ADVERTISEMENT

ರಾಜ್ಯ ಕಂಬಳ ಅಸೋಸಿಯೇಶನ್ ಸಭೆ: ತೀರ್ಪುಗಾರರ ಸಂಖ್ಯೆ ಕಡಿತಗೊಳಿಸಲು ಚಿಂತನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 3:12 IST
Last Updated 20 ನವೆಂಬರ್ 2025, 3:12 IST
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಬುಧವಾರ ನಡೆದ ರಾಜ್ಯ ಕಂಬಳ ಅಸೋಸಿಯೇಶನ್ ಸಭೆಯಲ್ಲಿ ಸಹಕಾರ ರತ್ನ ಪ್ರಶಸ್ತಿ ಪಡೆದ ಶಾಂತರಾಮ ಶೆಟ್ಟಿ ಮತ್ತು ಭಾಸ್ಕರ್ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಬುಧವಾರ ನಡೆದ ರಾಜ್ಯ ಕಂಬಳ ಅಸೋಸಿಯೇಶನ್ ಸಭೆಯಲ್ಲಿ ಸಹಕಾರ ರತ್ನ ಪ್ರಶಸ್ತಿ ಪಡೆದ ಶಾಂತರಾಮ ಶೆಟ್ಟಿ ಮತ್ತು ಭಾಸ್ಕರ್ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು   

ಮೂಡುಬಿದಿರೆ: ಕಂಬಳದಲ್ಲಿ ತೀರ್ಪುಗಾರರ ಸಂಖ್ಯೆಯನ್ನು ಕಡಿತಗೊಳಿಸಿ ದಿನನಿತ್ಯದ ಪ್ರಕಾರ ತೀರ್ಪುಗಾರರನ್ನು ನಿಯೋಜಿಸುವುದು. ಗಂತಿನಲ್ಲಿ ಅನಾವಶ್ಯಕ  ಅತ್ತಿಂದಿತ್ತ ಓಡಾಟ ತಪ್ಪಿಸುವುದು, ಕೋಣಗಳನ್ನು ಬಿಡಿಸುವಾಗ ಸಮಯ ಪರಿಪಾಲನೆಯನ್ನು ಕಡ್ಡಾಯಗೊಳಿಸುವುದು ಸೇರಿ ಮಹತ್ವದ ವಿಷಯಗಳ ಬಗ್ಗೆ ಬುಧವಾರ ನಡೆದ ರಾಜ್ಯ ಕಂಬಳ ಅಸೋಸಿಯೇಶನ್ ಸಭೆಯಲ್ಲಿ ಚರ್ಚೆ ನಡೆಯಿತು.

ರಾಜ್ಯ ಕಂಬಳ ಅಸೋಸಿಯೇಶನ್, ಜಿಲ್ಲಾ ಕಂಬಳ ಸಮಿತಿ ಹಾಗೂ ಕೋಣಗಳ ಯಜಮಾನರ ಜಂಟಿ ಸಭೆ ಸಮಾಜ ಮಂದಿರದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಕಂಬಳ ಅಸೋಸಿಯೇಶನ್‌ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಕಂಬಳಕ್ಕೆ ಈಗಾಗಲೇ ರಾಜ್ಯ ಸರ್ಕಾರದಿಂದ ಮಾನ್ಯತೆ ಸಿಕ್ಕಿರುವುದರಿದ ಕಂಬಳದ ಜನಪ್ರಿಯತೆ ವೃದ್ಧಿಸಿದೆ. ಈ ಕ್ರೀಡೆಗೆ ರಾಷ್ಟ್ರ ಮಾನ್ಯತೆ ಸಿಗಬೇಕೆಂಬ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ನಡೆಯುತ್ತಿದೆ. ನ.22ಕ್ಕೆ ಉಡುಪಿಗೆ ಬರಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಬಗ್ಗೆ ಮನವಿ ನೀಡಲಾಗುವುದು ಎಂದರು.

ADVERTISEMENT

ಗಂತಿನಲ್ಲಿ ಕೋಣಗಳನ್ನು ಬಿಡುವಾಗ ಕೆಲವೊಮ್ಮೆ 1 ತಾಸಿನವರೆಗೂ ವಿಳಂಬವಾಗಿ ಒಂದು ದಿನದಲ್ಲಿ ಮುಗಿಯಬೇಕಾದ ಕಂಬಳ ಎರಡು ದಿನದವರೆಗೆ ಮುಂದುವರಿಯುತ್ತದೆ. ಇದರಿಂದ ಕಾನೂನಿನ ಉಲ್ಲಂಘನೆಯ ಆರೋಪ ಆಯೋಜಕರ ವಿರುದ್ಧ ಕೇಳಿಬರುತ್ತಿದೆ. ಕೋಣಗಳನ್ನು ಬಿಡುವಾಗ ತೀರ್ಪುಗಾರರು 10 ನಿಮಿಷಕ್ಕಿಂತ ಹೆಚ್ಚು ವಿಳಂಬವಾಗದಂತೆ ನೋಡಿಕೊಳ್ಳಬೇಕು. ನಿಗದಿತ ಸಮಯದಲ್ಲಿ ಕಂಬಳ ಮುಕ್ತಾಯವಾಗಬೇಕಾದರೆ ತೀರ್ಪುಗಾರರು ಕೂಡ ಸಮಯ ಪರಿಪಾಲನೆ ಮಾಡಿಕೊಳ್ಳುವುದು ಅಗತ್ಯ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂತು.

ಕಂಬಳ ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್ ಮಾತನಾಡಿ, ಸದ್ಯ ಕಂಬಳಕ್ಕೆ 24 ಮಂದಿ ತೀರ್ಪುಗಾರರಿದ್ದು ಇಷ್ಟೊಂದು ಸಂಖ್ಯೆಯ ತೀರ್ಪುಗಾರರು ಕಂಬಳಕ್ಕೆ ಬೇಕಿಲ್ಲ. ಖರ್ಚು ವೆಚ್ಚವನ್ನು ನಿಯಂತ್ರಿಸುವ ದೃಷ್ಟಿಯಿಂದಲು ಈ ನಿರ್ಧಾರ ಅನಿವಾರ್ಯ ಇದೆ. ಎಷ್ಟು ಮಂದಿ ಮತ್ತು ಯಾವ್ಯಾವ ತೀರ್ಪುಗಾರರು ಬೇಕೆಂಬುದನ್ನು ಆಯಾಯ ಕಂಬಳ ಆಯೋಜಕರು ನಿರ್ಧರಿಸಬೇಕು. ಇವರಿಗೆ ನೀಡುವ ವೇತದ ಬಗ್ಗೆ ರಾಜ್ಯ ಕಂಬಳ ಸಮಿತಿ ತಿಳಿಸಬೇಕು ಎಂದರು.

ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಎಲ್ಲಾ ಕಂಬಳಗಳಿಗೆ ಸಮಾನವಾಗಿ ಹಂಚಲು ನಿರ್ಧರಿಸಲಾಯಿತು.

ಕಂಬಳ ಕೋಣಗಳ ಯಜಮಾನರಾದ ಭಾಸ್ಕರ್ ಕೋಟ್ಯಾನ್ ಹಾಗೂ ಶಾಂತರಾಮ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಸೋಸಿಯೇಶನ್‌ ಪ್ರಮುಖರಾದ ಪಿ.ಆರ್ ಶೆಟ್ಟಿ, ಮುಚ್ಚೂರು ಲೋಕೇಶ್ ಶೆಟ್ಟಿ, ವಿಜಯ ಕುಮಾರ್ ಕಂಗಿನ ಮನೆ ಮತ್ತು ಚಂದ್ರಹಾಸ ಸನಿಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.