಿ ಗೋಪಾಲನಾಥರ ಅಂತಿಮ ದರ್ಶನದ ಸಿದ್ಧತೆಗಳ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದರು.   

ಮಂಗಳೂರು: ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್‌ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಸೋಮವಾರ (ಇದೇ 14) ನಡೆಯಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್‌ ಅವರು ಭಾನುವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವ್ಯವಸ್ಥೆಯ ಕುರಿತು ಚರ್ಚಿಸಿದರು.

ಕದ್ರಿ ಗೋಪಾಲನಾಥ್ ಅವರ ಪಾರ್ಥಿವ ಶರೀರವನ್ನು ನಗರದ ಮಿನಿ ಪುರಭವನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಮಿನಿ ಪುರಭವನಕ್ಕೆ ಭೇಟಿ ನೀಡಿದ ಸಂಸದರು, ಅಲ್ಲಿಯ ವ್ಯವಸ್ಥೆಯನ್ನು ಪರಿಶೀಲಿಸಿದರು.

ಕದ್ರಿ ಗೋಪಾಲನಾಥ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಸೋಮವಾರ ಬೆಳಿಗ್ಗೆ 9ಕ್ಕೆ ಪದವಿನಂಗಡಿ ದೇವಿಕಟ್ಟೆಯ ನಿವಾಸದಿಂದ ಹೊರಟು, ಮಿನಿ ಪುರಭವನದ ತಲುಪಲಿದೆ. 10 ಗಂಟೆಯಿಂದ ಮಧ್ಯಾಹ್ನ ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಇದೇ ವೇಳೆ ಮಿನಿ ಪುರಭವನದ ವೇದಿಕೆಯಲ್ಲಿ ವಾದ್ಯ ಹಾಗೂ ಸಂಗೀತ ಗೋಷ್ಠಿಯ ‘ಸ್ವರಾಂಜಲಿ’ ಕಾರ್ಯಕ್ರಮವನ್ನು ಕದ್ರಿ ಗೋಪಾಲನಾಥ ಅವರ ಶಿಷ್ಯರು ನಡೆಸಿಕೊಡಲಿದ್ದಾರೆ ಎಂದು ಪಾಲಿಕೆ ಆಯುಕ್ತ ಶಾನಾಡಿ ಅಜಿತ್‌ಕುಮಾರ್ ಹೆಗ್ಡೆ ತಿಳಿಸಿದರು.

ಅಂತಿಮ ದರ್ಶನಕ್ಕೆ ಬರುವವರಿಗೆ ಯಾವುದೇ ತೊಂದರೆಯಾಗದಂತೆ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬಳಿಕ ಮೃತರ ಹುಟ್ಟೂರು ಬಂಟ್ವಾಳದ ಸಜಿಪ ಮೂಡ ಗ್ರಾಮದ ಮಿತ್ತಕೆರೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಜೋಗಿ ಸಮಾಜದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಪೂರಕ ವ್ಯವಸ್ಥೆಯನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮಾಡಲಿದೆ.

ಮಂಗಳೂರು ಮಹಾನಗರ ಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್ ಲಿಂಗೇಗೌಡ, ಕಿರಿಯ ಎಂಜಿನಿಯರ್ ರಘುಪಾಲ್, ಪಾಲಿಕೆಯ ಮಾಜಿ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ರಾಜೇಶ್ ಕೆ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.