ಮೂಡುಬಿದಿರೆ: ಕಂಬಳ ಕ್ರೀಡೆಗೆ ಸರ್ಕಾರದ ಮಾನ್ಯತೆ ಹಾಗೂ ಹೈಕೋರ್ಟ್ ಕೂಡ ಅನುಮತಿ ನೀಡಿರುವುದರಿಂದ ಕಂಬಳವನ್ನು ಶಿಸ್ತುಬದ್ಧವಾಗಿ ಸಮಯ ಪಾಲನೆಯೊಂದಿಗೆ ನಡೆಸುವುದು ಅಗತ್ಯ. ಪ್ರಸಕ್ತ ಋತುವಿನಲ್ಲಿ ಸಬ್ ಜೂನಿಯರ್ ವಿಭಾಗವನ್ನು ಕೈಬಿಡಲಾಗುವುದು ಹಾಗೂ ಸ್ನೇಹಕೂಟ ಕಂಬಳಗಳನ್ನು ನಡೆಸಬೇಕೆ, ಬೇಡವೆ ಎಂಬುದನ್ನು ಪುನರ್ ಪರಿಶೀಲಿಸುವ ಕುರಿತು ಬುಧವಾರ ಒಂಟಿಕಟ್ಟೆಯ್ಲಿ ನಡೆದ ರಾಜ್ಯ ಕಂಬಳ ಅಸೋಸಿಯೇಶನ್ ಪ್ರಥಮ ಸಭೆಯಲ್ಲಿ ನಿರ್ಣಯಿಸಲಾಯಿತು.
ಅಸೋಷಿಯೇಶನ್ ಅಧ್ಯಕ್ಷ ಬೆಳಪು ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಶಾಸಕರು, ಜನಪ್ರತಿನಿಧಿಗಳು ಹಾಗೂ ಕಂಬಳಾಭಿಮಾನಿಗಳ ಬೆಂಬಲದಿಂದ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ವಿಧಾನಸಭೆ ಅಧಿವೇಶನದಲ್ಲೂ ಮುಖ್ಯಮಂತ್ರಿಗಳು ಕಂಬಳಕ್ಕೆ ರಾಜ್ಯ ಮಾನ್ಯತೆಯ ಭರವಸೆ ನೀಡಿದ್ದರು. ಅಸೋಸಿಯೆಶನ್ ಅಸ್ವಿತ್ವಕ್ಕೆ ಬಂದಿರುವುದರಿಂದ ಸರ್ಕಾರದ ನಿರ್ದೇಶನದಂತೆ ನಮ್ಮ ಕಾರ್ಯ ವೈಖರಿ ನಡೆಯಬೇಕು. ಕಂಬಳಗಳಿಗೆ ಅನುದಾನ, ಕಂಬಳ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ಸಹಿತ ವಿವಿಧ ಸವಲತ್ತುಗಳಿಗೆ ಬೇಕಾದ ದಾಖಲೆಗಳನ್ನು ಕ್ರೋಢಿಕರಿಸುವುದು ಕೂಡ ಅಗತ್ಯ. ಕಂಬಳಕ್ಕೆ ಸಂಬಂಧಪಟ್ಟ ಎಲ್ಲರೂ ಅಸೋಶಿಯೇಶನ್ ಜೊತೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
2025-26 ಸಾಲಿನ ಕಂಬಳ ವೇಳಾಪಟ್ಟಿ ಹಾಗೂ ಕಂಬಳದ ನೀತಿ ನಿಯಮಗಳನ್ನು ಒಳಗೊಂಡ ಪುಸ್ತಕ ಬಿಡುಗಡೆ ಮಾಡಲಾಯಿತು. ಕಂಬಳ, ತುಳುನಾಡು ಹಾಗೂ ಕ್ರೀಡಾ ಪ್ರಾಧಿಕಾರದ ಧ್ವಜವನ್ನು ಪ್ರತಿ ಕಂಬಳಗಳಲ್ಲಿ ಅಳವಡಿಸುವಂತೆ ಆಯೋಜಕರಿಗೆ ಸಭೆಯಲ್ಲಿ ಸೂಚಿಸಲಾಯಿತು.
ರಾಜ್ಯ ಸಮಿತಿ ವಉಪಾಧ್ಯಕ್ಷ ನವೀನ್ ಚಂದ್ರ ಆಳ್ವ, ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಮುಚ್ಚೂರು, ಕಾರ್ಯಕಾರಿ ಸಮಿತಿ ಸದಸ್ಯರಾದ ರೋಹಿತ್ ಕುಮಾರ್ ಹೆಗ್ಡೆ, ಶಾಂತರಾಮ್ ಶೆಟ್ಟಿ, ಭಾಸ್ಕರ್ ಎಸ್.ಕೋಟ್ಯಾನ್ ಶ್ರೀಕಾಂತ್ ಭಟ್, ಪಿ.ಆರ್.ಶೆಟ್ಟಿ, ಚಂದ್ರಹಾಸ ಶೆಟ್ಟಿ, ಅನಿಲ್ ಶೆಟ್ಟಿ, ಪ್ರಶಾಂತ್ ಕಾಜವ, ಅರುಣ್ ಶೆಟ್ಟಿ, ಚಂದ್ರಹಾಸ ಸನಿಲ್, ಪಿಯೂಸ್ ಎಸ್.ರೊಡ್ರಿಗಸ್, ಸುಧಾಕರ ಹೆಗ್ಡೆ, ಉದಯ ಕುಮಾರ್ ಶೆಟ್ಟಿ ಮುನಿಯಾಲ್, ಸಹ ಸದಸ್ಯರಾದ ವಿಕ್ರಂ ವೆಂಕಟ್ ಪೂಜಾರಿ, ಕೇಶವ ಭಂಡಾರಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.