
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿನಿಯರು ಸ್ವ ರಕ್ಷಣೆಯ ಕಲೆ ಕರಗತ ಮಾಡಿಕೊಂಡಿದ್ದಾರೆ. ಶಾಲೆಯಿಂದ ಮನೆಗೆ ತೆರಳುವ ವೇಳೆ ಅಕಸ್ಮಾತ್ ಯಾರಾದರೂ ಕಿರುಕುಳ ನೀಡಲು ಬಂದರೆ ಎದುರಾಳಿಗೆ ಪಂಚ್ ನೀಡುವಷ್ಟು ಆತ್ಮವಿಶ್ವಾಸ ಬೆಳೆಸಿಕೊಂಡಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕದ ಮೂಲಕ ‘ರಾಣಿ ಲಕ್ಷ್ಮಿಬಾಯಿ ಆತ್ಮರಕ್ಷಣಾ ಪ್ರಶಿಕ್ಷಣ’ ಕಾರ್ಯಕ್ರಮದಡಿ ಜಿಲ್ಲೆಯ 171 ಸರ್ಕಾರಿ ಪ್ರೌಢಶಾಲೆಯ 9,900 ಹೆಚ್ಚು ಹೆಣ್ಣು ಮಕ್ಕಳು ಮೂರು ತಿಂಗಳ ವಿಶೇಷ ಕರಾಟೆ ತರಬೇತಿ ಪಡೆದಿದ್ದಾರೆ.
ನವೆಂಬರ್‌ನಲ್ಲಿ ಆರಂಭವಾಗಿ ಮೂರು ತಿಂಗಳು ಎಲ್ಲ ಶಾಲೆಗಳಲ್ಲಿ ಈ ಕಾರ್ಯಕ್ರಮ ನಡೆದಿದೆ, ಕೆಲವು ಶಾಲೆಗಳಲ್ಲಿ ತರಬೇತಿ ಅಂತಿಮ ಹಂತದಲ್ಲಿದೆ. ಒಟ್ಟು 18 ಅವಧಿಯಲ್ಲಿ ತರಬೇತಿಗಳು ನಡೆದಿವೆ. 8ರಿಂದ 10ನೇ ತರಗತಿಯ ಹೆಣ್ಣು ಮಕ್ಕಳು ಈ ತರಬೇತಿಯ ಫಲಾನುಭವಿಗಳು.
ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಗಾಗಿ ಒಟ್ಟು 10 ಅವಧಿಗೆ ತರಬೇತಿ ನೀಡಲು ಈ ಹಿಂದೆ ರಾಜ್ಯ ಸರ್ಕಾರ ಪ್ರತಿ ಶಾಲೆಗೆ ತಲಾ ₹3 ಸಾವಿರ ಅನುದಾನ ನೀಡುತ್ತಿತ್ತು. ಈಗ ತರಬೇತಿ ಅವಧಿಯನ್ನು 18ಕ್ಕೆ ಹೆಚ್ಚಳ ಮಾಡಲಾಗಿದ್ದು, ಪ್ರತಿ ಶಾಲೆಗೆ ₹9 ಸಾವಿರ ಅನುದಾನ ದೊರೆಯುತ್ತಿದೆ. ಈ ಬಾರಿ ಜಿಲ್ಲೆಯ 171 ಸರ್ಕಾರಿ ಪ್ರೌಢಶಾಲೆಗಳಿಗೆ ಒಟ್ಟು ₹15.39 ಲಕ್ಷ ಅನುದಾನ ದೊರೆತಿದೆ.
‘ಕರಾಟೆ ಶಿಕ್ಷಕರನ್ನು ನೇಮಿಸಿಕೊಳ್ಳಲು ಆಯಾ ಶಾಲೆಯ ಶಿಕ್ಷಕರಿಗೆ ಅಧಿಕಾರ ನೀಡಲಾಗಿದೆ. ಸ್ಥಳೀಯವಾಗಿ ಲಭ್ಯರಿರುವ ಪರಿಣಿತರನ್ನೇ ನೇಮಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ. ಯಾರಾದರೂ ಆಕ್ರಮಣ ಮಾಡಿದರೆ ಅವರಿಂದ ತಪ್ಪಿಸಿಕೊಳ್ಳುವ ಫೇಸ್ ಪಂಚ್, ನೇರ ಪಂಚ್, ವಿರೋಧ ಪಂಚ್, ಮುನ್ನಡೆ ಪಂಚ್, ನೇರ ದಾಳಿ ಇಂತಹ ಕಲೆಯನ್ನು ಕಲಿಸಬೇಕು ಎಂದು ನಿರ್ದಿಷ್ಟವಾಗಿ ಕರಾಟೆ ತರಬೇತುದಾರರಿಗೆ ತಿಳಿಸಲಾಗುತ್ತದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
‘ನಮ್ಮ ಶಾಲೆಯಲ್ಲಿ ಈಗಾಗಲೇ ತರಬೇತಿ ಪೂರ್ಣಗೊಂಡಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ಸಿದ್ಧತೆಗೆ ಅನುಕೂಲವಾಗುವಂತೆ ಡಿಸೆಂಬರ್ ತಿಂಗಳ ಒಳಗಾಗಿ ತರಬೇತಿ ಮುಗಿಸಿದ್ದೇವೆ. ತರಬೇತಿಯಲ್ಲಿ ಪಡೆದ ಪ್ರಾಯೋಗಿಕ ಜ್ಞಾನ ಮರೆಯಬಾರದೆಂದು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರ ಮೂಲಕ ನಿರಂತರ ಅಭ್ಯಾಸ ಮಾಡಿಸಲಾಗುತ್ತದೆ. ತರಬೇತಿಯಿಂದ ಹೆಣ್ಣು ಮಕ್ಕಳಲ್ಲಿ ಮೂಡಿರುವ ಆತ್ಮವಿಶ್ವಾಸವನ್ನು ಗಮನಿಸಿದ್ದೇನೆ’ ಎಂದು ಮಂಗಳೂರು ತಾಲ್ಲೂಕು ಮುತ್ತೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಮುಖ್ಯ ಶಿಕ್ಷಕಿ ಪ್ರಮೀಳಾ ಪ್ರತಿಕ್ರಿಯಿಸಿದರು.
ಸ್ವ ರಕ್ಷಣೆಗಾಗಿ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಲಾಗುತ್ತಿದ್ದು ಪಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನುರಿತ ಕರಾಟೆ ಶಿಕ್ಷಕರಿಂದಲೇ ತರಬೇತಿ ಒದಗಿಸಲಾಗುತ್ತದೆ.ಜಿ.ಎಸ್. ಶಶಿಧರ್, ಡಿಡಿಪಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.