ಪ್ರಾತಿನಿಧಿಕ ಚಿತ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರವೂ ಧಾರಾಕಾರ ಮಳೆ ಮುಂದುವರಿದಿದ್ದು ಬಂಟ್ವಾಳ ತಾಲ್ಲೂಕಿನ ಪುದು ಕೇಂದ್ರದಲ್ಲಿ ರಾಜ್ಯದಲ್ಲೇ ಅತ್ಯಧಿಕ ಮಳೆ ದಾಖಲಾಗಿದೆ. ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಪುದುವಿನಲ್ಲಿ 18.95 ಸೆಂ.ಮೀ ಮಳೆ ದಾಖಲಾಗಿರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಜಿಲ್ಲೆಯ 34 ಕೇಂದ್ರಗಳಲ್ಲಿ 10 ಸೆಂ.ಮೀಗಿಂತ ಮಳೆಯಾಗಿದೆ ಎಂದು ತಿಳಿಸಲಾಗಿದೆ.
ಮಂಗಳೂರು ತಾಲ್ಲೂಕಿನ ನೀರುಮಾರ್ತದಲ್ಲಿ 18.5 ಸೆಂ.ಮೀ. ಬಂಟ್ವಾಳ ತಾಲ್ಲೂಕಿನ ಮೇರಮಜಲುವಿನಲ್ಲಿ 17.4 ಸೆಂ.ಮೀ, ಮಂಗಳೂರು ತಾಲ್ಲೂಕಿನ ಬಾಳದಲ್ಲಿ 16.55 ಸೆಂ.ಮೀ, ಬೆಳ್ತಂಗಡಿ ತಾಲ್ಲೂಕಿನ ಪಟ್ರಮೆಯಲ್ಲಿ 16.25 ಸೆಂ.ಮೀ, ಬಂಟ್ವಾಳ ತಾಲ್ಲೂಕಿನ ಅಮ್ಟಾಡಿಯಲ್ಲಿ 15.95 ಸೆಂ.ಮೀ, ಬಡಗಬೆಳ್ಳೂರಿನಲ್ಲಿ 15 ಸೆಂ.ಮೀ, ಸರಪಾಡಿಯಲ್ಲಿ 14.95 ಸೆಂ.ಮೀ, ಬೆಳ್ತಂಗಡಿ ತಾಲ್ಲೂಕಿನ ಮಚ್ಚಿನದಲ್ಲಿ 14.9 ಸೆಂ.ಮೀ, ಬಂಟ್ವಾಳ ತಾಲ್ಲೂಕಿನ ಕಾವಳಪಡೂರಿನಲ್ಲಿ 14.75 ಸೆಂ.ಮೀ ಹಾಗೂ ಕಾವಳಮೂಡೂರಿನಲ್ಲಿ 14.35 ಸೆಂ.ಮೀ ಮಳೆಯಾಗಿದೆ. ಪುತ್ತೂರಿನ ಕೆದಂಬಾಡಿಯಲ್ಲಿ ಜಿಲ್ಲೆಯಲ್ಲೇ ಅತಿ ಕಡಿಮೆ, 4.5 ಸೆಂ.ಮೀ ಮಳೆಯಾಗಿದೆ.
ಮುಂದುವರಿದ ಅನಾಹುತ
ಶನಿವಾರ ಮಧ್ಯಾಹ್ನದ ನಂತರ ಸುರಿದ ಭಾರಿ ಮಳೆಯಿಂದ ಜಿಲ್ಲೆಯ ಅನೇಕ ಕಡೆಗಳಲ್ಲಿ ಅಪಾರ ನಾಶ ನಷ್ಟ ಉಂಟಾಗಿದೆ. ವಿವಿಧ ಕಡೆಗಳಲ್ಲಿ ಗೋಡೆ ಕುಸಿತವಾಗಿದ್ದು ಮಂಗಳೂರು–ಮೂಡುಬಿದಿರೆ ರಾಜ್ಯ ಹೆದ್ದಾರಿಯ ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿದ ಕಾರಣ ಒಂದೇ ಬದಿಯಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ.
ಮಂಗಳೂರು ನಗರದಲ್ಲಿ ಶನಿವಾರ ರಾತ್ರಿಯೂ ಮಳೆ ಮುಂದುವರಿದಿದ್ದು ಭಾನುವಾರ ಇಡೀ ದಿನ ಮುಸಲಧಾರೆಯಾಗಿದೆ. ಹಲವು ರಸ್ತೆಗಳಲ್ಲಿ ನೀರು ನಿಂತಿದ್ದು ಮನೆಗಳಿಗೂ ನೀರು ನುಗ್ಗಿದೆ.
ನಗರದ ಶಿವಭಾಗ್‌ನಲ್ಲಿರುವ ಸುಂದರಿ ಅಪಾರ್ಟ್‌ಮೆಂಟ್ ಹಿಂದಿನ ಆವರಣ ಗೋಡೆ ಕುಸಿದಿದ್ದು ಗೋಡೆಯ ಆಚೆ ಬದಿಯಲ್ಲಿ ಒಂಟಿ ಮನೆಯಲ್ಲಿ ವಾಸವಾಗಿದ್ದ ಕುಟುಂಬವನ್ನು ಜೋಡುಕಟ್ಟೆಯ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.