ADVERTISEMENT

ಕನ್ನಡದಲ್ಲಿ ವ್ಯವಹರಿಸಲು ಕೀಳರಿಮೆ ಬೇಡ: ಪ್ರೊ.ಬಿ.ಜಗದೀಶ ಶೆಟ್ಟಿ

ಕಾಂತಾವರ ಉತ್ಸವದಲ್ಲಿ ಕೃತಿಗಳ ಲೋಕಾರ್ಪಣೆ; ದತ್ತಿನಿಧಿಗಳ ಸಾಹಿತ್ಯ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 6:49 IST
Last Updated 5 ನವೆಂಬರ್ 2022, 6:49 IST
ಕಾಂತಾವರ ಉತ್ಸವವನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಉದ್ಘಾಟಿಸಿದರು. ಪ್ರೊ.ಜಿ.ಜಗದೀಶ್ ಶೆಟ್ಟಿ, ಡಾ.ನಾಮೊಗಸಾಲೆ ಮತ್ತಿತರರು ಇದ್ದಾರೆ
ಕಾಂತಾವರ ಉತ್ಸವವನ್ನು ಧರ್ಮದರ್ಶಿ ಹರಿಕೃಷ್ಣ ಪುನರೂರು ಉದ್ಘಾಟಿಸಿದರು. ಪ್ರೊ.ಜಿ.ಜಗದೀಶ್ ಶೆಟ್ಟಿ, ಡಾ.ನಾಮೊಗಸಾಲೆ ಮತ್ತಿತರರು ಇದ್ದಾರೆ   

ಮೂಡುಬಿದಿರೆ: ಅನ್ಯ ಭಾಷೆಗಳ ಹಂಗಿಲ್ಲದೆ, ಕೀಳರಿಮೆ ಇಲ್ಲದೆ ಕನ್ನಡದಲ್ಲಿ ವ್ಯವಹರಿಸುವ ವಾತಾವರಣ ಕರ್ನಾಟಕದಲ್ಲಿ ಸೃಷ್ಟಿಯಾದಾಗ ಕನ್ನಡ ರಾಜ್ಯೋತ್ಸವ ಆಚರಣೆಗೆ ಅರ್ಥ ಬರುತ್ತದೆ ಎಂದು ಉಡುಪಿಯ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾ ಧಿಕಾರಿ ಪ್ರೊ.ಬಿ.ಜಗದೀಶ ಶೆಟ್ಟಿ ಅಭಿಪ್ರಾಯಪಟ್ಟರು.

ಕಾಂತಾವರ ಕನ್ನಡ ಸಂಘದಲ್ಲಿ ನಡೆದ ಕಾಂತಾವರ ಉತ್ಸವದಲ್ಲಿ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪಿ. ಜಯರಾಮ ಭಟ್, ಗಿರಿಧರ ಕಜೆ, ಡಾ. ಪ್ರಭಾಕರ ನೀರ್ಮಾರ್ಗ, ಶ್ರೀಧರ ಡಿ.ಎಸ್, ತಾಳ್ತಜೆ ಕೃಷ್ಣ ಭಟ್ಟ, ಆರ್.ಎನ್ ಭಿಡೆ, ಕೊ.ಅ. ಉಡುಪ, ಕ.ಪು.ಸೀತಾರಾಮ ಕೆದಿಲಾಯ, ಎಂ.ವಿ. ಭಟ್ ಮಧುರಂಗಾನ, ಎ.ನರಸಿಂಹ ಭಟ್ ಹಾಗೂ ಸಂಸ್ಕೃತಿ ಸಂವರ್ಧನ ಚಿಂತನ ಮಾಲೆಯಡಿ `ಸೇವಾ ತತ್ಪರ ಬಿ. ಭುಜಬಲಿ' ಕೃತಿಗಳು ಲೋಕಾರ್ಪಣೆಗೊಂಡವು.

ADVERTISEMENT

ದತ್ತಿನಿಧಿಗಳ ಸಾಹಿತ್ಯ ಪ್ರಶಸ್ತಿ ಪ್ರದಾನ: ಹರಿಹರ ಪುರದ ಪ್ರಬೋಧಿನಿ ಟ್ರಸ್ಟ್‌ಗೆ ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿ, ರಂಗಕರ್ಮಿ, ನಿವೃತ್ತ ಶಿಕ್ಷಕ ಹರ್ಷವರ್ಧನ ಹನುಮಂತರಾವ್ ಡಂಬಳ ಅವರಿಗೆ ಮಂಜನಬೈಲ್ ರಂಗ ಸಮ್ಮಾನ್, ಪತ್ರಕರ್ತ ಎನ್.ಗುರುರಾಜ್ ಅವರಿಗೆ ಪಾ.ವೆಂ.ಮಾಧ್ಯಮ ಪ್ರಶಸ್ತಿ, ನಿವೃತ್ತ ಶಿಕ್ಷಕ, ಯಕ್ಷಗಾನ ಪ್ರಸಂಗಕರ್ತ ಶ್ರೀಧರ ಡಿ.ಎಸ್. ಅವರಿಗೆ ಶ್ರೇಷ್ಠ ಶಿಕ್ಷಕ ಸೌರಭ ಪ್ರಶಸ್ತಿ, ನಿವೃತ್ತ ಪ್ರಾಧ್ಯ್ಯಾಪಕ ಪ್ರೊ. ಆರ್. ಶೇಷ ಶಾಸ್ತ್ರಿ ಅವರಿಗೆ ಪ್ರಾಧ್ಯ್ಯಾಪಕ ಸಂಶೋಧಕ ಪ್ರಶಸ್ತಿ ಹಾಗೂ ನಿವೃತ್ತ ಇತಿಹಾಸ ಪ್ರಾಧ್ಯಾಪಕ, ಸಂಶೋಧಕ, ಸಾಹಿತಿ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಅವರಿಗೆ ಕಾಂತಾವರ ಸಾಹಿತ್ಯ ಪ್ರಶಸ್ತಿ, ನಿವೃತ್ತ ಶಿಕ್ಷಕಿ ಡಾ. ವಾರಿಜಾ ಎನ್. ಅವರಿಗೆ ಮಹೋಪಾಧ್ಯಾಯ ಪ್ರಶಸ್ತಿ, ಪ್ರಾಧ್ಯಾಪಕ, ವಿಮರ್ಶಕ, ಬಹುಮುಖ ಪ್ರತಿಭೆಯ ಸುಭಾಷ್ ರಾಜಮಾನೆ ಅವರಿಗೆ ಕಾಂತಾವರ ಸಾಹಿತ್ಯ ವಿಮರ್ಶಾ ಪ್ರಶಸ್ತಿ, ತಂತ್ರಜ್ಞ, ಸಾಹಿತಿ ಕೆ. ಚಂದ್ರಮೌಳಿ ಅವರಿಗೆ ಕಾಂತಾವರ ಕನ್ನಡ ಸಂಘದ `ವಾರ್ಷಿಕ ಗೌರವ ಪ್ರಶಸ್ತಿ' ನೀಡಿ ಸಮ್ಮಾನಿಸಲಾಯಿತು.

ಡಾ. ರಾಜಗೋಪಾಲ ಮರಾಠೆ ಕೆ. ಅಭಿನಂದನಾ ಭಾಷಣ ಮಾಡಿದರು. ನಾಡಿಗೆ ನಮಸ್ಕಾರ ಗ್ರಂಥಮಾಲೆಯ ಸಂಪಾದಕ ಡಾ. ಬಿ. ಜನಾರ್ದನ ಭಟ್, ಸಮ್ಮಾನಿತರ ಪರವಾಗಿ ಪ್ರೊ.ಶೇಷಶಾಸ್ತ್ರಿ, ಎನ್.ಗುರುರಾಜ್ ಡಾ. ಪುಂಡಿಕಾಯಿ ಗಣಪಯ್ಯ ಭಟ್, ಕೃತಿಕಾರರ ಪೈಕಿ ಶ್ರೀನಿವಾಸ ದೇಶಪಾಂಡೆ, ಪ್ರಬೋಧಿನಿ ಟ್ರಸ್ಟ್‌ನ ಉಮೇಶ್ ರಾವ್, ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಗ್ರಂಥಮಾಲೆಯ ಸಂಪಾದಕ ಡಾ. ಬಿ. ಜನಾರ್ದನ ಭಟ್ ಮಾತನಾಡಿದರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು.

ಕೃತಿಕಾರ ಶ್ರೀನಿವಾಸ ದೇಶಪಾಂಡೆ, ಮೋಹನ ಭಾಸ್ಕರ ಹೆಗಡೆ, ಚೇತನ್ ಮುಂಡಾಜೆ, ಡಾ. ಪಾದೇಕಲ್ಲು ವಿಷ್ಣು ಭಟ್, ಬಾಲ ಮಧುರಕಾನನ, ಗಾಯತ್ರಿ ಉಡುಪರ ಪರವಾಗಿ ಸಚ್ಚಿದಾನಂದ ಉಡುಪ, ಮಿಥುನ್ ಕೊಡೆತ್ತೂರು ಅವರನ್ನು ಗೌರವಿಸಲಾಯಿತು. ನಾ.ಮೊಗಸಾಲೆ ಸ್ವಾಗತಿಸಿದರು. ಸದಾ ನಂದ ನಾರಾವಿ ನಿರೂಪಿಸಿದರು. ಸತೀಶ್ ಕುಮಾರ್ ಕೆಮ್ಮಣ್ಣು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.