
ಉಪ್ಪಿನಂಗಡಿ: ಕಾಂಚನ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ಸ್ಥಾಪಕಗುರು, ಸಂಗೀತರತ್ನ ವಿ.ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರ 105ನೇ ಜನ್ಮ ವರ್ಷ ಮಹೋತ್ಸವದ ಅಂಗವಾಗಿ ಕಾಂಚನದಲ್ಲಿ ₹ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಸಂಗೀತ ಕಲಾ ಶಾಲೆ, ಸಭಾಭವನ ಹಾಗೂ ಭೋಜನ ಶಾಲೆಯ ಲೋಕಾರ್ಪಣೆ, 72ನೇ ವರ್ಷದ ‘ಕಾಂಚನೋತ್ಸವ 2026’ ಫೆ. 5ರಿಂದ 7ರ ವರೆಗೆ ನಡೆಯಲಿದೆ ಎಂದು ಕಾಂಚನ ಸಹೋದರಿಯರಾದ ಕಾಂಚನ ಶ್ರೀರಂಜಿನಿ ಮತ್ತು ಕಾಂಚನ ಶ್ರುತಿರಂಜಿನಿ ತಿಳಿಸಿದರು.
ಕಾಂಚನ ಸಂಗೀತ ಕಲಾ ಶಾಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.5ರಂದು ಸಂಜೆ ನಾರಾಯಣ ಬಡಿಕಿಲ್ಲಾಯರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಲಿದೆ. 72ನೇ ವರ್ಷದ ತ್ಯಾಗರಾಜ, ಪುರಂದರದಾಸರ ಆರಾಧನಾ ಮಹೋತ್ಸವ, ಕಾಂಚನ ವೆಂಕಟಸುಬ್ರಮಣ್ಯಂ ಹಾಗೂ ಕರ್ನಾಟಕ ಕಲಾಶ್ರೀ ಕಾಂಚನ ವಿ.ಸುಬ್ಬರತ್ನಂ ಅವರ ಪುಣ್ಯ ಸ್ಮರಣೆ ಅಂಗವಾಗಿ ಆರಂಭ ಸ್ತುತಿಯಲ್ಲಿ ಸಂವಿತ್ ಆರ್.ಎಸ್. ತಬಲ ಹಾಗೂ ಕೆ.ಜೆ. ಋತ ವಯಲಿನ್ ನುಡಿಸಲಿದ್ದಾರೆ. ಸಂಜೆ ಸ್ವರ ಲಯ ಲಹರಿಯಲ್ಲಿ ಕೆ.ಜೆ.ಋತ, ಅಭಯ್ ಸಂಪಿಗೆತ್ತಾಯ, ಶ್ರೀಕೃಷ್ಣ ಭಟ್, ತೇಜಸ್ವಿ ಸಂಜಯ್, ವರ್ಚಸ್ ವಿ., ಅಪ್ರಮೇಯ ಹೊಸಹಳ್ಳಿ, ಸಂವಿತ್ ಆರ್.ಎಸ್., ಶಮಿತ್ ಕಲ್ಕೂರ್, ಸಾಕೇತರಾಮ್ ಫಣಿ ವೇದಾಲ ಅವರು ಸಂಗೀತ ವಾದ್ಯಗಳನ್ನು ನುಡಿಸಲಿದ್ದಾರೆ. ಬಳಿಕ ಕಾಂಚನ ಮ್ಯೂಸಿಕ್ ಅಕಾಡೆಮಿಯ ಶಿಷ್ಯರು, ಪ್ರಶಿಷ್ಯರು ಮತ್ತು ಅತಿಥಿ ಕಲಾವಿದರಿಂದ ಸಂಗೀತ ಸೇವೆ ನಡೆಯಲಿದೆ ಎಂದರು.
ಪ್ರವೇಶೋತ್ಸವ: ಫೆ.6ರಂದು ಬೆಳಿಗ್ಗೆ ರಾಘವೇಶ್ವರಭಾರತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಾಂಚನ ಲಕ್ಷ್ಮೀನಾರಾಯಣ ಸಂಗೀತ ಕಲಾ ಶಾಲೆ, ಸಭಾಭವನ ಹಾಗೂ ಭೋಜನ ಶಾಲೆ ಪ್ರವೇಶೋತ್ಸವ ನಡೆಯಲಿದೆ. ಬಳಿಕ ‘ಶತಾಧಿಕ ಕಂಠಗಾಯನ ಮತ್ತು ವಾದನ’ ನಡೆಯಲಿದೆ. ಮಧ್ಯಾಹ್ನ ಸಂಗೀತ ಸೇವೆ, ಬಳಿಕ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಲೋಕಾರ್ಪಣಾ ಸಮಾರಂಭ: ಫೆ.6ರಂದು ಸಂಜೆ ಸಂಗೀತ ಕಲಾ ಶಾಲೆ ಮತ್ತು ಸಭಾ ಭವನದ ಲೋಕಾರ್ಪಣಾ ಸಮಾರಂಭ ನಡೆಯಲಿದ್ದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಪರಂಪರಾ ವಿದ್ಯಾಪೀಠದ ಮುಖ್ಯ ಪ್ರಾಚಾರ್ಯ ವಿಷ್ಣುಪ್ರಸಾದ್ ಹೆಬ್ಬಾರ್ ಭಾಗವಹಿಸಲಿದ್ದಾರೆ ಎಂದರು.
ಕಾಂಚನಶ್ರೀ ಪ್ರಶಸ್ತಿ ಪ್ರದಾನ: ಫೆ.7ರಂದು ಬೆಳಿಗ್ಗೆ ವಿದುಷಿ ಚಾರುಲತಾ ರಾಮಾನುಜಂ ನೇತೃತ್ವದಲ್ಲಿ ಕಾಂಚನ ಮನೆಯಿಂದ ಸಂಗೀತ ಶಾಲೆಯ ವರೆಗೆ ಸಂಗೀತ ಸಂತ ತ್ಯಾಗರಾಜರ ಉತ್ಸವ ಸಂಪ್ರದಾಯ ಕೃತಿ ಹಾಗೂ ದಿವ್ಯ ನಾಮ ಸಂಕೀರ್ತನೆಗಳ ಗಾಯನ-ವಾದನಗಳೊಂದಿಗೆ ಉಂಛವೃತ್ತಿ ಸಂಗೀತ ನಡಿಗೆ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5ಕ್ಕೆ ರಾಘವೇಶ್ವರ ಭಾರತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ‘ಗಾಡ್ ಆಫ್ ಇಂಡಿಯನ್ ವಯಲಿನ್‘ ಎಲ್.ಸುಬ್ರಹ್ಮಣ್ಯಂ ಅವರಿಗೆ ‘ಕಾಂಚನ ಶ್ರೀ’ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಸಂಸದೆ ಬಾನ್ಸುರಿ ಸ್ವರಾಜ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅಧ್ಯಕ್ಷತೆ ವಹಿಸಲಿದ್ದಾರೆ. ಬಿಜೆಪಿ ಮುಖಂಡ ಡಿ.ವಿ. ಸದಾನಂದ ಗೌಡ, ಬಜತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ ನೆಕ್ಕರಾಜೆ ಭಾಗವಹಿಸಲಿದ್ದಾರೆ ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮುಕುಂದ ಗೌಡ ಬಜತ್ತೂರು, ಕಾಂಚನ ಲಕ್ಷ್ಮೀನಾರಾಯಣ ಸಂಗೀತ ಅಕಾಡೆಮಿ ಟ್ರಸ್ಟ್ ಕಾರ್ಯದರ್ಶಿ ಕೆ.ರೋಹಿಣಿ ಸುಬ್ಬರತ್ನಂ, ಕೆ.ಯು.ಜಯಚಂದ್ರ ರಾವ್, ಕಾಂಚನ ನಡ್ಪ ವಿಷ್ಣುಮೂರ್ತಿ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಶ್ರೀಧರ ಗೌಡ ನಡ್ಪ, ಮೋಹನಚಂದ್ರ ಕಾಂಚನ, ಕೃಷ್ಣಪ್ರಸಾದ್, ಶಿವರಾಮ ಕಾರಂತ ಊರಾಬೆ, ವಕೀಲ ರಾಜಶೇಖರ ಹಿಲ್ಯಾರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.