ADVERTISEMENT

ಕರ್ಣಾಟಕ ಬ್ಯಾಂಕ್‌ : 3ನೇ ತ್ರೈಮಾಸಿಕದಲ್ಲಿ ₹1.81 ಲಕ್ಷ ಕೋಟಿ ವಹಿವಾಟು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 0:30 IST
Last Updated 11 ಫೆಬ್ರುವರಿ 2026, 0:30 IST
ಕರ್ಣಾಟಕ ಬ್ಯಾಂಕ್‌
ಕರ್ಣಾಟಕ ಬ್ಯಾಂಕ್‌   

ಮಂಗಳೂರು: ಕರ್ಣಾಟಕ ಬ್ಯಾಂಕ್‌ 2025ರ ಡಿ.31ಕ್ಕೆ ಅಂತ್ಯಗೊಂಡ ಮೂರನೇ ತ್ರೈಮಾಸಿಕದಲ್ಲಿ ₹ 1,81,394.37 ಕೋಟಿ ವಹಿವಾಟು ದಾಖಲಿಸಿದೆ. ಎರಡನೇ ತ್ರೈಮಾಸಿಕಕ್ಕೆ (₹1.76 ಲಕ್ಷ ಕೋಟಿ) ಹೋಲಿಸಿದರೆ ಒಟ್ಟು ವಹಿವಾಟು ಶೇ 3ರಷ್ಟು ಹೆಚ್ಚಾಗಿದೆ.

ಬ್ಯಾಂಕಿನ ಆಡಳಿತ ಮಂಡಳಿ ಸಭೆ ಇಲ್ಲಿ ಮಂಗಳವಾರ ನಡೆದಿದ್ದು, ಮೂರನೇ ತ್ರೈಮಾಸಿಕ ಹಾಗೂ 2025–26ನೇ ಆರ್ಥಿಕ ವರ್ಷದ ಮೊದಲ 9 ತಿಂಗಳ ಹಣಕಾಸು ಫಲಿತಾಂಶಗಳಿಗೆ ಅನುಮೋದನೆ ನೀಡಲಾಯಿತು. 

ಬ್ಯಾಂಕ್‌ ನೀಡಿರುವ ಒಟ್ಟು ಸಾಲದ ಮೊತ್ತ ₹77,282.85 ಕೋಟಿಗಳಷ್ಟಾಗಿದೆ. ಮೂರನೇ ತ್ರೈಮಾಸಿಕದಲ್ಲಿ ಸಾಲ ನೀಡುವಿಕೆ ಶೇ 4.9ರಷ್ಟು ಹೆಚ್ಚಳವಾಗಿದೆ. ಒಟ್ಟು ಠೇವಣಿಯು ₹1,04,111.52 ಕೋಟಿಗಳಷ್ಟಾಗಿದ್ದು, ಮೂರನೇ ತ್ರೈಮಾಸಿಕದಲ್ಲಿ ಠೇವಣಿ ಪ್ರಮಾಣ ಶೇ 1.3ರಷ್ಟು ಹೆಚ್ಚಳವಾಗಿದೆ.

ADVERTISEMENT

2025–26ನೇ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ₹ 319.12 ಕೋಟಿ ನಿವ್ವಳ ಲಾಭ ಗಳಿಸಿದ್ದ ಬ್ಯಾಂಕ್‌, ಮೂರನೇ ತ್ರೈಮಾಸಿಕದಲ್ಲಿ ₹ 290.79 ಕೋಟಿ ನಿವ್ವಳ ಲಾಭ ಗಳಿಸಿದೆ. 2024–25ನೇ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಬ್ಯಾಂಕ್ ₹ 283.60 ಕೋಟಿ ನಿವ್ವಳ ಲಾಭ ಗಳಿಸಿತ್ತು. 

ಬ್ಯಾಂಕಿನ ಒಟ್ಟು ಅನುತ್ಪಾದಕ ಆಸ್ತಿ ಶೇ 3.32ಕ್ಕೆ ಇಳಿಕೆಯಾಗಿದೆ. ಇದು ಎರಡನೇ ತ್ರೈಮಾಸಿಕದ ಅಂತ್ಯಕ್ಕೆ ಶೇ 3.33ರಷ್ಟಿತ್ತು. ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ (ಶೇ 1.35) ನಿವ್ವಳ ಅನುತ್ಪಾದಕ ಆಸ್ತಿ ಪ್ರಯಾಣವು ಶೇ 1.31ಕ್ಕೆ ಇಳಿಕೆಯಾಗಿದೆ ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.