ADVERTISEMENT

ಕಂಬಳಕ್ಕೆ ತಲಾ ₹ 5 ಲಕ್ಷ ಅನುದಾನ

ಪ್ರವಾಸೋದ್ಯಮ ಇಲಾಖೆಯ ಆದೇಶ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 12:08 IST
Last Updated 18 ಮಾರ್ಚ್ 2021, 12:08 IST
ಕಂಬಳದ ದೃಶ್ಯ
ಕಂಬಳದ ದೃಶ್ಯ   

ಮಂಗಳೂರು: ಕರಾವಳಿಯ ನಡೆಯುವ ಆಧುನಿಕ ಕಂಬಳಕ್ಕೆ ತಲಾ ₹ 5 ಲಕ್ಷದಂತೆ ಅನುದಾನ ಒದಗಿಸಲು ಸರ್ಕಾರ ಹಸಿರುನಿಶಾನೆ ತೋರಿದೆ. ಈ ಸಂಬಂಧ ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆರ್‌.ರಾಜಶೇಖರ್‌ ಗುರುವಾರ ಆದೇಶ ಹೊರಡಿಸಿದ್ದಾರೆ.

ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳಕ್ಕೆ ಸರ್ಕಾರದ ಅನುದಾನ ಒದಗಿಸಬೇಕು ಎಂಬುದು ಬಹುವರ್ಷದ ಬೇಡಿಕೆಯಾಗಿತ್ತು. ಎರಡು ವಾರಗಳ ಹಿಂದೆ ಮಿಯಾರು ಕಂಬಳಕ್ಕೆ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್‌ ಬಂದಿದ್ದ ಸಂದರ್ಭದಲ್ಲಿ ಕಾರ್ಕಳ ಶಾಸಕ ವಿ.ಸುನಿಲ್‌ ಕುಮಾರ್‌ ಅವರು ಕಂಬಳಕ್ಕೆ ಸರ್ಕಾರದಿಂದ ಅನುದಾನ ಒದಗಿಸಲು ಒತ್ತಾಯಿಸಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಸಚಿವರು, ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಕಂಬಳಗಳ ಮಾಹಿತಿಯನ್ನು ಸಂಗ್ರಹಿಸಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗಾಗಿ ಕಂಬಳವನ್ನು ಪ್ರೋತ್ಸಾಹಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಈ ಸಂಬಂಧ ₹ 1 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 10 ಕಂಬಳಕ್ಕೆ ತಲಾ ₹ 5 ಲಕ್ಷ, ಉಡುಪಿ ಜಿಲ್ಲೆಯ 10 ಕಂಬಳಕ್ಕೆ ತಲಾ 5 ಲಕ್ಷ ಅನುದಾನ ದೊರೆಯಲಿದೆ.

ADVERTISEMENT

‘ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು, ಅನ್ಯ ಉದ್ದೇಶಕ್ಕೆ ಬಳಸಲು ಅವಕಾಶವಿಲ್ಲ, ಕಂಬಳಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಬೇಕು, ಕಂಬಳವನ್ನು ಸಂಘಟನೆ ಅಥವಾ ತಂಡದಿಂದ ಆಯೋಜಿಸಬೇಕು, ಸಂಬಂಧಪಟ್ಟ ಕಂಬಳವನ್ನು ಜಿಲ್ಲಾಧಿಕಾರಿ ಆಯ್ಕೆ ಮಾಡಬೇಕು’ ಎಂಬ ಸೂಚನೆಯನ್ನು ಆದೇಶದಲ್ಲಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.